ಬೆಳಗಾವಿ ಜಿಲ್ಲೆಯಲ್ಲಿ ಜಲಪ್ರಳಯ ಭೀತಿ

ಈ ಸುದ್ದಿಯನ್ನು ಶೇರ್ ಮಾಡಿ

Rain

ಬೆಳಗಾವಿ, ಆ.8-ನೆರೆಯ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಪರಿಣಾಮ ಜಿಲ್ಲೆಯ ಕೃಷ್ಣಾ, ವೇದಗಂಗಾ, ದೂದ್‍ಗಂಗಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿಯ ತೀರದ ಗ್ರಾಮಗಳು ಜಲಪ್ರಳಯದಿಂದ ತತ್ತರಿಸಿವೆ.  ಕೃಷ್ಣಾ ನದಿಪಾತ್ರದ ಸುಮಾರು ಆರು ಸಾವಿರ ಹೆಕ್ಟೇರ್ ಪ್ರದೇಶ ಜಲಾವೃತಗೊಂಡು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕೃಷ್ಣಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಒಳಹರಿವು 1.75 ಲಕ್ಷ ಕ್ಯೂಸೆಕ್ಸ್‍ನಷ್ಟು ಒಳಹರಿವು ಇದ್ದು, 2 ಲಕ್ಷ ಕ್ಯೂಸೆಕ್ಸ್ ಮೀರಿದರೆ ಅಪಾಯ ಖಚಿತ ಎಂದು ಅಧಿಕಾರಿಗಳು ಹೇಳಿದ್ದಾರೆ.   ದೂದ್‍ಗಂಗಾ ನದಿ ಕಳೆದ ಒಂದು ರಾತ್ರಿಯಲ್ಲಿಯೇ ಒಂದೂವರೆ ಅಡಿ ಪ್ರಮಾಣದ ನೀರು ಏರಿಕೆಯಾಗಿದೆ. ಚಿಕ್ಕೋಡಿ ತಾಲೂಕಿನಾದ್ಯಂತ 8 ದೇವಸ್ಥಾನಗಳು ನೀರಿನಲ್ಲಿ ಮುಳುಗಡೆಯಾಗಿದ್ದು, 5 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು, ಸೋಯಾ, ಶೇಂಗಾ ಬೆಳೆಗಳು ನಾಶವಾಗಿವೆ.  ಹಿಪ್ಪರಗಿ ಜಲಾಶಯದಿಂದ 2 ಲಕ್ಷ 8 ಸಾವಿರ ಕ್ಯೂಸೆಕ್ಸ್ ನೀರನ್ನು ಆಲಮಟ್ಟಿಗೆ ಬಿಡುಗಡೆ ಮಾಡಲಾಗುತ್ತಿದೆ.
ಕೃಷ್ಣೆಯ ಪ್ರವಾಹದಿಂದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ 12 ಸೇತುವೆಗಳು ಮುಳುಗಡೆಯಾಗಿವೆ. ರಾಯಭಾಗ ತಾಲೂಕಿನ 3 ಸೇತುವೆಗಳು, ಅಥಣಿ ತಾಲೂಕಿನ 1 ಸೇತುವೆ ಜಲಾವೃತಗೊಂಡಿವೆ.   ರಾಯಭಾಗ ತಾಲೂಕಿನ ಹಳೆದಿಗ್ಗೆವಾಡಿ ಗ್ರಾಮದ ದೇವಸ್ಥಾನ ಸಂಪೂರ್ಣವಾಗಿ ಮುಳುಗಡೆಯಾಗಿದೆ. ನದಿ ತೀರದ ಗ್ರಾಮಗಳೆಲ್ಲ ಜಲಾವೃತವಾಗಿವೆ. ಕೃಷ್ಣೆಯ ಅಬ್ಬರ ಹೆಚ್ಚಾಗುತ್ತಿದ್ದಂತೆ ಜಿಲ್ಲಾಧಿಕಾರಿ  ಎನ್.ಜಯರಾಮ್ ನೇತೃತ್ವದಲ್ಲಿ ಅಧಿಕಾರಿಗಳ ತುರ್ತುಸಭೆ ನಡೆಸಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸೂಚನೆ ನೀಡಿದ್ದಾರೆ.  ನೀರಿನ ಪ್ರವಾಹ ಕಡಿಮೆಯಾದ ಮೇಲೆ ಬೆಳೆಹಾನಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ನದಿ ತೀರದ ಗ್ರಾಮಗಳಲ್ಲಿ ನೀರು ನಿಂತಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು, ಮುಂಜಾಗ್ತಾ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಜಯರಾಂ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin