ಬೆಳ್ಳಂದೂರು ಕೆರೆಯಲ್ಲಿ ರಾಶಿ ರಾಶಿ ನೊರೆ : ಸಾಂಕ್ರಾಮಿಕ ರೋಗದ ಭೀತಿ

ಈ ಸುದ್ದಿಯನ್ನು ಶೇರ್ ಮಾಡಿ

Bellandur--014

ಬೆಂಗಳೂರು, ಆ.16-ಕಳೆದ ಎರಡು ದಿನ ಬೆಂಗಳೂರು ನಗರದಲ್ಲಿ ಸುರಿದ ಶತಮಾನದ ದಾಖಲೆ ಮಳೆಗೆ ಇಲ್ಲಿನ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೃಹತ್ ಹಿಮರಾಶಿಯಂತೆ ನೊರೆ ಸಂಗ್ರಹವಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು ವಾಂತಿ, ಭೇದಿ, ವಿಷಮಶೀತ ಜ್ವರದಂತಹ ಸಾಂಕ್ರಾಮಿಕ ರೋಗಗಳಿಗೆ ಗುರಿಯಾಗುವ ಭೀತಿ ಎದುರಾಗಿದೆ. ಉದ್ಯಾನನಗರಿಯಲ್ಲಿ ಭಾರೀ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ.
ಕಟ್ಟಡವೊಂದು ಕುಸಿದು ಬೀಳುವ ಆತಂಕ ಸೃಷ್ಟಿಸಿದ್ದರೆ, ಇತ್ತ ಬೆಳ್ಳಂದೂರು ಕೆರೆಯ ಯಮಲೂರು ಕೋಡಿಯಲ್ಲಿ ಉಂಟಾಗಿರುವ ಭಾರೀ ನೊರೆ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಬೆಳ್ಳಂದೂರು ಕೆರೆಯ ನೊರೆ ಆಚೆ ಬಾರದಂತೆ 20 ಅಡಿ ಎತ್ತರದ ಕಬ್ಬಿಣ ಮೆಸ್ ಅಳವಡಿಸಲಾಗಿದ್ದರೂ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ನೀರಿನ ಹರಿವು ಹೆಚ್ಚಾಗಿದ್ದರಿಂದ ಬಿಳಿ ಮೋಡಗಳಂತೆ ನೊರೆ ಶೇಖರಣೆಯಾಗಿದೆ.

ಕೆಲವೊಮ್ಮೆ ಜೋರಾಗಿ ಗಾಳಿ ಬೀಸಿದಾಗ ನೊರೆ ರಸ್ತೆಗೆಲ್ಲಾ ಹಾರಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರು ನೊರೆಯಲ್ಲಿ ಸ್ನಾನ ಮಾಡುವ ಪರಿಸ್ಥಿತಿ ಉಂಟಾಗಿದೆ. ಬೆಳ್ಳಂದೂರು ಕೋಡಿ, ಯಮಲೂರು ಹಾಗೂ ವರ್ತೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ದುರ್ವಾಸನೆ ಬೀರುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಮೊದಲೇ ನಗರದಲ್ಲಿ ಡೇಂಘಿ, ಚಿಕೂನ್‍ಗುನ್ಯಾ ಪ್ರಕರಣಗಳು ಹೆಚ್ಚಾಗಿದ್ದು, ಈಗ ಇದು ಮತ್ತಷ್ಟು ಉಲ್ಬಣಗೊಳ್ಳುವ ಆತಂಕ ಎದುರಾಗಿದೆ. ಮಳೆ ಮುಂದುವರೆದರೆ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ.

Facebook Comments

Sri Raghav

Admin