ಬೆಳ್ಳಂದೂರು ನಿರ್ಮಾಣ ಹಂತದ ಕಟ್ಟಡ ಕುಸಿತ : ಸಾವಿನ ಸಂಖ್ಯೆ ಮೂರಕ್ಕೇರಿಕೆ
ಬೆಂಗಳೂರು ಅ.06 : ನಗರದ ಬೆಳ್ಳಂದೂರು ಸಮೀಪ ನಿರ್ಮಾಣ ಹಂತದ ಐದಂತಸ್ತಿನ ಕಟ್ಟಡ ಕಳಪೆ ಕಾಮಗಾರಿಯಿಂದಾಗಿ ಬುಧವಾರ ಕುಸಿದು ಬಿದ್ದು ಮೂವರು ಮೃತಪಟ್ಟಿದ್ದಾರೆ. ಸತ್ತವರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ನಿನ್ನೆ ಇಬ್ಬರ ಶವವನ್ನು ಹೊರತೆಗೆದಿದ್ದ ರಕ್ಷಣಾ ಪಡೆ ಸಿಬ್ಬಂದಿ ಇವತ್ತು ಬೆಳಗಿನ ಜಾವ 4 ಗಂಟೆಗೆ ಮತ್ತೊಂದು ಶವ ಹೊರತೆಗೆದಿದ್ದಾರೆ. ಒಡಿಶಾ ಮೂಲದ ಸೆಕ್ಯೂರಿಟಿ ಗಾರ್ಡ್ ಅಶೋಕ್ ಮಹಾಂತ(27) ಕಾರ್ಮಿಕರಾದ ಆಂಧ್ರಪ್ರದೇಶ ಮೂಲದ ರಹಾದೆ(22) ಹಾಗೂ ರಾಮ್ಬಾಬು(22) ಮೃತಪಟ್ಟಿರುವವರು. ಮತ್ತೋರ್ವ ಕಾರ್ಮಿಕ ಸಮೀರ್ ಸ್ಥಿತಿ ಗಂಭೀರವಾಗಿದ್ದು, ಸಾಕ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಸಮೀರ್ ಸೇರಿ ಐವರು ಕಾರ್ಮಿಕರು ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಟಾಟಾ ಸುಮೋ ಕಾರನ್ನೂ ಹೊರಕ್ಕೆ ತೆಗೆಯಲಾಗಿದೆ.
ಕಟ್ಟಡದ ಅವಶೇಷಗಳಡಿ ಮತ್ತಿಬ್ಬರು ಕಾರ್ಮಿಕರು ಸಿಲುಕಿರುವ ಶಂಕೆಯಿದೆ. ಹೀಗಾಗಿ ಅಗ್ನಿಶಾಮಕದಳ, ಎನ್ಡಿಆರ್ಎಫ್ ಪಡೆ ಹಾಗೂ ಬಿಬಿಎಂಪಿ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಮುಂದುವರೆದಿದೆ. ರಾತ್ರಿಯಿಡೀ ಜೆಸಿಬಿಗಳ ಘರ್ಜನೆಗೆ ಹೆದರಿದ ಅಕ್ಕಪಕ್ಕದ ಜನ ಮನೆಬಿಟ್ಟು ಬೇರೆಡೆಗೆ ಸ್ಥಳಾಂತರವಾಗಿದ್ದಾರೆ. ಫಿಲ್ಟರ್ ಮರಳು ಬಳಸಿದ್ದು ಜೊತೆಗೆ 3 ಅಂತಸ್ತಿಗೆ ಅನುಮತಿ ಪಡೆದು 5 ಅಂತಸ್ತು ಕಟ್ಟಡ ಕಟ್ಟಿದ್ದೇ ಈ ದುರಂತಕ್ಕೆ ಕಾರಣ ಅಂತ ಗೊತ್ತಾಗಿದೆ. ಕಟ್ಟಡದ ಮಾಲೀಕರು, ಎಂಜಿನಿಯರ್ಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.
► Follow us on – Facebook / Twitter / Google+