ಬೆಳ್ಳಂಬೆಳಗ್ಗೆ ಮೂವರು ಮಹಿಳೆಯರ ಸರ ಅಪಹರಣ
ಮೈಸೂರು, ಸೆ.10- ಬೆಳ್ಳಂಬೆಳಗ್ಗೆ ಮನೆ ಮುಂದೆ ರಂಗೋಲಿ ಹಾಕುವ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಪಲ್ಸರ್ ಬೈಕ್ನಲ್ಲಿ ಬಂದ ಸರಗಳ್ಳರು ಮೂರು ಕಡೆ ಮೂವರು ಮಹಿಳೆಯರ ಗಮನ ಸೆಳೆದು ಸರಗಳನ್ನು ಎಗರಿಸಿರುವುದು ವರದಿಯಾಗಿದೆ.ಕುವೆಂಪು ನಗರ ಹಾಗೂ ಸರಸ್ವತಿಪುರಂ ವ್ಯಾಪ್ತಿಗಳಲ್ಲಿ ಇಬ್ಬರು ಮಹಿಳೆಯರಿಗೆ ಟೀಚರ್ ಮನೆಯ ವಿಳಾಸ ಕೇಳುವ ನೆಪದಲ್ಲಿ ಗಮನ ಸೆಳೆದು ಸರ ಎಗರಿಸಿದರೆ ವಿವಿ ಪುರಂ ವ್ಯಾಪ್ತಿಯಲ್ಲಿ ಅಂಗಡಿಯಲ್ಲಿದ್ದ ವೃದ್ಧೆಯ ಗಮನ ಸೆಳೆದು ಸರ ಎಗರಿಸಿದ್ದಾರೆ.ಕುವೆಂಪುನಗರ ವ್ಯಾಪ್ತಿ: ದಟ್ಟಗಳ್ಳಿಯ 7ನೆ ಕ್ರಾಸ್ ಎಂ ಬ್ಲಾಕ್ ನಿವಾಸಿ ಶಿವಣ್ಣ ಎಂಬುವರ ಪತ್ನಿ ಚಿಕ್ಕಮ್ಮ (50) ಎಂಬುವರು ಇಂದು ಬೆಳಗ್ಗೆ 6.30ರಲ್ಲಿ ಮನೆ ಮುಂದೆ ರಂಗೋಲಿ ಹಾಕುತ್ತಿದ್ದಾಗ ಕಪ್ಪು ಬಣ್ಣದ ಪಲ್ಸರ್ ಬೈಕ್ನಲ್ಲಿ ಬಂದ ಇಬ್ಬರು ಸರಗಳ್ಳರು ಟೀಚರ್ ಮನೆ ಎಲ್ಲಿ ಎಂದು ಕೇಳಿದ್ದಾರೆ.
ಚಿಕ್ಕಮ್ಮ ತಿರುಗುವಷ್ಟರಲ್ಲಿ ಹಿಂಬದಿ ಸವಾರ ಅವರ ಕೊರಳಲ್ಲಿದ್ದ 50 ಗ್ರಾಂ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದಾರೆ. ಸರಸ್ವತಿಪುರಂ ವ್ಯಾಪ್ತಿ: ಶಾರದಾದೇವಿ ನಗರದಲ್ಲಿರುವ ರಿಕ್ರಿಯಿಷೇನ್ ಕ್ಲಬ್ ಸಮೀಪದ ನಿವಾಸಿ ಕಂಟ್ರಾಕ್ಟರ್ ಕುಮಾರಸ್ವಾಮಿ ಎಂಬುವರ ಪತ್ನಿ ಮೋಹನ್ಕುಮಾರಿ (32) ಎಂಬುವರು ಇಂದು ಬೆಳಗ್ಗೆ 7.10ರಲ್ಲಿ ಮನೆ ಮುಂದೆ ರಂಗೋಲಿ ಹಾಕುತ್ತಿದ್ದಾಗ ಕಪ್ಪು ಬಣ್ಣದ ಪಲ್ಸರ್ ಬೈಕ್ನಲ್ಲಿ ಇಬ್ಬರು ಸರಗಳ್ಳರು ಇವರ ಸಮೀಪ ಬಂದು ಟೀಚರ್ ಮನೆ ಎಲ್ಲಿ ಎಂದು ಕೇಳಿದ್ದಾರೆ. ಮೋಹನ್ಕುಮಾರಿಯವರು ವಿಳಾಸ ಹೇಳಲು ತಿರುಗುತ್ತಿದ್ದಂತೆ ಇವರ ಕೊರಳಲ್ಲಿದ್ದ 70 ಗ್ರಾಂ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದಾರೆ.
ವಿವಿ ಪುರಂ ವ್ಯಾಪ್ತಿ:
ಗೋಕುಲಂ 7ನೆ ಕ್ರಾಸ್ನಲ್ಲಿ ವೃದ್ಧೆ ಚೈತನ್ಯ (68) ಎಂಬುವರಿಗೆ ಸೇರಿದ ಪ್ರಾವಿಜನ್ ಸ್ಟೋರ್ ಇದ್ದು, ಇದರ ಪಕ್ಕ ಯೋಗ ಸೆಂಟರ್ ಇದೆ. ಇಲ್ಲಿ ಮುಂಜಾನೆಯೇ ಯೋಗಾಭ್ಯಾಸ ಮಾಡಲು ಬರುವ ಕೆಲವರು ಈ ಪ್ರಾವಿಜನ್ ಸ್ಟೋರ್ನಲ್ಲಿ ಜ್ಯೂಸ್ ಬಾಟಲ್, ಬಾದಾಮಿ ಹಾಲು ಕೊಳ್ಳಲು ಬರುತ್ತಾರೆ. ಹಾಗಾಗಿ ಚೈತನ್ಯ ಅವರು ಅಂಗಡಿಯನ್ನು ಮುಂಜಾನೆಯೇ ತೆಗೆದು ವ್ಯಾಪಾರ ಮಾಡುತ್ತಿದ್ದರು. ಇಂದು ಬೆಳಗ್ಗೆ 7.40ರಲ್ಲಿ ಪಲ್ಸರ್ ಬೈಕ್ನಲ್ಲಿ ಬಂದ ಇಬ್ಬರು ಇವರ ಅಂಗಡಿ ಮುಂದೆ ನಿಲ್ಲಿಸಿ ಬಾದಾಮಿ ಹಾಲು ಕೇಳಿದ್ದಾರೆ. ಬಾದಾಮಿ ಹಾಲು ಕೊಡಲು ತಿರುಗುತ್ತಿದ್ದಂತೆ ಅವರ ಕೊರಳಲ್ಲಿದ್ದ 20 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾರೆ.
ಈ ಮೂರೂ ಘಟನೆಗಳು ಬೆಳಗ್ಗೆ 6.30 ರಿಂದ 7.40ರೊಳಗೆ ನಡೆದಿದ್ದು, ಪಲ್ಸರ್ ಬೈಕ್ನಲ್ಲಿ ಬಂದ ಈ ಇಬ್ಬರೇ ಮೂರೂ ಕಡೆ ಸರ ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ. ಬೆಳ್ಳಂಬೆಳಗ್ಗೆ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಸರ ಎಗರಿಸಿದ ಸುದ್ದಿ ತಿಳಿಯುತ್ತಿದ್ದಂತೆ ಮಹಿಳೆಯರು ಆತಂಕಗೊಂಡಿದ್ದಾರೆ. ಆಯಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಪ್ಪು ಬಣ್ಣದ ಪಲ್ಸರ್ ಹಾಗೂ ಸರಗಳ್ಳರಿಗಾಗಿ ತನಿಖೆ ಮುಂದುವರಿಸಿದ್ದಾರೆ.
► Follow us on – Facebook / Twitter / Google+