ಬೆಳ್ಳಂ ಬೆಳಗ್ಗೆ ರಾಜ್ಯದ ವಿವಿಧೆಡೆ ಸರ್ಕಾರಿ ಅಧಿಕಾರಿಗಳ ಮನೆ , ಕಚೇರಿ ಮೇಲೆ ಎಸಿಬಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ACB

ಬೆಂಗಳೂರು, ಏ.27- ಬೆಳ್ಳಂ ಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ರಾಜ್ಯದ ವಿವಿಧೆಡೆ ಸರ್ಕಾರಿ ಅಧಿಕಾರಿಗಳ ಮನೆ , ಕಚೇರಿ ಹಾಗೂ ಇತರೆಡೆ ದಾಳಿ ನಡೆಸಿ ಹಲವು ಅಕ್ರಮ ಸಂಪಾದನೆಯನ್ನು ಪತ್ತೆ ಹಚ್ಚಿದ್ದಾರೆ. ಚಿತ್ರದುರ್ಗ, ಬಾಗಲಕೋಟೆ, ಕೋಲಾರ ಸೇರಿದಂತೆ ಇತರೆಡೆ ಏಕ ಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿತ್ರದುರ್ಗ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀಪತಿ ಅವರ ಕಮನಬಾವಿ ಬಡಾವಣೆಯಲ್ಲಿರುವ ಮನೆ ಹಾಗೂ ಚಳ್ಳಕೆರೆ ತಾಲ್ಲೂಕಿನ ಮನಮೈನ ಹಟ್ಟಿ ಗ್ರಾಮದಲ್ಲಿರುವ ಮನೆ ಹಾಗೂ ಪಟ್ಟಣದಲ್ಲಿರುವ ಕಚೇರಿಯಲ್ಲಿ ಎಸಿಬಿ ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಅಧಿಕಾರಿಗಳು ತಪಾಸಣೆ ಕಾರ್ಯ ಕೈಗೊಂಡಿದ್ದು , ಹಲವೆಡೆ ಇರುವ ನಿವೇಶನ , ಕೃಷಿ ಜಮೀನು ಹಾಗೂ ವಿವಿಧ ಬ್ಯಾಂಕ್‍ಗಳಲ್ಲಿ ಇಟ್ಟಿದ್ದ ಠೇವಣಿ, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಾಗಲಕೋಟೆಯಲ್ಲಿ ಕಂದಾಯ ನಿರೀಕ್ಷಕ ಸಂಗಪ್ಪ ಸೂಡಿ ಅವರ ಮಹಾಲಂಗಿಪುರ ದಲ್ಲಿರುವ ಮನೆ ಹಾಗೂ ಮುಧೋಳದಲ್ಲಿರುವ ಅವರ ಕಚೇರಿಯಲ್ಲಿ ಕಡತಗಳನ್ನು ಪರಿಶೀಲಿಸಲಾಗಿದೆ. ಎಸ್ಪಿ ಅಮರನಾಥ ರೆಡ್ಡಿ ಹಾಗೂ ಡಿವೈಎಸ್ಪಿ ಮಲ್ಲೇಶ ಮಹಾಮನಿ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು , ಹಲವು ಚರಾಚರ ಆಸ್ತಿಗಳ ದಾಖಲೆಗಳು ಪತ್ತೆಯಾಗಿದೆ. ಕೋಲಾರದ ಶ್ರೀನಿವಾಸಪುರ ತಾಲ್ಲೂಕಿನ ಪ್ರಥಮ ದರ್ಜೆ ಸಹಾಯಕ ಮುನಿ ವೆಂಕಟಪ್ಪ ಅವರು ಅಕ್ರಮ ಆಸ್ತಿ ಗಳಿಕೆ ಹಾಗೂ ಆದಾಯಕ್ಕೆ ಮೀರಿ ಆಸ್ತಿ ಗಳಿಕೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಎಸಿಬಿ ದಾಳಿ ನಡೆಸಿದೆ.

ಮುಳಬಾಗಿಲಿನಲ್ಲಿನ ಮುತ್ಯಾಲಪೇಟೆಯಲ್ಲಿರುವ ಮನೆ, ಪಲ್ಲ ಶೆಟ್ಟಿ ಹಳ್ಳಿಯಲ್ಲಿರುವ ಫಾರಂ ಹೌಸ್ ಹಾಗೂ ಕಚೇರಿಯ ಮೇಲೆ ಇಂದು ಬೆಳಗ್ಗೆ 6 ಗಂಟೆಯಲ್ಲಿ ಏಕ ಕಾಲದಲ್ಲಿ ದಾಳಿ ನಡೆದಿದ್ದು , ಇಲ್ಲಿ ಭಾರೀ ಪ್ರಮಾಣದ ಚಿನ್ನಾಭರಣ ಹಾಗೂ ಬೆಂಗಳೂರು ಸೇರಿದಂತೆ ಇತರೆಡೆ ಇರುವ ನಿವೇಶನಗಳ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಡಿವೈಎಸ್ಪಿಗಳಾದ ಮೋಹನ್, ಕೋದಂಡರಾಮಯ್ಯ ಮತ್ತು ಪ್ರಸಾದ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

Facebook Comments

Sri Raghav

Admin