ಬೆಳ್ಳಂ ಬೆಳಿಗ್ಗೆ ಭ್ರಷ್ಟರ ಬೇಟೆ : ರಾಜ್ಯದ 5 ಕಡೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Lokayuka-1

ಬೆಂಗಳೂರು, ಆ.23- ತಟಸ್ಥವಾಗಿದ್ದಂತೆ ಕಂಡು ಬಂದಿದ್ದ ಲೋಕಾಯುಕ್ತ ದಿಢೀರನೆ ರಾಜ್ಯದ ಹಲವೆಡೆ ಇಂದು ಬೆಳಗ್ಗೆ ಕಾರ್ಯಾಚರಣೆಗಿಳಿದಿದೆ.  ಅಧಿಕಾರಿಗಳನ್ನು ಬೇಟೆಯಾಡುವ ಬದಲು ಈಗ ಆರ್ಟಿಒ ಚೆಕ್ಪೋಸ್ಟ್ ಹಾಗೂ ರಾಜ್ಯ ವಾಣಿಜ್ಯ ತೆರಿಗೆ ಟೋಲ್ಗಳನ್ನು ಟಾರ್ಗೆಟ್ ಮಾಡಿ ಅಕ್ರಮ ವಸೂಲಿ ದಂಧೆಯನ್ನು ಬಯಲಿಗೆಳೆದಿದೆ.  ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ ಮತ್ತಿತರೆಡೆ ಈ ದಾಳಿ ನಡೆದಿದೆ. ವಿಶೇಷವೆಂದರೆ ಆರ್ಟಿಒ ಇನ್ಸ್ಪೆಕ್ಟರ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
Lokayuka-2

ಕೋಲಾರ ವರದಿ:

ಇಂದು ಬೆಳಗ್ಗೆ 5.30ರ ಸಂದರ್ಭದಲ್ಲಿ ಡಿವೈಎಸ್ಪಿ ತಿಪ್ಪೇಸ್ವಾಮಿ ಅವರ ನೇತೃತ್ವದಲ್ಲಿ ಮುಳಬಾಗಿಲು ತಾಲ್ಲೂಕಿನ ವಡ್ಡರಹಳ್ಳಿ ನಂಗಲಿ ಬಳಿ ಇರುವ ವಾಣಿಜ್ಯ ತೆರಿಗೆ ಚೆಕ್ಪೋಸ್ಟ್ ಮೇಲೆ ಸುಮಾರು 20ಕ್ಕೂ ಹೆಚ್ಚು ಲೋಕಾ ಪೊಲೀಸರು ದಾಳಿ ನಡೆಸಿ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ.  ಈ ವೇಳೆ 1.60 ಲಕ್ಷ ರೂ. ಪತ್ತೆಯಾಗಿದ್ದು, ಇದರಲ್ಲಿ ಸುಮಾರು 90,000 ಲಂಚದ ಹಣವೇ ಇತ್ತು ಎಂದು ಹೇಳಲಾಗಿದೆ. ನೆರೆ ರಾಜ್ಯಗಳಿಂದ ಬರುವಂತಹ ಖಾಸಗಿ ಬಸ್ಗಳು ರಹದಾರಿ ಪರ್ಮಿಟ್ ಇಲ್ಲದೆ ರಾಜ್ಯ ಪ್ರವೇಶಿಸಲು ಲಂಚ ಪಡೆಯಲಾಗುತ್ತಿತ್ತು ಎಂಬ ದೂರುಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ದಿಢೀರನೆ ದಾಳಿ ನಡೆಸಿರುವುದು ತಿಳಿದು ಬಂದಿದೆ.  ಇದಲ್ಲದೆ ಬಾಗೇಪಲ್ಲಿ ಬಳಿಯ ಆರ್ಟಿಒ ಚೆಕ್ಪೋಸ್ಟ್ ಮೇಲೂ ಕೂಡ ದಾಳಿ ನಡೆಸಲಾಗಿದೆ. ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಅಬ್ದುಲ್ ಅಹಮದ್ ಮತ್ತು ಲೋಕಾ ಇನ್ಸ್ಪೆಕ್ಟರ್ ದಯಾನಂದ್ ನೇತೃತ್ವದಲ್ಲಿ 10 ಮಂದಿಯ ತಂಡ ಬೆಳಗ್ಗೆ 5 ಗಂಟೆಗೆ ದಾಳಿ ನಡೆಸಿದೆ. ಈ ವೇಳೆ ಕಚೇರಿಯಲ್ಲಿದ್ದ ಕುಳಿತಿದ್ದ ಶ್ರೀನಿವಾಸ್ ಎಂಬ ವ್ಯಕ್ತಿಯನ್ನು ಮಾತನಾಡಿಸಲು ಹೋದಾಗ ಆತ ಲೋಕಾಯುಕ್ತ ಪೊಲೀಸರು ಬಂದಿದ್ದಾರೆ ಎಂದು ಕೂಗಿಕೊಂಡು ಓಡಿದ್ದಾನೆ. ಹೊರಗೆ ಇದ್ದ ಕೆಲ ಲೋಕಾ ಸಿಬ್ಬಂದಿಗಳನ್ನು ಆತನನ್ನು ಬೆನ್ನಟ್ಟಿ ಹಿಡಿದಿದ್ದಾರೆ.

Lokayuka-3

ಈತನ ವಿಚಾರಣೆ ನಡೆಸಿದಾಗ ಬರುವಂತಹ ಮರಳು ಹಾಗೂ ಸರಕು ಲಾರಿಗಳನ್ನು ತಡೆದು ಮಾಮೂಲಿ ವಸೂಲಿ ಮಾಡುತ್ತಿದ್ದ. ಇದನ್ನು ಆರ್ಟಿಒ ಇನ್ಸ್ಪೆಕ್ಟರ್ ವರದರಾಜುವಿಗೆ ನೀಡುತ್ತಿದ್ದ ಎಂಬುದನ್ನು ಹೇಳಲಾಗಿದೆ. ಇದಕ್ಕೆ ಖಾತರಿ ಎಂಬಂತೆ 40,000 ರೂ.ವನ್ನು ಕೂಡ ವಶಕ್ಕೆ ಪಡೆಯಲಾಗಿದೆ.  ಉಪ ಲೋಕಾಯುಕ್ತ ಸುಭಾಷ್ ಬಿ ಆಡಿ ಅವರು ಕೂಡ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡು ಸ್ಥಳದಲ್ಲೇ ಇದ್ದರು ಎಂದು ಕೂಡ ತಿಳಿದು ಬಂದಿದೆ.

ಬಳ್ಳಾರಿ ವರದಿ:

ಇದೆಲ್ಲಕ್ಕಿಂತ ಪ್ರಮುಖ ರಾಜ್ಯ ಮಾರಾಟ ತೆರಿಗೆ (ಸೇಲ್ಸ್ ಟ್ಯಾಕ್ಸ್) ಕಚೇರಿ ಮೇಲೂ ದಾಳಿ  ನಡೆಸಲಾಗಿದ್ದು, ಇಲ್ಲಿ ಭಾರೀ ಅಕ್ರಮಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಪ್ರಮುಖವಾಗಿ ಇಲ್ಲಿ ಅದಿರು ಸಾಗಿಸುವ ಲಾರಿಗಳಿಂದ ಮೈನ್ಸ್ ಮಾಲೀಕರಿಂದ ಭಾರೀ ಪ್ರಮಾಣದ ಹಫ್ತಾ ಬರುತ್ತಿತ್ತು ಎಂದು ಹೇಳಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಯಾವುದೇ ಅಡೆತಡೆ ಇಲ್ಲದೆ ಅಕ್ರಮ ಮತ್ತಷ್ಟು ಹೆಚ್ಚಿತ್ತು ಎಂದು ಸಾರ್ವಜನಿಕ ವಲಯದಲ್ಲಿ ತಿಳಿದು ಬಂದಿದೆ.  ಎಸ್ಪಿ ರವಿಕುಮಾರ್ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಇದಲ್ಲದೆ ಬಳ್ಳಾರಿ-ಹುಬ್ಬಳ್ಳಿ ಹೆದ್ದಾರಿಯ ಆರ್ಟಿಒ ಚೆಕ್ಪೋಸ್ಟ್ ಮೇಲೆ ದಾಳಿ ನಡೆದಿದ್ದು, ಇಲ್ಲೂ ಕೂಡ ನಕಲಿ ರಹದಾರಿ ಪತ್ರಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಇಲ್ಲೂ ಕೂಡ ನಗದು ಹಣ ಪತ್ತೆಯಾಗಿದ್ದು, ವಿಚಾರಣೆ ಮುಂದುವರೆದಿದೆ.   ಇಲ್ಲಿ ಹಾಸನ ಲೋಕಾ ಎಸ್ಪಿ ಪವನ್ ನೆಜ್ಜೂರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

► Follow us on –  Facebook / Twitter  / Google+

Facebook Comments

Sri Raghav

Admin