ಬೆಸ್ಕಾಂ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ ಬೆಳಕಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಮಧುಗಿರಿ, ಜ.10- ಕರ್ತವ್ಯ ನಿರತ ಮಹಿಳೆಯರಿಗೆ ಭದ್ರತೆ ಇಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದ್ದು, ಬೆಸ್ಕಾಂ ಕಚೇರಿಯ ಮಹಿಳಾ ಸಿಬ್ಬಂದಿಯೊಬ್ಬರಿಗೆ ಅದೇ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.ತಾಲೂಕಿನ ಬಡವನಹಳ್ಳಿ ವಿಭಾಗದ ಬೆಸ್ಕಾಂ ಕಚೇರಿಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಫೈಲ್ ಕೇಳುವ ನೆಪದಲ್ಲಿ ಕೊಠಡಿಗೆ ಆಗಮಿಸಿದ ಸಕ್ಷನ್ ಆಫೀಸರ್ ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳಾ ಸಿಬ್ಬಂದಿಯೊಬ್ಬರು ಹಿರಿಯ ಅಧಿಕಾರಿಯೊಬ್ಬರ ಮೇಲೆ ಆರೋಪಿಸಿ ಕಣ್ಣೀರಿಟ್ಟಿದ್ದಾರೆ.ಜ.2 ರಂದೇ ಘಟನೆ ನಡೆದಿದ್ದು, ಮಹಿಳಾ ಸಿಬ್ಬಂದಿ ಕಚೇರಿಯಲ್ಲಿ ಒಬ್ಬರೇ ಇದ್ದ ಸಮಯದಲ್ಲಿ ಕೋಣೆಗೆ ಬಂದ ಸಕ್ಷನ್ ಆಫೀಸರ್ ಫೈಲ್ ಕೇಳುವ ನೆಪದಲ್ಲಿ ಕೊಠಡಿಗೆ ಆಗಮಿಸಿ ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಹೇಳಿಕೆ ನೀಡಿದ ಮಹಿಳೆ, ಇದನ್ನು ಇಲಾಖೆಯ ತಾಲೂಕು ಮಹಿಳಾ ಅಧ್ಯಕ್ಷೆ ಗಮನಕ್ಕೆ ತಿಳಿಸಿದ್ದೇನೆ.

ಆದರೆ ಅವರು ಇದು ಮೊದಲ ಬಾರಿಯಾಗಿದ್ದು ಮತ್ತೊಮ್ಮೆ ಹೀಗೆ ನಡೆದರೆ ಕ್ರಮ ಕೈಗೊಳ್ಳೊಣ ಎಂದು ತಿಳಿಸಿದ್ದಾರೆ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಆ ಅಧಿಕಾರಿ, ಮಹಿಳೆ ಪತಿಯನ್ನು ಕಳೆದುಕೊಂಡಿದ್ದು, ಎರಡು ಮಕ್ಕಳತಾಯಿಯಾಗಿದ್ದಾರೆ. ಕೆಲಸಕ್ಕೆ ಸರಿಯಾಗಿ ಬಾರದೆ ಅವಧಿಗೆ ಮುಂಚೆಯೇ ಮನೆಗೆ ಹೊರಟು ನಿಲ್ಲುತ್ತಾರೆ ಇದನ್ನು ಪ್ರಶ್ನಿಸಿದ್ದಕ್ಕೆ ವೃಥಾ ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.ಆದರೆ ಅವರ ಆರೋಪವನ್ನು ತಳ್ಳಿಹಾಕಿದ ಮಹಿಳಾ ಸಿಬ್ಬಂದಿ, ಇದು ಸುಳ್ಳು. ಕೆಲಸದ ಬಗ್ಗೆ ಇಲ್ಲಿರುವ ಯಾವುದೇ ಸಿಬ್ಬಂದಿಗಳಿಂದ ನಾನು ಹೇಳಿಸಿಕೊಂಡಿಲ್ಲ. ನನ್ನ ಕೆಲಸ ನಾನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೇನೆ. ಅಂದು ಇವರಿಗೆ ಸಹಕರಿಸದ ಕಾರಣ ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಕಣ್ಣೀರಿಟ್ಟರು.

ಘಟನೆಯ ಬಗ್ಗೆ ಅಲ್ಲಿನ ಕಂದಾಯಾಧಿಕಾರಿ ಶಿವರಾಜ್‍ರವರಲ್ಲಿ ವಿಚಾರಿಸಿದಾಗ ಮಹಿಳಾ ಸಿಬ್ಬಂದಿ ಇಲ್ಲಿ ಯಾವುದೇ ದುರ್ನಡತೆ ತೋರಿಲ್ಲ. ಘಟನೆ ನಡೆದ ದಿನ ನಾನು ರಜೆಯಲ್ಲಿದ್ದೆ. ಹಾಜರಾಗಿದ್ದರೆ ಈ ಘಟನೆ ನಡೆಯಲು ಅವಕಾಶ ನೀಡುತ್ತಿರಲಿಲ್ಲ ಎಂದರು.ಘಟನೆಯ ಬಗ್ಗೆ ಇಲಾಖೆಯ ಇಇ ಲೋಕೆಶ್ವರ್ ರವರನ್ನು ಸಂರ್ಪಕಿಸಿದಾಗ ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಜಾರಿಕೊಂಡರು. ಈ
ಬಗ್ಗೆ ಮಹಿಳಾ ಸಂಘಟನೆಗಳು ದನಿ ಎತ್ತಬೇಕು. ನೊಂದವರೇ ದೂರು ನೀಡಿಲ್ಲ ಎಂದು ಸುಮ್ಮನಾದರೆ ಇದು ಹೆಣ್ಣಿಗೆ ತೋರುವ ಅಗೌರವ. ತಪ್ಪು ಮಾಡಿದ್ದರೆ ಸ್ವತಃ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಿ. ಅದು ಬಿಟ್ಟು ಜಾರಿಕೊಳ್ಳುವ ಬುದ್ದಿಯನ್ನು ಹಿರಿಯ ಅಧಿಕಾರಿಗಳು ತೋರಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಎಷ್ಟು ಬಾರಿ ಸಂರ್ಪಕಿಸಿದರೂ ಸಿ.ಇ. ಪ್ರತಿಕ್ರಿಯಿಸಲಿಲ್ಲ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin