ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ 622 ಕೋಟಿ ರೂ.ಗಳ ಕ್ರಿಯಾಯೋಜನೆ ಸಿದ್ಧ

ಈ ಸುದ್ದಿಯನ್ನು ಶೇರ್ ಮಾಡಿ

HK-Patil-Session

ಬೆಂಗಳೂರು, ಫೆ.8-ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲು 622 ಕೋಟಿ ರೂ.ಗಳ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.  ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಗೋವಿಂದ ಕಾರಜೋಳ ಅವರು ಕೇಳಿದ ಪ್ರಶ್ನೆಗೆ ವ್ಯಾಪಕ ಚರ್ಚೆಗೆ ಕಾರಣವಾಯಿತು. ಸಿ.ಟಿ.ರವಿ, ಅರವಿಂದ್ ಬೆಲ್ಲದ್ ಸೇರಿದಂತೆ ಹಲವಾರು ಶಾಸಕರು ಚರ್ಚೆಯಲ್ಲಿ ತೊಡಗಿಸಿಕೊಂಡರು. ಫೆಬ್ರವರಿ ತಿಂಗಳಿನಿಂದಲೇ ರಾಜ್ಯದಲ್ಲಿ ಕುಡಿಯುವ  ನೀರಿನ ಸಮಸ್ಯೆ ಗಂಭೀರವಾಗುತ್ತಿರುವುದು ಸರ್ಕಾರದ ಅರಿವಿಗೆ ಬಂದಿದೆ. ತುರ್ತು ಕುಡಿಯುವ ನೀರನ್ನು ಒದಗಿಸಲು ಎಲ್ಲಾ ಜಲಮೂಲಗಳನ್ನು ಗುರುತಿಸಲಾಗಿದೆ. ನದಿ, ಜಲಾಶಯ, ಕಾಲುವೆ, ಕೆರೆ ನೀರನ್ನು ಉಪಯೋಗಿಸಿಕೊಂಡು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಕೊಳವೆ ಬಾವಿ, ಕೈ ಪಂಪ್‍ಗಳ ಮೂಲಕವೂ ನೀರು ಪೂರೈಸಲು ಕ್ರಮಕೈಗೊಳ್ಳಲಾಗಿದೆ. ತೊಂದರೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು.

ಶಾಸಕರ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಗಳಿಗೆ ಅನುದಾನ ನೀಡಿ ತುರ್ತು ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಮೊದಲ ಹಂತದಲ್ಲಿ 6,930 ಗ್ರಾಮಗಳನ್ನು ಗುರುತಿಸಲಾಗಿದೆ. 2ನೆ ಹಂತದಲ್ಲಿ 7,390 ಗ್ರಾಮಗಳಿಗೆ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. 496 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.   ಹಾಸನ, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ವಿಜಯಪುರ, ದಾವಣಗೆರೆ ತಾಲೂಕುಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಟಾಸ್ಕ್ ಫೋರ್ಸ್ ಗಳಿಗೆ ಒಂದು ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಗೋವಿಂದಕಾರಜೋಳ ಒತ್ತಾಯಿಸಿದಾಗ, ಈಗಾಗಲೇ ಬರಪೀಡಿತ ತಾಲೂಕಿಗೆ 60 ಲಕ್ಷ, ಬರ ಇಲ್ಲದ ತಾಲೂಕಿಗೆ 40 ಲಕ್ಷ ಅನುದಾನ ನೀಡಲಾಗಿದೆ. ಅಗತ್ಯವಿದ್ದರೆ ಇನ್ನಷ್ಟು ಅನುದಾನ ನೀಡಲು ಸಿದ್ಧ ಎಂದು ಭರವಸೆ ನೀಡಿದರು. ಭೂಮಿಯ ಮೇಲ್ಭಾಗದಲ್ಲಿ ಹರಿಯುವಷ್ಟು ನದಿಗಳು ಭೂಮಿಯ ಒಳಭಾಗದಲ್ಲೂ ಹರಿಯುತ್ತಿವೆ. ಅವುಗಳನ್ನು ಗುರುತಿಸಲು ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದು ಶಾಸಕ ಅರವಿಂದ್ ಬೆಲ್ಲದ್ ಒತ್ತಾಯಿಸಿದಾಗ, ಇಸ್ರೋ ಸಂಸ್ಥೆಯ ಜೊತೆಯಾಗಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ಜಲ ಮೂಲಗಳನ್ನು ನಿಖರವಾಗಿ ಗುರುತಿಸುತ್ತಿದ್ದೇವೆ ಎಂದು ಸಚಿವರು ಹೇಳಿದರು. ಕುಡಿಯುವ ನೀರಿನ ಕಾಮಗಾರಿಗೆ ಬಜೆಟ್‍ನ ಮಿತಿ ವಿಧಿಸಬೇಡಿ ಎಂದು ಶಾಸಕ ಸಿ.ಟಿ.ರವಿ ಆಗ್ರಹಿಸಿದರು.

> ನೀರಿನ ಘಟಕಗಳ ದುರಸ್ತಿ ಮಾಡಲು ಸಂಚಾರಿ ದುರಸ್ತಿ ಘಟಕವ ಸ್ಥಾಪನೆ 

ರಾಜ್ಯಾದ್ಯಂತ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋದಾಗ ತಕ್ಷಣ ದುರಸ್ತಿ ಮಾಡಿಸಲು ತಾಲೂಕಿಗೆ ಒಂದರಂತೆ ಸಂಚಾರಿ ದುರಸ್ತಿ ಘಟಕವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಎಸ್.ಟಿ.ಸೋಮಶೇಖರ್ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೆಲವು ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಬೇಸಿಗೆಯಲ್ಲಿ ನೀರು ಪೂರೈಸಲು ಇವುಗಳ ಪಾತ್ರ ಅತ್ಯಂತ ಮಹತ್ವದ್ದು. ಯಾವುದೇ ಹಂತದಲ್ಲೂ ನಿರ್ಲಕ್ಷ್ಯ ಮಾಡುವಂತಿಲ್ಲ. ಹೀಗಾಗಿ ಆ್ಯಂಬುಲೆನ್ಸ್ ರೀತಿ ಸಂಚಾರಿ ದುರಸ್ತಿ ಘಟಕವನ್ನು ಸಜ್ಜುಗೊಳಿಸಲಾಗುವುದು. ತಾಲೂಕಿಗೆ ಒಂದರಂತೆ ಘಟಕಗಳನ್ನು ನೇಮಿಸಿ ಕೆಟ್ಟು ಹೋದ ಘಟಕಗಳನ್ನು ತಕ್ಷಣ ದುರಸ್ತಿ ಮಾಡಲಾಗುವುದು ಎಂದರು.

ಯಶವಂತಪುರ ಕ್ಷೇತ್ರದಲ್ಲಿ ಘಟಕಗಳು ದುರಸ್ತಿಯಲ್ಲಿದ್ದರೆ ಸರಿಪಡಿಸಲು ತಕ್ಷಣ ಕ್ರಮಕೈಗೊಳ್ಳಲಾಗುವುದು. ಗುತ್ತಿಗೆ ನಿರ್ವಹಣೆಯ ಸಂಸ್ಥೆಗಳು ಶಾಸಕರ ಮನವಿಗೆ ಸ್ಪಂದಿಸದಿದ್ದರೆ ಕಂಪೆನಿ ವಿರುದ್ಧ ಗದಾಪ್ರಹಾರ ನಡೆಸಲು ತಾವು ಸಿದ್ದ ಎಂದು ಸಚಿವರು ಭರವಸೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin