ಬೈಕ್ ಸವಾರರಿಗೆ ಶಾಕಿಂಗ್ ಸುದ್ದಿ, ಐಎಸ್‍ಐ ಮಾರ್ಕ್‍ನ ಫುಲ್ ಹೆಲ್ಮೆಟ್ ಕಡ್ಡಾಯ..!

ಈ ಸುದ್ದಿಯನ್ನು ಶೇರ್ ಮಾಡಿ

Helmet--01

ಬೆಂಗಳೂರು, ಜ.16- ದ್ವಿಚಕ್ರ ವಾಹನ ಸವಾರ ಮತ್ತು ಹಿಂಬದಿ ಸವಾರರಿಗೆ ಐಎಸ್‍ಐ ಮಾರ್ಕ್‍ನ ಫುಲ್ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಯಾವುದೇ ದ್ವಿಚಕ್ರ ವಾಹನಗಳ ಸವಾರರು ಮತ್ತು ಹಿಂಬದಿ ಸವಾರರು ಇಬ್ಬರಿಗೂ ಐಎಸ್‍ಐ ಗುರುತಿನ ಫುಲ್ ಹೆಲ್ಮೆಟ್ ಕಡ್ಡಾಯಗೊಳಿಸಿರುವುದಾಗಿ ಆರ್‍ಟಿಒ ಆಯುಕ್ತ ಬಿ.ದಯಾನಂದ್ ಇಂದಿಲ್ಲಿ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಕ್‍ನಲ್ಲಿ ಸಂಚರಿಸುವ ಸವಾರರು, ಹಿಂಬದಿ ಸವಾರರು ಕಡ್ಡಾಯವಾಗಿ ಫುಲ್ ಹೆಲ್ಮೆಟ್ ಧರಿಸಬೇಕಿದ್ದು, ಇದರಲ್ಲಿ ಯಾವುದೇ ಗೊಂದಲ ಬೇಡ. ಈ ಕೂಡಲೇ ವಾಹನ ಸವಾರರು ಐಎಸ್‍ಐ ಮಾರ್ಕ್‍ನ ಹೆಲ್ಮೆಟ್‍ಗಳನ್ನೇ ಬಳಕೆ ಮಾಡುವಂತೆ ಕರೆ ನೀಡಿದರು. ಫುಟ್‍ಪಾತ್‍ಗಳಲ್ಲಿ ಕೆಲವರು ನಕಲಿ ಐಎಸ್‍ಐ ಮಾರ್ಕ್‍ನ ಹೆಲ್ಮೆಟ್‍ಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಂತಹ ಹೆಲ್ಮೆಟ್ ಬಳಕೆಯನ್ನೂ ಸಹ ನಿರ್ಬಂಧಿಸಲಾಗಿದೆ. ಇದರ ಬಳಕೆ ಕಂಡುಬಂದಲ್ಲಿ ದಂಡ ಹಾಕಲಾಗುತ್ತದೆ. ರಸ್ತೆ ಬದಿಗಳಲ್ಲಿ ಅಕ್ರಮ ಹೆಲ್ಮೆಟ್ ಮಾರಾಟವನ್ನೂ ಸಹ ತಪಾಸಣೆ ನಡೆಸಿ ಪತ್ತೆ ಹಚ್ಚಲಾಗುತ್ತದೆ ಎಂದರು.

ನಕಲಿ ಐಎಸ್‍ಐ ಮಾರ್ಕ್‍ನ ಹೆಲ್ಮೆಟ್ ಮಾರಾಟದ ವಿರುದ್ಧವೂ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.  ದಂಡ ವಸೂಲಿ: ಪರಿಸರಕ್ಕೆ ಮಾರಕವಾಗಿರುವಂತಹ ವಾಹನಗಳ ತಪಾಸಣೆ ವೇಳೆ 14 ಲಕ್ಷ ವಾಹನಗಳನ್ನು ಪರೀಕ್ಷೆಗೊಳಪಡಿಸಿ 1.89 ಲಕ್ಷ ಪ್ರಕರಣ ದಾಖಲಿಸಿಕೊಂಡಿದ್ದು, 102 ಕೋಟಿ ದಂಡ ವಸೂಲಿ ಮಾಡಲಾಗಿದೆ.   ಕಳೆದ ಬಾರಿಗೆ ಹೋಲಿಸಿದರೆ ಇದು ಅತಿ ಹೆಚ್ಚು ದಂಡ ವಸೂಲಿಯಾಗಿದೆ ಎಂದ ಅವರು, ಪರಿಸರಕ್ಕೆ ಮಾರಕವಾಗುವ ವಾಹನಗಳನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿಸಲಿದ್ದೇವೆ ಎಂದು ಹೇಳಿದರು.  ರಾಜ್ಯದಲ್ಲಿ 882 ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಿದ್ದು, ಅದರಲ್ಲಿ ಕೆಲವು ತಪಾಸಣಾ ಕೇಂದ್ರಗಳು ದೋಷದಿಂದ ಕೂಡಿವೆ. ಈ ಹಿನ್ನೆಲೆಯಲ್ಲಿ 84 ವಾಯು ತಪಾಸಣಾ ಕೇಂದ್ರಗಳ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ನ್ಯೂನ್ಯತೆ ಇರುವ ಕೇಂದ್ರಗಳನ್ನು ಪತ್ತೆ ಹಚ್ಚಲು ಮತ್ತೊಮ್ಮೆ ತಪಾಸಣಾ ಕಾರ್ಯ ಕೈಗೊಳ್ಳಲಾಗುವುದು ಎಂದರು.

ತಪಾಸಣಾ ಕಾರ್ಯದಲ್ಲಿ ಸಮರ್ಥವಾಗಿರುವ ಕೇಂದ್ರಗಳನ್ನು ಗುರುತಿಸಿ ಅವುಗಳಿಗೆ ಮಾತ್ರ ಮಾನ್ಯತೆ ನೀಡಲಾಗುವುದು. ಉಳಿದ ಕೇಂದ್ರಗಳನ್ನು ರದ್ದುಪಡಿಸಲಾಗುವುದು ಎಂದು ವಿವರಿಸಿದರು. ಸಂಚಾರಕ್ಕೆ ಯೋಗ್ಯವಲ್ಲದ ವಾಹನಗಳ ತಪಾಸಣೆಗೆ ನೆಲಮಂಗಲದಲ್ಲಿ ಫಿಟ್‍ನೆಸ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದ್ದು, ತಪಾಸಣೆ ವೇಳೆ ಅರ್ಹತೆ ಪಡೆದ ವಾಹನಗಳಿಗಷ್ಟೆ ಸಂಚಾರಕ್ಕೆ ಅನುಮತಿ ನೀಡಲಾಗುವುದು. ಉಳಿದ ವಾಹನಗಳ ಸಂಚಾರ ನಿರ್ಬಂಧ ವಿಧಿಸಲಾಗುವುದು. ಹೀಗಾಗಿ ಎಲ್ಲರೂ ಪರಿಸರಕ್ಕೆ ಹಾನಿಯಾಗದ ವಾಹನಗಳ ಬಳಕೆಗೆ ಮುಂದಾಗುವಂತೆ ಕರೆ ನೀಡಿದರು. ಅದರಲ್ಲೂ ಐಎಸ್‍ಐ ಗುರುತಿನ ಹೆಲ್ಮೆಟ್ ಧರಿಸುವುದು, ಸಂಚಾರಿ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ದಯಾನಂದ್ ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin