ಬ್ಯಾಂಕಿಂಗ್ ಕ್ಷೇತ್ರಕ್ಕೂ ಬಂದ ರೋಬೋಟ್ ‘ಲಕ್ಷ್ಮೀ’

ಈ ಸುದ್ದಿಯನ್ನು ಶೇರ್ ಮಾಡಿ

Robo-Laxmi

ಚೆನ್ನೈ, ನ.12- ರೋಬೊ ಇಂದು ಸರ್ವಂತರ್ಯಾಮಿ. ಎಲ್ಲ ಕ್ಷೇತ್ರಗಳಿಗೂ ಕಾಲಿಟ್ಟಿರುವ ಯಂತ್ರಮಾನವ ಮನುಷ್ಯರ ಅನೇಕ ಕಾರ್ಯಗಳಲ್ಲಿ ನೆರವಾಗುತ್ತಿದ್ದಾನೆ. ಇದೀಗ ಭಾರತದ ಮೊಟ್ಟ ಮೊದಲ ಬ್ಯಾಂಕಿಂಗ್ ರೋಬೊ ಚೆನ್ನೈ ಮಹಾನಗರಿಯಲ್ಲಿ ಕಾರ್ಯನಿರ್ವಹಿಸುತ್ತಾ ಗಮನಸೆಳೆಯುತ್ತಿದೆ. ಈ ರೋಬೋ ಹೆಸರು ಲಕ್ಷ್ಮೀ. ಚೆನ್ನೈನ ಸಿಟಿ ಯೂನಿಯನ್ ಬ್ಯಾಂಕ್‍ನಲ್ಲಿ ಲಕ್ಷ್ಮೀ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತಾ ಗ್ರಾಹಕರಿಗೆ ಅಗತ್ಯವಾದ ಮಾಹಿತಿಯನ್ನು ಒದಗಿಸುತ್ತಾ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ. ತನ್ನ ಬಳಿ ಗ್ರಾಹಕರು ಕೇಳುವ ಗ್ರಾಹಕರಿಗೆ ಅವರ ಖಾತೆ ಯಲ್ಲಿರುವ ಮೊತ್ತ, ಬಡ್ಡಿ ದರ, ವಿವಿಧ ಸಾಲ ಸೌಕರ್ಯಗಳು, ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಸೇರಿದಂತೆ ಒಟ್ಟು 125 ವಿಷಯಗಳ ಬಗ್ಗೆ ಅಗತ್ಯ ಮಾಹಿತಿ ನೀಡುವ ಸಾಮಥ್ರ್ಯವನ್ನು ಲಕ್ಷ್ಮೀ ಹೊಂದಿದ್ದಾಳೆ.

ಕೆಂಪು ಮತ್ತು ಬಿಳಿ ಬಣ್ಣಗಳ ಆಕರ್ಷಕ ಪುಟ್ಟ ಗೊಂಬೆಯಂತಿರುವ ಲಕ್ಷ್ಮೀ ರೋಬೋ ಪರದೆ ಮೂಲಕ ಗ್ರಾಹಕರು ತಮಗೆ ಅಗತ್ಯವಾದ ಮಾಹಿತಿ ಮತ್ತಿತರ ವಿವರಗಳನ್ನು ಪಡೆಯಬಹುದು. ಈ ರೋಬೊ ಬಳಿ ಇಲ್ಲದ ಮಾಹಿತಿ ಬಗ್ಗೆ ಸಂಬಂಧಪಟ್ಟ ಕೌಂಟರ್‍ಗಳ ಬಳಿ ಇಲ್ಲವೇ ಮ್ಯಾನೇಜರ್ ಬಳಿ ವಿಚಾರಿಸುವಂತೆ ಸಲಹೆ ನೀಡುತ್ತದೆ ಎಂದು ಸಿಟಿ ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಕಾಮಕೋಡಿ ತಿಳಿಸಿದ್ದಾರೆ. ಈ ರೋಬೋಗೆ ಐಕ್ಯೂ (ಬುದ್ದಿ ಮತ್ತೆ) ಸಾಫ್ಟ್‍ವೇರ್ ಅಳವಡಿಸಲಾಗಿದೆ. ಸದ್ಯಕ್ಕೆ ಪರದೆ ಮೇಲೆ ಮಾಹಿತಿ ನೀಡುವ ಲಕ್ಷ್ಮೀ ಕೆಲವೇ ದಿನಗಳಲ್ಲಿ ಗ್ರಾಹಕರೊಂದಿಗೆ ಇಂಗ್ಲಿಷ್‍ನಲ್ಲಿ ಸಂವಹನ ನಡೆಸಿ ವಿವರಗಳನ್ನು ನೀಡಲಿದ್ದಾಳೆ. ಈ ಪ್ರಯೋಗ ಯಶಸ್ವಿಯಾಗಿದ್ದು, ಇದಕ್ಕೆ ಇನ್ನಷ್ಟು ವಿಷಯಗಳನ್ನು ಅಪ್‍ಲೋಡ್ ಮಾಡಲಾಗುತ್ತಿದೆ.

ಎಚ್‍ಡಿಎಫ್‍ಸಿ ಬ್ಯಾಂಕ್ ಸಹ ಈಗಾಗಲೇ ಬ್ಯಾಂಕಿಂಗ್ ರೋಬೋ ಸೃಷ್ಟಿಸಿದ್ದು, ಅದಿನ್ನೂ ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿಲ್ಲ. ಹೀಗಾಗಿ ಲಕ್ಷ್ಮೀ ದೇಶದ ಚೊಚ್ಚಲ ಬ್ಯಾಂಕಿಂಗ್ ರೋಬೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾಳೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin