ಬ್ಯಾಂಕ್‍ಗಳಿಂದ ಭಾರೀ ಅವ್ಯವಹಾರ : ಪಾನ್ ಕಾರ್ಡ್ ಇಲ್ಲದೇ 1 ಲಕ್ಷ ಕೋಟಿ ಹಣ ಸ್ವೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

Pan-Car-d-01

ನವದೆಹಲಿ/ಮುಂಬೈ, ಮಾ.18- ಗರಿಷ್ಠ ಮೌಲ್ಯದ ನೋಟು ಅಮಾನ್ಯದ ನಂತರ ಕೆಲವೇ ವಾರಗಳಲ್ಲಿ ಭಾರತದ ವಿವಿಧ ಬ್ಯಾಂಕುಗಳಿಂದ ಪಾನ್ (ಪರ್ಮನೆಂಟ್ ಅಕೌಂಟ್ ನಂಬರ್) ವಿವರ ಇಲ್ಲದೇ 1.13 ಲಕ್ಷ ಕೋಟಿ ರೂ.ಗಳ ಅಧಿಕ ಮೌಲ್ಯದ ಠೇವಣಿಗಳನ್ನು ಸ್ವೀಕರಿಸಲಾಗಿದೆ. ಈ ವಹಿವಾಟಿನಲ್ಲಿ ನಿಯಮಗಳನ್ನು ಉಲ್ಲಂಘಿಸಿರುವ ಜೊತೆಗೆ ಭಾರೀ ಅಕ್ರಮಗಳು ನಡೆದಿರುವ ಬಗ್ಗೆ ಆರ್ಥಿಕ ಗುಪ್ತಚರ ಘಟನ (ಎಫ್‍ಐಯು) ತನಿಖೆಯನ್ನು ತೀವ್ರಗೊಳಿಸಿದೆ.
ಇಷ್ಟು ಮೊತ್ತದ ಅನಧಿಕೃತ ವಹಿವಾಟುಗಳಲ್ಲಿ ಅರ್ಧದಷ್ಟು ವ್ಯವಹಾರಗಳು ಗುಜರಾತ್, ರಾಜಸ್ತಾನ, ಉತ್ತರಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಕರ್ನಾಟಕ-ಈ ಆರು ರಾಜ್ಯಗಳಲ್ಲೇ ನಡೆದಿರುವುದು ಗಮನಾರ್ಹ. ಅಕ್ರಮ ವ್ಯವಹಾರಗಳ ಬಗ್ಗೆ ನಿಗಾ ವಹಿಸುವ ಸರ್ಕಾರಿ ಸಂಸ್ಥೆಯಾದ ಎಫ್‍ಐಯು ಈ ಭಾರೀ ಮೊತ್ತದ ಠೇವಣಿಗಳ ಬಗ್ಗೆ ತನಿಖೆಗೆ ಕೈಗೊಂಡಿದೆ.

ಕಾಳಧನ ಮತ್ತು ಭ್ರಷ್ಟಾಚಾರ ನಿಗ್ರಹಕ್ಕಾಗಿ ನ.8ರಿಂದ ಪ್ರಧಾನಿ ನರೇಂದ್ರ ಮೋದಿ ನೋಟು ರದ್ದತೆ ಜಾರಿಗೊಳಿಸಿದ ಕೆಲವೇ ವಾರಗಳಲ್ಲಿ 1.13 ಲಕ್ಷ ಕೋಟಿ ರೂ.ಗಳ ಭಾರೀ ಠೇವಣಿಗಳನ್ನು ಈ ಬ್ಯಾಂಕ್‍ಗಳ ಸಂಗ್ರಹಿಸಿವೆ. 2.5 ಲಕ್ಷ ರೂ.ಗಳ ಮೇಲ್ಪಟ್ಟ ಹಣವನ್ನು ಠೇವಣಿ ಇಡುವಾಗ ಪಾನ್ ಕಾರ್ಡ್ ಮತ್ತಿತರ ವಿವರಗಳನ್ನು ಪಡೆದು ಕೂಲಂಕಷವಾಗಿ ಪರಿಶೀಲಿಸಬೇಕು ಎಂಬ ಸರ್ಕಾರದ ನಿಯಮಗಳನ್ನು ಈ ಬ್ಯಾಂಕ್‍ಗಳು ಗಾಳಿಗೆ ತೂರಿವೆ.  ಪ್ರಮುಖ ಬ್ಯಾಂಕ್‍ಗಳಲ್ಲಿ ನಡೆದಿರುವ ಈ ಅಕ್ರಮ ಅವ್ಯವಹಾರಗಳ ಮಾಹಿತಿಗಳನ್ನು ಎಫ್‍ಐಯು ಕಲೆ ಹಾಕುತ್ತಿದೆ. ಇದರಲ್ಲಿ ಉನ್ನತಾಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲಾಗಿರುವ ಸಾಧ್ಯತೆ ಇದ್ದು, ಅಕ್ರಮ ಸಾಬೀತಾದಲ್ಲಿ ಕಾನೂನು ಕುಣಿಕೆ ಅವರ ಕೊರಳನ್ನು ಸುತ್ತಿಕೊಳ್ಳಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin