ಬ್ಯಾಂಕ್‍ಗಳು ಗ್ರಾಮಗಳನ್ನು ದತ್ತುಪಡೆದು ಡಿಜಿಟಲ್ ಪಾವತಿ ಶಿಕ್ಷಣ ನೀಡಲಿ : ಸದಾನಂದಗೌಡ

ಈ ಸುದ್ದಿಯನ್ನು ಶೇರ್ ಮಾಡಿ

Sadanandagouda

ಬೆಂಗಳೂರು, ಜ.18– ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜನಪ್ರಿಯ ಗೊಳಿಸಲು ಮತ್ತು ರೈತಾಪಿ ವರ್ಗವನ್ನು ಡಿಜಿಟಲ್ ಶಿಕ್ಷಿತರನ್ನಾಗಿ ರೂಪಿಸಲು ಬ್ಯಾಂಕುಗಳು ಗ್ರಾಮಗಳನ್ನು ದತ್ತು ಪಡೆದುಕೊಂಡು ಗ್ರಾಮಸ್ಥರಿಗೆ ಡಿಜಿಟಲ್ ಬ್ಯಾಂಕಿಂಗ್ ಬಳಸುವುದನ್ನು ಕಲಿಸಬೇಕು ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಸದಾನಂದ ಗೌಡ ಬ್ಯಾಂಕುಗಳಿಗೆ ಕರೆ ನೀಡಿದರು.  ಕೇಂದ್ರ ಸರ್ಕಾರದ ನೀತಿ ಆಯೋಗ ರಾಜ್ಯ ಸರ್ಕಾರದ ಸಹಯೋಗ ದೊಂದಿಗೆ ನಗರದ ಜ್ಞಾನಜ್ಯೋತಿ ಸಂಭಾಂಗಣದಲ್ಲಿ ಆಯೋಜಿಸಿದ್ದ ಡಿಜಿ- ಧನ ಮೇಳದಲ್ಲಿ ಡಿಜಿಟಲ್ ಪಾವತಿಯಲ್ಲಿ ಲಕ್ಕಿ ಡ್ರಾ ಮೂಲಕ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಅನಕ್ಷರಸ್ಥರು ಡಿಜಿಟಲ್ ಬ್ಯಾಂಕಿಂಗ್ ಕಲಿತಲ್ಲಿ ಮಾತ್ರ ಬ್ಯಾಂಕ್ ನವರ ಇಲ್ಲಿಯತನಕದ ಶ್ರಮ ಸಾರ್ಥಕವಾಗುತ್ತದೆ, ಬ್ಯಾಂಕುಗಳು ತಮ್ಮದಲ್ಲದ ಗ್ರಾಹಕರು ಸಹಾಯ ಅರಸಿ ಬಂದರೂ ದಯವಿಟ್ಟು ಅವರಿಗೆ ಸಹಕರಿಸಿ ಧೈರ್ಯ ತುಂಬುವ ಕೆಲಸ ಆಗಬೇಕಿದೆ ಎಂದು ಹೇಳಿದರು.  ಡಿಜಿಟಲ್ ವ್ಯವಹಾರ ಈಗ ಸ್ವಲ್ಪಕಷ್ಟಕರವಾಗಿ ಕಾಣುತ್ತಿದ್ದು ಇದನ್ನು ಕಲಿಯಲು ಸ್ವಲ್ಪ ಸಮಯ ಬೇಕಾಗುತ್ತದೆ. ತದನಂತರದಲ್ಲಿ ಅದೊಂದು ಅಭ್ಯಾಸವಾಗಿ ಬಿಟ್ಟರೆ ಬಹಳಷ್ಟು ಸಮಯ ನಿಮಗೆ ಉಳಿ ಯುತ್ತದೆ. ಇದರಿಂದ ದೇಶದಲ್ಲಿ ಭ್ರಷ್ಟಾಚಾರ, ಕಪ್ಪುಹಣವನ್ನು ತಡೆಗಟ್ಟಬಹುದು ಎಂದರು.
ಆರ್ಥಿಕ ಶಿಸ್ತು, ಪಾರದರ್ಶಕತೆ ತರುವ ನಿಟ್ಟಿನಲ್ಲಿ ಡಿಜಿಟಲ್ ಬ್ಯಾಂಕಿಂಗ್ ಸಹಕಾರಿಯಾಗಲಿದೆ ಎಂದು ಹೇಳಿದರು.

ರಾಷ್ಟ್ರಪ್ರಶಸ್ತಿ ಪುರಸ್ಕøತ ಚಿತ್ರನಟ ಸಂಚಾರಿ ವಿಜಯ್ ಅವರು ಡಿಜಿಟಲ್ ಬ್ಯಾಂಕಿಂಗ್ ಮುಖಾಂತರ ತಮ್ಮ ಮನೆಯ ವಿದ್ಯುಚ್ಛಕ್ತಿ ಬಿಲ್ಲನ್ನು ವೇದಿಕೆಯಲ್ಲಿ ಪಾವತಿಸುವುದರ ಮೂಲಕ ತಮ್ಮ ಡಿಜಿಟಲ್ ಖಾತೆಯನ್ನು ತೆರೆದು ಮಾತನಾಡಿ, ತಾಂತ್ರಿಕತೆಯೆಡೆಗೆ ಜೀವನವನ್ನು ಹೊರಳಿಸಬೇಕಾದ ಅವಶ್ಯಕತೆ ಇಂದಿನ ದಿನಗಳಲ್ಲಿ ಇದ್ದು ನಾವು ಅಪ್‍ಡೇಟ್ ಆಗಬೇಕಾದ ಅನಿವಾರ್ಯತೆ ಇದೆ ಎಂದರು.  ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ರಾಜ್ಯ ಸಚಿವ ರಮೇಶ್ ಜಿಗಜಿಣಗಿ, ಲೋಕಸಭಾ ಸದಸ್ಯ ಪಿ.ಸಿ.ಮೋಹನ್, ನೀತಿ ಆಯೋಗದ ಡಾ.ಯೋಗಿಶ್, ನೀತಿ ಆಯೋಗದ ಸದಸ್ಯರು, ರೈತರು ಹಾಗೂ ಬ್ಯಾಂಕ್ ಸಿಬ್ಬಂದಿಗಳು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin