ಬ್ಯಾಂಕ್, ಎಟಿಎಂ ಮುಂದೆ ಸಂಬಳ, ಪಿಂಚಣಿಗಾಗಿ ಜನರ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

Syndicate-Bank-Notes

ಬೆಂಗಳೂರು, ಡಿ.1– ಐದುನೂರು, ಸಾವಿರ ರೂ. ಮುಖಬೆಲೆಯ ನೋಟನ್ನು ನಿಷೇಧ ಮಾಡಿ ಬರೋಬ್ಬರಿ 22 ದಿನ ಕಳೆದಿವೆ. ಹೊಸ ನೋಟು ಪಡೆಯಲು ಸಾರ್ವಜನಿಕರ ಪರದಾಟ ಮುಗಿದಿಲ್ಲ. ಬ್ಯಾಂಕ್‍ಗಳು, ಎಟಿಎಂಗಳ ಮುಂದೆ ಅದೇ ರಾಗ… ಅದೇ ಹಾಡು… ಎನ್ನುವಂತಾಗಿದೆ. ಎಟಿಎಂಗಳು ಮುಚ್ಚಿವೆ, ಬ್ಯಾಂಕ್‍ಗಳಲ್ಲಿ ಹಣ ದೊರೆಯುತ್ತಿಲ್ಲ. ಸಂಬಳ ಪಡೆಯಲು ಸಾಲಾಗಿ ನಿಂತಿರುವ ನೌಕರರು, ಪಿಂಚಣಿದಾರರ ಪರಿಸ್ಥಿತಿ ಶೋಚನೀಯವಾಗಿದೆ. ಕಡಿಮೆ ಮೌಲ್ಯದ 500 ಮತ್ತು 100ರೂ. ಹೊಸ ನೋಟುಗಳು ಲಭ್ಯವಾಗುತ್ತಿಲ್ಲ. ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಹಣ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗುತ್ತಿದೆ. ನೌಕರರ ಸಂಬಳ ಪೂರೈಸಲು ಹಣ ಸಾಕಾಗುತ್ತಿಲ್ಲ. ಬ್ಯಾಂಕ್‍ಗಳ ಮುಂದೆ ಪಿಂಚಣಿದಾರರು, ನೌಕರರು ತಮ್ಮ ವೇತನ ಪಡೆಯಲು ಎಲ್ಲೆಡೆ ಸರದಿಯಲ್ಲಿ ನಿಂತಿದ್ದ ದೃಶ್ಯ ಕಂಡುಬಂತು.

ಶೇ.80ರಷ್ಟು ಎಟಿಎಂಗಳು ಮುಚ್ಚಿವೆ. 1000, 500ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿ 22 ದಿನಗಳ ನಂತರ ನಿಜವಾದ ಸಮಸ್ಯೆ ಈಗ ಆರಂಭವಾಗಿದೆ.
ಸಾರ್ವಜನಿಕ ವಲಯದಲ್ಲಿ ಸಣ್ಣನೆಯ ಆಕ್ರೋಶ ಶುರುವಾಗಿದೆ. ನಗದನ್ನು ಪೂರೈಸಲು ಆರ್‍ಬಿಐ ಹರಸಾಹಸ ಮಾಡುತ್ತಿದೆ. ಇಂದು ಒಂದೇ ದಿನದಲ್ಲಿ ಒಂದು ಸಾವಿರ ಕೋಟಿ ರೂ.ಗಳ ನೋಟುಗಳನ್ನು ಪೂರೈಸಲು ಕ್ರಮ ಕೈಗೊಂಡಿದೆ. ಆದರೂ ಸಮರ್ಪಕ ನಿರ್ವಹಣೆ ಕೊರತೆಯಿಂದ ಸಾರ್ವಜನಿಕರಾಗುವ ಅನಾನುಕೂಲಗಳನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ನೋಟು ರದ್ದಾದ ನಂತರದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರ ಮತ್ತು ಆರ್‍ಬಿಐ ವಿಫಲವಾಗಿರುವುದು ಬ್ಯಾಂಕ್‍ಗಳ ಮುಂದೆ ನಿಂತಿರುವ ಜನರ ಕ್ಯೂನಿಂದ ಪ್ರತಿಬಿಂಬವಾಗುತ್ತಿದೆ. ಅನೇಕ ಬ್ಯಾಂಕ್‍ಗಳು ಮತ್ತು ಎಟಿಎಂಗಳ ಮುಂದೆ ನೋ ಕ್ಯಾಷ್ ಎಂಬ ಫಲಕ ಎಲ್ಲೆಡೆ ಕಂಡುಬರುತ್ತಿದೆ.

ಇಂದು ಸುಮಾರು ಲಕ್ಷಾಂತರ ನೌಕರರು ತಮ್ಮ ಸಂಬಳ ಪಡೆಯಲು ಬ್ಯಾಂಕ್‍ಗಳಿಗೆ ಮುಗಿ ಬಿದ್ದಿದ್ದರು. ಆದರೂ ಸಂಬಳ ಪಡೆಯಲು ಮಿತಿ ಹೇರಿರುವ ಹಿನ್ನೆಲೆಯಲ್ಲಿ ಸಾಕಷ್ಟು ಗೊಂದಲ ಉಂಟಾಗಿತ್ತು.  ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು, ಬಹುರಾಷ್ಟ್ರೀಯ ಕಂಪೆನಿಗಳ ನೌಕರರು, ಖಾಸಗಿ ನೌಕರರು, ಕಾರ್ಮಿಕರು, ಗಾರ್ಮೆಂಟ್ಸ್ ನೌಕರರು, ಸಂಘಟಿತ-ಅಸಂಘಟಿತ ವಲಯದ ಕಾರ್ಮಿಕರು, ಬಹುತೇಕ ನೌಕರರು ಬ್ಯಾಂಕ್ ಮೂಲಕವೇ ವೇತನ ಪಡೆಯುತ್ತಿದ್ದರು. ಹಣದ ಹರಿವಿನ ಕೊರತೆಯಿಂದ ಎಲ್ಲರಿಗೂ ಸಮಸ್ಯೆಯಾಗಿದೆ.  ವೇತನ, ಪಿಂಚಣಿ ಪಾವತಿಗೆ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿದ್ದರಾದರೂ ಪಿಂಚಣಿ ಪಡೆಯಲು ನಿವೃತ್ತ ನೌಕರರು, ಬ್ಯಾಂಕ್‍ಗಳ ಮುಂದೆ ಇಂದು ಸಾಲುಗಟ್ಟಿ ಗಂಟೆಗಟ್ಟಲೆ ನಿಂತಿದ್ದು, ಕೊನೆಗೆ ಹಣ ಸಿಗದೆ ವಾಪಸಾಗಿದ್ದ ಹಲವು ನಿದರ್ಶನಗಳು ಕೂಡ ಕಂಡುಬಂದವು. ಈ ಸಮಸ್ಯೆ ಬಗೆಹರಿದಿರಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನ ತಮ್ಮ ವೇತನ ಪಡೆಯಲು ಬ್ಯಾಂಕ್‍ಗಳಿಗೆ ಹೋದಾಗ ಮುಚ್ಚಿದ ಎಟಿಎಂಗಳನ್ನು ಹಾಗೂ ತಮ್ಮ ಹಣವನ್ನು ವಿತ್‍ಡ್ರಾ ಮಾಡಲು ಬ್ಯಾಂಕ್‍ಗಳು ವಿಧಿಸಿದ ನಿಯಮಗಳನ್ನು ಕಂಡು ಕಕ್ಕಾಬಿಕ್ಕಿಯಾದರು.

ಬಹುತೇಕ ತೆರೆದಿರುವ ಬ್ಯಾಂಕ್‍ಗಳಲ್ಲಿ ನಿಗದಿತವಾಗಿ ಹಣ ಪಡೆಯಲಾಗುತ್ತಿಲ್ಲ. ಎಟಿಎಂಗಳಲ್ಲೂ ಕೂಡ ಕನಿಷ್ಟ ಪ್ರಮಾಣದ ಹಣ ಸಿಗುತ್ತಿಲ್ಲ. ಸಿಕ್ಕ ಹಣ ಕೂಡ ಯಾವುದಕ್ಕೂ ಸಾಕಾಗುತ್ತಿಲ್ಲ ಎಂದು ಜನ ತಮ್ಮ ಅಳಲು ತೋಡಿಕೊಂಡಿದ್ದು ಕಂಡುಬಂತು.  ನಗದಿನ ಮೂಲಕ ವೇತನ ಪಾವತಿ ಮಾಡುತ್ತಿದ್ದ ಕಂಪೆನಿಗಳವರಿಗೆ ಕೇಂದ್ರ ಸರ್ಕಾರ ಬ್ಯಾಂಕ್ ಖಾತೆ ಮೂಲಕ ವೇತನ ಪಾವತಿ ಮಾಡಲು ಸೂಚಿಸಿದೆ. ಖಾತೆ ಇಲ್ಲದಿದ್ದರೆ ಖಾತೆ ತೆರೆದು ವೇತನ ಪಾವತಿ ಮಾಡಲು ಹೇಳಿದೆ.  ಹೀಗಾಗಿ ಸಣ್ಣಪುಟ್ಟ ಕೈಗಾರಿಕೆಗಳಲ್ಲಿ ಕೆಲಸ ಮಾಡಿ ಸಂಬಳ ಪಡೆಯುವವರು ಈಗ ಸಂಬಳ ಖಾತೆ ಮಾಡಿಸಿಕೊಂಡು ವೇತನ ಪಡೆಯಬೇಕಾಗಿದೆ. ಇವರಿಗೆ ಕೆಲಸ ಕೊಟ್ಟ ಕಂಪೆನಿಗಳವರು ತಮ್ಮ ನೌಕರರ ಖಾತೆಗಳನ್ನು ಓಪನ್ ಮಾಡಿಸಬೇಕು. ನೇರವಾಗಿ ಅವರಿಗೆ ನಗದು ಕೊಡುವಂತಿಲ್ಲ. ಕೊಡಲು ಹಣವೂ ಇಲ್ಲ. ಬ್ಯಾಂಕ್‍ನಿಂದ ವಿತ್‍ಡ್ರಾ ಮಾಡಲು ಸಾಧ್ಯವಾಗುತ್ತಿಲ್ಲ. ಈಗ ಬ್ಯಾಂಕ್‍ನವರು ಡಿಪಾಸಿಟ್ ಮಾಡಿಸಿಕೊಳ್ಳಲು ಮತ್ತು ಹಣ ಕೊಡುವಲ್ಲಿಯೇ ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ಖಾತೆ ತೆರೆಯಲು ಸಾಧ್ಯವೇ ಎಂಬ ಪ್ರಶ್ನೆ ಕೂಡ ಎದುರಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin