ಬ್ಯಾಂಕ್ ಗಳ ಮುಂದೆ ಹೊಸ ನೋಟಿಗಾಗಿ ನೂಕುನುಗ್ಗಲು

ಈ ಸುದ್ದಿಯನ್ನು ಶೇರ್ ಮಾಡಿ

Bank-Notes

ಧಾರವಾಡ/ಬೆಳಗಾವಿ/ಕಲಬುರಗಿ/ಬಾಗಲಕೋಟೆ,ನ.10-ಕೇಂದ್ರ ಸರ್ಕಾರ 500 ಹಾಗೂ 1000 ಹಳೆಯ ನೋಟುಗಳನ್ನು ರದ್ದು ಪಡಿಸಿರುವ ಹಿನ್ನೆಲೆಯಲ್ಲಿ ಹೊಸ ನೋಟುಗಳನ್ನು ಪಡೆಯಲು ನಾಗರಿಕರು ಬೆಳಗ್ಗೆಯಿಂದಲೇ ಕೈಯಲ್ಲಿ ಗುರುತಿನ ಚೀಟಿ ಹಿಡಿದುಕೊಂಡು ಬ್ಯಾಂಕ್‍ಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿರುವುದು ಎಲ್ಲೆಡೆ ಕಂಡುಬಂತು.  ಹುಬ್ಬಳ್ಳಿ-ಧಾರವಾಡ ಅವಳಿನಗರಗಳ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‍ಗಳ ಮುಂದೆ ಬೆಳಗ್ಗೆ 8 ಗಂಟೆಯಿಂದ ನಾಗರಿಕರು ಹೊಸ ನೋಟುಗಳನ್ನು ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್‍ಗಳ ಹೊರಗಡೆ ಟೆಂಟ್ ವ್ಯವಸ್ಥೆಯನ್ನು ಮಾಡಲಾಗಿದೆ.

ಹೊಸ ನೋಟುಗಳನ್ನು ಪಡೆಯಲು ಯಾವುದಾದರೊಂದು ಗುರುತಿನ ಚೀಟಿ ಕಡ್ಡಾಯಪಡಿಸಿರುವ ಹಿನ್ನೆಲೆಯಲ್ಲಿ ಮತದಾರರ ಗುರುತಿನ ಚೀಟಿಯನ್ನು ತೋರಿಸಿ ಹಣ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.  ಬೆಳಗಾವಿ, ಕಲಬುರಗಿ, ಬಾಗಲಕೋಟೆಯಲ್ಲಿ ಬೆಳಗ್ಗೆಯಿಂದಲೇ ಗ್ರಾಹಕರು ಸರತಿ ಸಾಲಿನಲ್ಲಿ ನಿಂತಿದ್ದರು. ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದ್ದು, ಈ ಸಮಯ ಸಾಕಾಗುವುದಿಲ್ಲ ಕಾರಣ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಸಮಯ ವಿಸ್ತರಿಸಬೇಕೆಂದು ಕಲಬುರಗಿ ಗ್ರಾಹಕರು ಬ್ಯಾಂಕ್‍ಗಳಿಗೆ ಮನವಿ ಮಾಡಿದ್ದಾರೆ.
ಹೊಸ ನೋಟುಗಳನ್ನು ಪಡೆದಿರುವ ಗ್ರಾಹಕರು ಖುಷಿಯಿಂದ ಎಲ್ಲರಿಗೂ ತೋರಿಸುತ್ತಿರುವ ದೃಶ್ಯ ಬ್ಯಾಂಕ್‍ಗಳ ಮುಂದೆ ಕಂಡು ಬಂತು.

ಪ್ರಧಾನಿ ಮೋದಿ ಅವರು 500 ಹಾಗೂ 1000 ರೂ. ನೋಟುಗಳನ್ನು ರದ್ದು ಮಾಡಿ ಒಳ್ಳೆಯ ಕೆಲಸ ಮಾಡಿದ್ದಾರೆ. ಇದರಿಂದ ಕಾಳಸಂತೆ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ಪ್ರಾರಂಭದಲ್ಲಿ ಈ ವ್ಯವಸ್ಥೆಯಿಂದ ಜನಸಾಮಾನ್ಯರಿಗೆ ಸ್ವಲ್ಪ ತೊಂದರಯಾಗುತ್ತದೆ. ಆದರೆ ಮುಂಬರುವ ದಿನಗಳಲ್ಲಿ ಇದು ಸಹಕಾರಿಯಾಗಲಿದೆ ಎಂದು ಗ್ರಾಹಕ ಬಸವರಾಜು ಪ್ರತಿಕ್ರಿಯಿಸಿದ್ದಾರೆ.

ಎಲ್ಲೆಲ್ಲೂ ನೋಟಿನದ್ದೆ ಮಾತು :

ಪ್ರಧಾನಿ ನರೇಂದ್ರ ಮೋದಿಯವರು ಕಪ್ಪು ಹಣ ತಡೆಯಲು ದಿಢೀರ್ 500 ಮತ್ತು 1,000 ರೂ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಪಡಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಸಂಸೆ ವ್ಯಕ್ತವಾದರೂ ಸಹ ತಮ್ಮಲ್ಲಿ ಉಳಿದಿರುವ ನೋಟುಗಳ ಬದಲಾವಣೆ ಹೇಗೆ ಎಂಬ ಚಿಂತೆ ಎಲ್ಲರಲ್ಲೂ ಮನೆ ಮಾಡಿದೆ. ನಿತ್ಯ ವ್ಯವಹಾರಕ್ಕೆ ಐನೂರು ನೋಟುಗಳನ್ನು ಇಟ್ಟುಕೊಂಡಿರುವ ಸಾಮಾನ್ಯ ಜನರು ಜೇಬಲ್ಲಿ ,ಕೈಯಲ್ಲಿ 500- 1000 ರು ನೋಟು ಹಿಡಿದು ಆತಂಕದಿಂದ ಓಡಾಡುತ್ತಿದ್ದ ದೃಶ್ಯ ಸರ್ವೆಸಾಮಾನ್ಯವಾಗಿದೆ. ಅಂಗಡಿ , ಹೋಟೆಲ್‍ಗಳು, ಪೆಟ್ರೋಲ್ ಬಂಕ್, ತರಕಾರಿ, ಹೂವು ಮಾರಾಟಗಾರರ ನಡುವೆ 500 ನೋಟಿನದ್ದೇ ಚರ್ಚೆ.

ಬೇಕೋಬೇಡವೋ ನೋಟನ್ನು ಕಳುಹಿಸುವ ಪ್ರಯತ್ನವಾಗಿ ಬಟ್ಟೆ ಅಂಗಡಿ,ದಿನಸಿಅಂಗಡಿ ಕಡೆಗೆ ಕೆಲವರು ಎಲೆಕ್ಟ್ರಾನಿಕ್ ಅಂಗಡಿಗಳಲ್ಲಿ ಕೊಳ್ಳುವಿಕೆ ಮಾಡಿ 500 -1000 ರೂ ಗಳನ್ನೆ ನೀಡುತ್ತಿದ್ದರು. ಸರ್ಕಾರಿ ಆದೇಶದಂತೆ ಬ್ಯಾಂಕ್, ಎಟಿಎಂಗಳು ಇಂದು ಬಾಗಿಲು ಮುಚ್ಚಿತ್ತಾದ್ದರೂ ಜನ ಕುತುಹಲಕ್ಕಾಗಿ ಬ್ಯಾಂಕಿನೆಡೆಗೆ ಎಡೆತಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin