ಬ್ಯಾಂಕ್ ಮುಷ್ಕರ ಹಿನ್ನೆಲೆಯಲ್ಲಿ ದೇಶಾದ್ಯಂತ ಹಣಕಾಸು ವಹಿವಾಟು ವ್ಯತ್ಯಯ

ಈ ಸುದ್ದಿಯನ್ನು ಶೇರ್ ಮಾಡಿ

Bank-Strike--025

ನವದೆಹಲಿ/ಮುಂಬೈ, ಫೆ.28-ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್‍ಬಿಯು) ಇಂದು ದೇಶಾದ್ಯಂತ ನಡೆಸಿದ ಒಂದು ದಿನದ ಮುಷ್ಕರದಿಂದಾಗಿ ಚೆಕ್ ಕ್ಲಿಯರೆನ್ಸ್ ಸೇರಿದಂತೆ ಬ್ಯಾಂಕಿಂಗ್ ವಹಿವಾಟು ವ್ಯತ್ಯಯಗೊಂಡಿತು.  ರಾಜಧಾನಿ ದೆಹಲಿ, ಬೆಂಗಳೂರು, ವಾಣಿಜ್ಯ ರಾಜಧಾನಿ ಮುಂಬೈ, ಬೃಹನ್ ಮಹಾನಗರಗಳಾದ ಕೋಲ್ಕತ, ಮತ್ತು ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸರ್ಕಾರಿ ಸ್ವಾಮ್ಯದ ಬಹುತೇಕ ಬ್ಯಾಂಕುಗಳು ಬಂದ್ ಆಗಿದ್ದ ಕಾರಣ ಗ್ರಾಹಕರಿಗೆ ತೊಂದರೆಯಾಯಿತು. ಆದರೆ ಎಟಿಎಂ ಮತ್ತು ಆನ್‍ಲೈನ್ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಿದವು.

ಮುಷ್ಕರದ ಅಂಗವಾಗಿ ಅನೇಕ ನಗರಗಳಲ್ಲಿ ಬ್ಯಾಂಕ್ ನೌಕರರು ಸಾಂಕೇತಿಕ ಮೆರವಣಿಗೆ ಮತ್ತು ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.  ಯುಎಫ್‍ಬಿಯು ವ್ಯಾಪ್ತಿಯಲ್ಲಿರುವ ಒಂಭತ್ತು ಒಕ್ಕೂಟಗಳು ಮುಷ್ಕರದಲ್ಲಿ ಭಾಗವಹಿಸಿವೆ. ಗ್ರಾಮೀಣ ಬ್ಯಾಂಕ್‍ಗಳು ಮತ್ತು ಕೆಲವು ಸಹಕಾರಿ ಬ್ಯಾಂಕುಗಳು ಬೆಂಬಲ ನೀಡಿದ್ದು,  ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ನೌಕರರು ಮುಷ್ಕರದಲ್ಲಿ ಪಾಲ್ಗೊಂಡರು.   ಆದರೆ ಭಾರತೀಯ ಮಜ್ದೂರ್ ಸಂಘಟನೆ ಜೊತೆ ಗುರುತಿಸಿಕೊಂಡಿರುವ ಬ್ಯಾಂಕ್ ನೌಕರರ ರಾಷ್ಟ್ರೀಯ ಸಂಘಟನೆ ಹಾಗೂ ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಘಟನೆ ಮುಷ್ಕರದಲ್ಲಿ ಭಾಗವಹಿಸಿಲ್ಲ. ಖಾಸಗಿ ಬ್ಯಾಂಕುಗಳಾದ ಐಸಿಐಸಿಐ, ಎಚ್‍ಡಿಎಫ್‍ಸಿ, ಆಕ್ಸಿಸ್ ಮತ್ತು ಕೋಟಕ್ ಮಹೀಂದ್ರ ಬ್ಯಾಂಕುಗಳ ವಹಿವಾಟು ಎಂದಿನಂತಿತ್ತು. ಆದರೆ ಚೆಕ್ ಕ್ಲಿಯರೆನ್ಸ್‍ಗೆ ವಿಳಂಬವಾಗಿದೆ.

ವಸೂಲಾಗದ ಸಾಲ ಹೆಚ್ಚಳಕ್ಕೆ ಬ್ಯಾಂಕ್ ಅಧಿಕಾರಿಗಳನ್ನು ಹೊಣೆ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಮುಷ್ಕರ ನಡೆಸಿದ ಬ್ಯಾಂಕ್ ಸಂಘಟನೆಗಳು, ಬ್ಯಾಂಕ್ ನೌಕರರಿಗೂ ಕೇಂದ್ರ ಸರ್ಕಾರಿ ಉದ್ಯೋಗಿಗಳಂತೆ 2016ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಗ್ರಾಚ್ಯುಟಿ ನೀಡಬೇಕು. ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಬ್ಯಾಂಕ್ ನೌಕರರ ಪಿಂಚಣಿ ಮರುಪರಿಶೀಲನೆ ಆಗಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin