ಬ್ರಹ್ಮಶ್ರೀ ನಾರಾಯಣ ಗುರುಗಳ ಸಾಮಾಜಿಕ ಕ್ರಾಂತಿ ಇವತ್ತಿಗೂ ಅರ್ಥಪೂರ್ಣ

ಈ ಸುದ್ದಿಯನ್ನು ಶೇರ್ ಮಾಡಿ

 

belagam6

ಭಾರತ ದೇಶದ ಚರಿತ್ರೆಯಲ್ಲಿ ನೂರಾರು ಸಂತರು, ಶರಣರು ಸಮಾಜ ಸುಧಾರಣಾ ಕಾರ್ಯವನ್ನು ಮಾಡಿ ದೇವಮಾ ನವರೆಸಿಕೊಂಡಿರುತ್ತಾರೆ. ಆಯಾಯ ಕಾಲಘಟ್ಟದಲ್ಲಿ ಶೋಷಿತರ ಸಂರಕ್ಷಣೆಗಾಗಿ, ದೌರ್ಜನ್ಯ ದಬ್ಬಾಳಿಕೆಗೆ ಒಳಗಾಗುತ್ತಿದ್ದ ಜನ ಸಾಮಾನ್ಯರಿಗೆ ಬದುಕು ಕಟ್ಟಿಕೊಟ್ಟಂತಹ ಬುದ್ದ, ಬಸವಣ್ಣ ಕನಕದಾಸ ಇನ್ನಿತರ ದಾರ್ಶನಿಕರ ಸಾಲಿನಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುವ ಅಮೂಲ್ಯ ರತ್ನ ಹಾಗೂ ಆಧುನಿಕ ಯುಗದ ಪರಿವರ್ತನ ಹರಿಕಾರರೆಂದು ಹೆಸರಾಗಿರುವ ಕೇರಳದ ಶ್ರೀ ನಾರಾಯಣ ಗುರುಗಳು. 18ನೇ ಶತಮಾನದಲ್ಲಿ ಕೇರಳ ರಾಜ್ಯದ ಪರಿಸ್ಥಿತಿ ತುಂಬಾ ಹೀನಾಯವಾಗಿತ್ತು. ಮೇಲ್ವರ್ಗದವರ ಹಿಂಸೆಗೆ ತುತ್ತಾಗಿ ಕೆಳವರ್ಗದ ಜನರು ಧರ್ಮವನ್ನೇ ಬಿಟ್ಟು ಮತ್ತೊಂದು ಧರ್ಮವನ್ನು ಸೇರುವ ತವಕದಲ್ಲಿದ್ದರು.

ಕಾರಣ ಧರ್ಮ ಮತ್ತು ದೇವರ ಹೆಸರಿನಲ್ಲಿ ಜನಸಾಮಾನ್ಯರನ್ನು ಶೋಷಿಸುತ್ತಿದ್ದ ಸಂದರ್ಭವದು, ಈ ಪರಿಸ್ಥಿತಿಯಲ್ಲಿಯೇ ಸ್ವಾಮಿ ವಿವೇಕಾನಂದರು ಕೇರಳಕ್ಕೆ ಭೇಟಿ ನೀಡಿ ಇಲ್ಲಿದ್ದ ಜಾತಿವ್ಯವಸ್ಥೆಯನ್ನು ಹಾಗೂ ಶೋಷಣೆಯನ್ನು ನೋಡಿ ಕೇರಳವೊಂದು ಹುಚ್ಚಾಸ್ಪತ್ರೆ ಎಂದಿದ್ದರು. ಶೇ. 85ರಷ್ಟು ಜನಸಮುದಾಯ ಅವರ್ಣಿಯರಾಗಿದ್ದು ಪ್ರಾಣಿಗಳಿಗಿಂತಲೂ ಹೀನಾಯವಾಗಿ ಬದುಕುತ್ತಿತ್ತು. ಶಾಸ್ತ್ರ ಸಂಪ್ರದಾಯ, ಧರ್ಮ, ದೇವರ ಹೆಸರಿನಲ್ಲಿ ಶೋಷಣೆಯೆಂಬುದು ಮೌಂಟ್ ಎವರೆಸ್ಟ್ ಶಿಖರದಂತಿತ್ತು. ಕೀಳು ಜಾತಿಯವನು ಚಪ್ಪಲಿ ಧರಿಸುವಂತಿಲ್ಲ, ಆಭರಣ ಹಾಕುವುದು ನಿಷಿದ್ದ, ಮೈ ತುಂಬಾ ಬಟ್ಟೆ ಉಡುವುದಕ್ಕೂ ನಿಷೇಧವಿತ್ತು. ಮಡಿ, ಮೈಲಿಗೆ ಹೆಸರಿನಲ್ಲಿ ಕೆಳವರ್ಗದವರ ಇಂತಿಷ್ಟು ಅಡಿ ದೂರ ನಿಂತು ಮಾತನಾಡಬೇಕಿತ್ತು.

ಇನ್ನು ಧಾರ್ಮಿಕ ವ್ಯವಸ್ಥೆಯಂತೂ ಕುಲಗೆಟ್ಟು ಹೋಗಿತ್ತು. ಕೆಳವರ್ಗದ ಜನರು ವಿದ್ಯಾವಂತರಾಗುವುದು, ಹಾಗೂ ವೇದ ಪಠಣಗಳನ್ನು ಆಲಿಸುವ ಹಕ್ಕು ಇರಲಿಲ್ಲ. ಆಕಸ್ಮಾತ್ ಧಾರ್ಮಿಕ ಕಾರ್ಯಗಳನ್ನು ಕದ್ದು ಆಲಿಸುವವನಿಗೆ ಅಥವಾ ಪೂಜೆ ಮಾಡಬೇಕೆಂದು ಬಯಸುವವನಿಗೆ ಕಿವಿಗೆ ಸೀಸವನ್ನು ಕಾಯಿಸಿ ಹಾಕಲಾಗುತ್ತಿತ್ತು, ನಾಲಿಗೆ ಕತ್ತರಿಸಿ ಹಾಕಬೇಕೆಂಬ ಕಠೋರ ನಿಯಮವಿತ್ತು. ಇಂಥಹ ಸಂದಿಗ್ದ ಪರಿಸ್ಥಿತಿಯಲ್ಲಿ ಕೊಳಕು ವ್ಯವಸ್ಥೆಯನ್ನು ಶುಚಿಗೊಳಿಸಲು ಶ್ರೀನಾರಾಯಣ ಗುರುವೆಂಬ ಮಹಾಚೇತನದ ಆಗಮನ ಸರ್ವರಿಗೂ ಸಂತಸವನ್ನೇ ತಂದಿತ್ತು. ಕೇರಳ ರಾಜ್ಯದ ರಾಜಧಾನಿ ತಿರುವನಂತಪುರಂನಿಂದ 12ಕೀ.ಮಿ ದೂರ ವಿರುವ ಚೆಂಪಜಂತಿ ಎಂಬ ಹಳ್ಳಿಯಲ್ಲಿ ಶ್ರೀನಾರಾಯಣ ಗುರುಗಳು 1856 ರಲ್ಲಿ ತಿರುಒಣಂ ಹಬ್ಬವಾದ ನಂತರ ಮೂರನೇ ದಿನ ಶತಭಿಷ ನಕ್ಷತ್ರದಂದು ಮಾಡನ್ ಆಸನ್ ಹಾಗೂ ಕುಟ್ಟಿಯಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ಬಾಲ್ಯದಲ್ಲಿಯೇ ಆಧ್ಯಾತ್ಮದ ದಾರಿಯಲ್ಲಿ ಸಾಗುತ್ತಿದ್ದ ನಾಣುವಿಗೆ ಅವರ ಮಾವ ಕೃಷ್ಣನ್ ವೈದರ್ ಆಯರ್ವೇದದ ಬಗ್ಗೆ ಆಪಾರ ತಿಳುವಳಿಕೆ ಮೂಡಿಸಿದರು.
ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಸಾಮಾಜಿಕ ಸಮಸ್ಯೆಗಳನ್ನು ಅರಿತ ಶ್ರೀ ನಾರಾಯಣಗುರುಗಳು ಸಂಚಾರಿ ಜೀವನ ನಡೆಸುತ್ತಾ ಸಮಾಜದಲ್ಲಿ ಸಹೋದರತ್ವ ಹಾಗೂ ಭಾತೃತ್ವವನ್ನು ಭಾವನೆಗಳನ್ನು ಬಿತ್ತಿ ಸರ್ವರೂ ಮಾನವರಾಗಿ ಬದುಕಲು ಪರಿಹಾರ ಕಂಡು ಹಿಡಿಯುವುದಕ್ಕೂ ಅನೇಕ ಸಾಧು ಸಂತರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಆನಂತರ ಈ ಸಮಸ್ಯೆಗಳ ನಿವಾರಣೆಗೆ ಶಕ್ತಿ ಪಡೆಯಲು ಮತ್ತು ಪರಮಾತ್ಮ£ಂದ ಜ್ಞಾನೋದಯ ಪಡೆಯಲು ಕನ್ಯಾಕುಮಾರಿ ಬಳಿ ಇರುವ ಬೃಹತ್ ಬೆಟ್ಟವಾದ ನಿರ್ಜನ ಕಾಡು ಪ್ರಾಣಿಗಳಿಂದ ಕೊಡಿರುವ ಆಯುರ್ವೇದ ಔಷಧಿಗಳಿಗೆ ಹೆಸರಾಗಿರುವ ಮರುತ್ವಾಮಲೈ ಬೆಟ್ಟದಲ್ಲಿ ಮೂರು ವರುಷಗಳ ಕಾಲ ತಪಸ್ಸನ್ನು ಮಾಡಿದರು. ಈ ಅವಧಿಯಲ್ಲಿ ಪರಮಾತ್ಮನಿಂದ ಅಪ್ಪಣೆ ಪಡೆದುಕೊಂಡು ಸಮಾಜ ಸುಧಾರಣೆಯನ್ನು ಕೈಗೊಳ್ಳಲು ಪ್ರಾರಂಭಿಸಿದರು.

ತಪಸ್ಸು ಮಾಡಿದ ಸಂದರ್ಭ ದಲ್ಲಿ ತಮಗಾದ ಅನುಭವಗಳನ್ನು ದೈವ ದಶಕಂ ಎಂಬ ಕೃತಿಯಲ್ಲಿ ತಿಳಿಸಿದ್ದಾರೆ. ಶ್ರೀ ನಾರಾಯಣಗುರುಗಳು ಸಮಾಜ ಸಮಾಜ ಸುಧಾರಣೆಗೆ ಕೈಗೊಂಡ ತಿರ್ಮಾನಗಳು ಸರ್ವರಿಗೂ ಆಶ್ಚರ್ಯ ತರುತ್ತವೆ. ಏಕೆಂದರೆ ಗುರುಗಳು ಯಾರ ವಿರುದ್ದವೂ ಸಮರ ಸಾರಲಿಲ್ಲ, ಯಾರ ವಿರುದ್ದವೂ ಮಾತನಾಡಲಿಲ್ಲ. ಬದಲಾಗಿ ಯಾವ ವಿಷಯದಲ್ಲಿ ಅನ್ಯಾಯವಾಗುತ್ತಿದೆ ಎಂಬುದನ್ನು ಅರಿತು ಅದನ್ನೇ ನಾವು ಮಾಡಿ ನೆಮ್ಮದಿ ಬಾಳೋಣವೆಂಬ ವಿಶಾಲ ಹೃದಯ ಅವರದಾಗಿತ್ತು. ಒಂದೇ ಜಾತಿ, ಒಂದೇ ಮತ ಒಬ್ಬನೇ ದೇವರೆಂಬ ವಿಶ್ವಮಾನ್ಯ ಸಂದೇಶದ ಮೂಲಕ ಸರ್ವರನ್ನು ಒಂದೇ ಭಾವನೆಯಿಂದ ಕಾಣುತ್ತಿದ್ದರು.ದೇವರನ್ನು ಪೂಜಿಸುವ ಕಾರ್ಯದಿಂದ ದೂರವಿದ್ದು ಕೆಳವರ್ಗದ ಜನರಿಗೆ ನಿಮಗೆ ದೇವರನ್ನು ನಾನೇ ಪ್ರತಿಷ್ಟಾಪಿಸಿ ಕೊಡುತ್ತೇನೆ ನೀವೇ ಅದನ್ನು ಪೂಜಿಸಿ ಎಂದು ಹೇಳಿ 1888ನೇ ಇಸವಿ ಫೆಬ್ರವರಿ 10 ರಂದು ಮಹಾಶಿವರಾತ್ರಿ ಯಂದು ಅರವಿಪ್ಪುರಂ ಎಂಬಲ್ಲಿ ಶಿವಮಂದಿರ ನಿರ್ಮಿಸಿ ಲಕ್ಷಾಂತರ ಜನರ ಆಸೆಯನ್ನು ಪೂರೈಸಿದರು.

ಇದೊಂದು ಕ್ರಾಂತಿಕಾರಕ ಘಟನೆಯಾಗಿದ್ದು, ಅಂದು ಅವರ್ಣಿಯರೊಬ್ಬರೂ ದೇವರನ್ನು ಕಾಣಲು ಆಗದಿದ್ದ ಸಂದರ್ಭದಲ್ಲಿ ದೇವರನ್ನೇ ಪ್ರತಿಷ್ಠಾಪಿಸಿ ಪೂಜಿಸುವ ಸ್ವಾತಂತ್ರ್ಯ ತಂದು ಕೊಟ್ಟರೆಂದರೆ ಅಂದಿನಿಂದ ಕ್ರಾಂತಿಯ ಕಹಳೆ ಕೇರಳರಾಜ್ಯದಾದ್ಯಂತ ಮೂಡಿತು. ನಾರಾಯಣ ಗುರುಗಳು ಮೌನ ಕ್ರಾಂತಿಯ ಮೂಲಕವೇ ಅಸಾಧ್ಯವಾಗುವುದೆಲ್ಲವನ್ನು ಸಾಧಿಸಿ ತೋರಿಸಿದರು. ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಯುತರಾಗಿ ಎಂಬ ಸಂದೇಶದ ಮೂಲಕ ಭವಿಷ್ಯದ ಬದುಕಿನ ಬಗ್ಗೆ ತಿಳಿಸಿದರು. ಅಜ್ಞಾನವೇ ಸಮಸ್ಯೆಗೆ ಮೂಲವೆಂದರಿತ ನಾರಾಯಣಗುರುಗಳು ತಾವು ಹಿಂದೆ ಭಕ್ತಿ ಮಾರ್ಗದ ಮೂಲಕ ಜನರನ್ನು ಒಂದೆಡೆ ಸೇರಿಸಲು ಕಟ್ಟಿದ ದೇವಸ್ಥಾನದ ಪಡಶಾಲೆಗಳನ್ನೆ ಶಾಲೆಗಳನ್ನಾಗಿ ಪರಿವರ್ತಿಸಿ ರಾತ್ರಿ ಶಾಲೆಗಳನ್ನು ತೆರೆಯುವ ಮೂಲಕ ಸರ್ವರೂ ಶಿಕ್ಷಣವಂತರಾಗಬೇಕೆಂದು ಕರೆಕೊಟ್ಟರು.

ಈ ಭವಿಷ್ಯದಿಂದಾಗಿಯೇ ಇಡೀ ಕೇರಳ ರಾಜ್ಯ ಭಾರತದೇಶದಲ್ಲಿಯೇ ಸಾಕ್ಷರತೆಯಲ್ಲಿ ಮುಂದಿದೆ. ವೈಕಂ ಸತ್ಯಾಗ್ರಹದ ಮೂಲಕ ದೇವಸ್ಥಾನ ಪ್ರವೇಶ ಚಳುವಳಿ ಆರಂಭಿಸಿದರು. ಇದರ ಫಲವಾಗಿ ಕೇರಳ ರಾಜ್ಯದಲ್ಲಿ ಹಲವಾರು ದೇವಸ್ಥಾನಗಳಿಗೆ ಸರ್ವರಿಗೂ ಮುಕ್ತ ಅವಕಾಶ ದೊರೆಯುವಂತಾಯಿತು. ನಾರಾಯಣಗುರುಗಳ ಸಾಮಾಜಿಕ ಸುಧಾರಣೆಯನ್ನು ತಿಳಿದ ಮಹಾತ್ಮ ಗಾಂಧೀಜಿಯವರು ವರ್ಕಳದ ಶಿವಗಿರಿಗೆ ಬಂದು 1925 ನೇ ಇಸವಿ ಏಪ್ರಿಲ್ ನಲ್ಲಿ ಗುರುಗಳನ್ನು ಭೇಟಿ ಮಾಡಿ ಹಲವಾರು ವಿಷಯಗಳನ್ನು ಚರ್ಚಿಸಿದರು. ಬಳಿಕ ಮಾತನಾಡಿದ ಗಾಂಧೀಜಿಯವರು ಸುಂದರವಾದ ಕೇರಳವನ್ನು ಸಂದರ್ಶಿಸುವ ಸದವಕಾಶ ದೊರಕುವುದರೊಂದಿಗೆ ಪುಣ್ಯಪುರುಷ ಶ್ರೀ ನಾರಾಯಣಗುರುಗಳನ್ನು ಸಂಧಿಸುವ ಸೌಭಾಗ್ಯ ದೊರಕಿದ್ದು ನನ್ನ ಪುಣ್ಯ ವಿಶೇಷವೆಂದು ಭಾವಿಸಿದ್ದೇನೆ ಎಂದರು.
ಜಾತಿ ಯಾವುದಾದರೇನಂತೆ ಮನುಷ್ಯ ಒಳ್ಳೆಯವನಾದರೆ ಸಾಕೆಂಬ ಮನೋಭಾವ ಗುರುಗಳದಾಗಿತ್ತು. ಶ್ರೀಗಳ ಉದಾತ್ತ ಚಿಂತನೆ, ಸರಳ ಜೀವನ, ಯಾರನ್ನೂ ನಿಂದಿಸದೆ ಮೌನಕ್ರಾಂತಿಯ ಮೂಲಕ ಕೋಟ್ಯಾಂತರ ಜನರ ಹೃದಯ ಮಾನಸದಲ್ಲಿ ಸ್ಥಾನ ಗಳಿಸಿದರು. ನೊಬೆಲ್ ಪ್ರಶಸ್ತಿ ವಿಜೇತರಾದ ವಿಶ್ವಕವಿ ರವೀಂದ್ರನಾಥ ಠಾಗೂರ್ ರವರು 1922 ನವೆಂಬರ್ 22 ರಂದು ಶಿವಗಿರಿಗೆ ಭೇಟಿ ನೀಡಿ ಕೇರಳದಲ್ಲಿ ಆಗಿದ್ದ ಅಭೂತಪೂರ್ವ ಬದಲಾವಣೆ ಕಂಡು ಬೆರಗಾದರು. ಕೇರಳವೀಗ ಶಾಂತಿಧಾಮದಂತಿದ್ದು ಆಧ್ಯಾತ್ಮಿಕ ಕೇಂದ್ರವಾಗಿ ಇಡೀ ದೇಶಕ್ಕೆ ಮಾದರಿ ರಾಜ್ಯವಾಗಿತ್ತು. ಅಸ್ಟಶ್ಯತಾ ನಿವಾರಣೆ, ಜಾತಿಪದ್ದತಿ, ಮದ್ಯಪಾನ ನಿಷೇಧ, ಪ್ರಾಣಿಬಲಿ ನಿಷೇದಗಳಲ್ಲಿ ಗುರುಗಳ ಸ್ಪಷ್ಟ ನಿಲುವು ಅವಿರತ ಶ್ರಮದ ಫಲವಾಗಿ ಕೇರಳ ರಾಜ್ಯ ದೇವನಾಡೆಂದು ಪ್ರಸಿದ್ದಿ ಪಡೆಯಲು ಸಾಧ್ಯವಾಯಿತು.

ರವೀಂದ್ರನಾಥ ಠಾಗೂರ್ ಅವರು ನಾನು ವಿಶ್ವದ ನಾನಾ ಪ್ರದೇಶಗಳಲ್ಲಿ ಸಂಚರಿಸಿದ್ದೇನೆ. ಎಷ್ಟೋ ಸಾಧು ಸಂತರನ್ನು ಮಹರ್ಷಿಗಳನ್ನು ಕಂಡಿದ್ದೇನೆ. ಆದರೆ ಕೇರಳದ ನಾರಾಯಣ ಗುರುಗಳಷ್ಟು ಆಧ್ಯಾತ್ಮಿಕ ಔನ್ನತ್ಯ ಪಡೆದ ವಿಭೂತಿ ಪುರುಷರನ್ನು ನಾನು ಬೇರೆಲ್ಲೂ ಕಂಡಿಲ್ಲ. ಈಶ್ವರ ಸಾಕ್ಷಾತ್ಕಾರದಿಂದ ಪ್ರಭಾಪೂರ್ಣವಾದ ಆ ಮುಖವೂ, ಯೋಗ ದೃಷ್ಠಿಯುಳ್ಳ ಆ ಚಕ್ಷುಗಳು ನನ್ನ ಸ್ಮರಣೆಯಲ್ಲಿ ಅಚ್ಚಳಿಯದೆ ಉಳಿದಿದೆ ಎಂದಿರುವರು. ಹಲವಾರು ದೇವಸ್ಥಾನಗಳನ್ನು ಪ್ರತಿಷ್ಠಾಪಿಸಿ ಜನರಲ್ಲಿ ಭಕ್ತಿ ಉಂಟಾಗುವಂತೆ ಮಾಡಿದರು. ಶೈಕ್ಷಣಿಕ ಸಾಧನೆಯಿಂದ ಮಾತ್ರ ಪರಿಪೂರ್ಣ ಬದುಕು ಎಂಬ ಸತ್ಯವನ್ನು ಸಾರಿದರು. ಎಸ್‍ಎನ್‍ಡಿಪಿ ಯೋಗಂ ಸಂಸ್ಥೆಯನ್ನು ಪ್ರತಿಷ್ಠಾಪಿಸಿ ಸಂಘಟನೆಯ ಮೂಲಕ ಸಾಮಜಿಕ ನ್ಯಾಯ ಪಡೆದುಕೊಳ್ಳಲು ನೆರವಾದರು. ಜೀವಿತಾವಧಿಯಲ್ಲಿಯೇ ಹಲವಾರು ಸರ್ವಧರ್ಮ ಸಮ್ಮೇಳನ ನಡೆಸಿ ಸರ್ವರೂ ಒಂದಾಗಿ ಸಮಾನತೆಯಿಂದ ಬಾಳಬೇಕು ಎಂಬ ಸಂದೇಶ ಸಾರಿದರು.

ಕೇರಳದಾದ್ಯಂತ ಶಾಲೆಗಳು, ಆಸ್ಪತ್ರೆಗಳನ್ನು ಸ್ಥಾಪಿಸಿ ಬಡವರ ಉದ್ದಾರಕ್ಕೆ ಅಹರ್£ಶಿಯಾಗಿ ದುಡಿದರು. ಧರ್ಮ ಪ್ರಸಾರ ಹಾಗೂ ಜನಜಾಗೃತಿಗೆ ಶ್ರೀಲಂಕಾ ದೇಶಕ್ಕೂ ತೆರಳಿ ಸಾಮಾಜಿಕ ಸುಧಾರಣೆ ಮಾಡಿದರು. ಇಂತಹ ಮಹಾಚೇತನವು ಅವಿಶ್ರಾಂತವಾಗಿ ತ್ಯಾಗಮೂರ್ತಿಯಾಗಿ ಸೇವೆಗೈದು ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿ ಅನೇಕ ಪವಾಡಗಳನ್ನು ಮಾಡಿ 1928 ಸೆಪ್ಟೆಂಬರ್ 20ರಂದು ಶಿವಗಿರಿಯಲ್ಲಿ ಮಹಾಸಮಾಧಿ ಹೊಂದಿತು. ಇಂದಿಗೂ ಶಿವಗಿರಿ ಮಠವು ಲಕ್ಷಾಂತರ ಜನರ ಬಾಳಿಗೆ ಶ್ರದ್ದಾಕೇಂದ್ರವಾಗಿದ್ದು, ಸರಳತೆಯ ಸಾಕಾರ ಮೂರ್ತಿಗಳಾಗಿ ಜೀವಿಸಿ ಅಭೂತ ಪೂರ್ವ ಸಾಧನೆಗೈದ ಗುರುಗಳ  ಎಂತಹವರನ್ನು ಸರಳತೆಯ ಜೀವನ ಸಾಗಿಸಲು ಪ್ರೇರೇಪಿಸುತ್ತದೆ.

ಇಂತಹ ಮಹಾತ್ಮರ ಆದರ್ಶಗಳು ಇಂದಿನ ಮನುಕುಲದ ವಿಶ್ವಶಾಂತಿಗೆ ಅವಶ್ಯಕವಾಗಿ ಅನುಷ್ಠಾನಗೊಳ್ಳಬೇಕಿದೆ. ಕಾರಣ ಮಹಾತ್ಮರ ತತ್ತ್ವಗಳು ಮಾತಿಗಷ್ಠೆ ಸೀಮಿತವಾಗಿರುವ ಈ ಕಾಲದಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗ ಬೇಕಾದರೆ, ಸಹೋದರತ್ವದ ಬದುಕು ನಮ್ಮೆಲ್ಲರದಾಗಲು ನಾರಾಯಣಗುರುಗಳ ತತ್ತ್ವಗಳನ್ನು ನಾವು ಅಳವಡಿಕೊಳ್ಳಬೇಕು. ಇಂಥಹ ಮಹಾತ್ಮರ ಜಯಂತಿಯನ್ನು ಕರ್ನಾಟಕ ಸರ್ಕಾರವು ಪ್ರತಿವರ್ಷವು ಆಚರಿಸುವ ನಿರ್ಣಯ ಕೈಗೊಂಡಿರುವುದು ಸಂತಸದ ವಿಷಯವಾಗಿದೆ. ಈಗಾಗಲೇ ಭಾರತ ಸರ್ಕಾರ ಹಾಗೂ ಶ್ರೀಲಂಕಾ ಸರ್ಕಾರಗಳು ಗುರುಗಳ ಹೆಸರಿನಲ್ಲಿ ಅಂಚೆ ಚೀಟಿ ಬಿಡುಗಡೆಗೊಳಿಸಿವೆ ಹಾಗೂ ಗುರುಗಳ ಭಾವಚಿತ್ರದ ನಾಣ್ಯವನ್ನು ಬಿಡುಗಡೆಗೊಳಿಸಿದೆ. ಇಂಥಹ ದಾರ್ಶನಿಕರಿಗೆ ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ವರ್ಷ ನಾರಾಯಣಗುರು ಜಯಂತಿಯನ್ನು ಸರ್ಕಾರದ ವತಿಯಿಂದಲೇ ಆಚರಿಸುವ ನಿರ್ಣಯ ಕೈಗೊಂಡಿದ್ದು ಗುರುಗಳ ಸಾಮಾಜಿಕ ಸುಧಾರಣೆಗೆ ಮತ್ತೊಂದು ಹಿರಿಮೆ ಲಭಿಸಿದಂತಾಗಿದೆ.

ಇಂತಹ ಸಂದರ್ಭದಲ್ಲಿ ನಾವು ಸಹ ದಾರ್ಶನಿಕರು ತೋರಿದ ಹಾದಿಯಲ್ಲಿ ನಡೆದು ಸ್ವರ್ಗ ಸಮಾಜ ನಿರ್ಮಿಸಲು ಮಂದಾಗೋಣ.1856 ತಿರುಒಣಂ ಹಬ್ಬವಾದ ಮೂರು ದಿನಗಳ ನಂತರ ಬರುವ ಶತಭಿಷ ನಕ್ಷತ್ರದಂದು ಕೇರಳದಲ್ಲಿ ಶ್ರೀ ನಾರಾಯಣಗುರುಗಳು ಜನಿಸಿ ಅಭೂತ ಪೂರ್ವ ಸಮಾಜ ಸುಧಾರಣೆ ಮಾಡಿದರು, ಅಂಥಹ ಮಹಾತ್ಮರ ಜಯಂತಿಯನ್ನು ಕರ್ನಾಟಕ ಸರ್ಕಾರವು ಸರ್ಕಾರಿ ಜಯಂತಿಯನ್ನಾಗಿ ಆಚರಿಸಲು ಕ್ರಮ ಕೈಗೊಂಡಿದ್ದು ಸೆಪ್ಟೆಂಬರ್ 16ರ ಶತಭಿಷ ನಕ್ಷತ್ರದಂದು ಶ್ರೀನಾರಾಯಣಗುರುಗಳ 162 ನೇ ಜಯಂತಿ ಆಚರಿಸುತ್ತಿರುವ ಸಂದರ್ಭದಲ್ಲಿ ಗುರುಗಳ ಸಾಮಾಜಿಕ ಕಾರ್ಯಗಳನ್ನು ನೆನಪಿಸುವ ಸಣ್ಣ ಪ್ರಯತ್ನ.ಪ್ರಸಕ್ತ ಸನ್ನಿವೇಶದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರಗಳು ಮತ್ತು ಮಾಡಿದ ಕಾರ್ಯಗಳು ಮನನ ಮಾಡಿದರೆ ಸಕಲ ಸಮಾಜದ ಬಾಂಧವರು ಒಟ್ಟಿಗೆ ಅವರ ಸ್ಮರಣೆ ಮಾಡುವ ಮುಖಾಂತರ ಇಂದು ಎದುರಾಗುತ್ತಿರುವ ಭಾಷಾ, ಜಾತಿ ಪ್ರಾಂತೀಯ ಭಾವನೆಗಳನ್ನ ಬದಿಗೊತ್ತಿ ಭಾರತದ ಪ್ರತಿಯೊಬ್ಬ ಪ್ರಜೆಯು ಪ್ರಜ್ಞಾವಂತರಾಗಿ ವ್ಯವಹರಿಸುವ ಕಾಲ ಬಂದಿದೆ.

ಒಬ್ಬ ವಿಚಾರವಾದಿ ನಾಯಕನನ್ನು ಯಾವುದೇ ಒಂದು ಜಾತಿಗೆ, ಪ್ರಾಂತ್ಯಕ್ಕೆ ಹೋಲಿಸದೆ ಅವರ ಆಧ್ಯಾತ್ಮಿಕ ಚಿಂತನೆಯನ್ನು ಎಲ್ಲರು ಅಳವಡಿಸಿಕೊಂಡು, ಅವರ ಘೋಷವಾಕ್ಯವಾದ ಒಂದೇ ಜಾತಿ, ಅಂದರೆ ನಾವೆಲ್ಲರೂ ಭಾರತೀಯರು, ಒಂದೇ ಮತ ಅಂದರೆ ಅವರವರ ಪಂಥಗಳೂ ಬೇರೆಯಾದರು ಒಂಮ್ಮತದಿಂದ ನಡೆಯುವುದು ಮತ್ತು ಒಬ್ಬನೇ ದೇವರು ಅರ್ಥಾತ ನಾಮ ಹಲವು, ಇಂಥ ವಿಚಾರದೊಂದಿಗೆ ನಾವೆಲ್ಲರು ಒಟ್ಟಾಗಿ ಅವರ ಜಯಂತಿ ಆಚರಿಸಿ ನಮ್ಮಲ್ಲಿ ಒಡಕು ಹುಟ್ಟು ಹಾಕುತ್ತಿರುವ ಪಟ್ಟಭದ್ರ, ವಿಘಟಿತ ಶಕ್ತಿಗಳನ್ನು ಮೆಟ್ಟಿ ನಿಲ್ಲುವಂತಾಗೋಣ.

ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಅಂಗವಾಗಿ ಲೇಖನ

 

► Follow us on –  Facebook / Twitter  / Google+

 

Facebook Comments

Sri Raghav

Admin