ಬ್ರಿಗೇಡ್ ಫೈಟ್ : ಈಶ್ವರಪ್ಪ ವಿರುದ್ಧ ವರಿಷ್ಠರಿಗೆ ಯಡಿಯೂರಪ್ಪ ದೂರು

ಈ ಸುದ್ದಿಯನ್ನು ಶೇರ್ ಮಾಡಿ

Eshwarappa

ಬೆಂಗಳೂರು,ಆ.20 – ಪಕ್ಷದ ಆದೇಶವನ್ನು ಧಿಕ್ಕರಿಸಿ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಸಮಾವೇಶ ಆಯೋಜಿಸಲು ಮುಂದಾಗಿರುವ ಕೆ.ಎಸ್.ಈಶ್ವರಪ್ಪ ವಿರುದ್ಧ ಕೇಂದ್ರ ವರಿಷ್ಠರಿಗೆ ದೂರು ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದಾರೆ.  ನಾಳೆ ಮಂಗಳೂರಿನಲ್ಲಿ ತಿರಂಗ ರ್ಯಾ ಲಿ ನಡೆಯಲಿದ್ದು, ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಯಡಿಯೂರಪ್ಪ ಈ ದೂರು ನೀಡುವ ಸಾಧ್ಯತೆ ಇದೆ.   ಇದರ ಜೊತೆಗೆ ಇದೇ 25ರಂದು ನವದೆಹಲಿಯಲ್ಲಿ ದೇಶದ ಎಲ್ಲಾ ರಾಜ್ಯಗಳ ಮುಖಂಡರ ಕೋರ್ ಕಮಿಟಿ ಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ಪಕ್ಷದ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಈಶ್ವರಪ್ಪ ಮೇಲೆ ಬಿಎಸ್ವೈ ದೂರು ನೀಡಲು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ.

23ರಂದು ನವದೆಹಲಿಯಲ್ಲಿ ನಡೆಯಲಿರುವ ಕೋರ್ ಕಮಿಟಿ ಸಭೆಗೆ ಎಲ್ಲರೂ ಹಾಜರಾಗಬೇಕೆಂದು ಅಮಿತ್ ಷಾ ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಂಸದೀಯ ಮಂಡಳಿ ಸದಸ್ಯರು, ಕಾರ್ಯಕಾರಿಣಿ ಸದಸ್ಯರು ಹಾಗೂ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ. ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಕುರಿತಂತೆ ಪಕ್ಷ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಇಲ್ಲಿ ಚರ್ಚಿಸಲಾಗುವುದು.  ಇದೇ ಸಮಯವನ್ನು ಕಾಯುತ್ತಿರುವ ಯಡಿಯೂರಪ್ಪ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲವೆ, ಲಕ್ಷ್ಮಣರೇಖೆ ದಾಟದಂತೆ ಸೂಚಿಸಬೇಕೆಂದು ವರಿಷ್ಠರಿಗೆ ಕೋರಲಿದ್ದಾರೆ. ಯಾವುದೇ ಕಾರಣಕ್ಕೂ ಯಾರೊಬ್ಬರೂ ಪಕ್ಷದ ಚಿಹ್ನೆ ಹೊರತುಪಡಿಸಿ ಪ್ರತ್ಯೇಕ ಸಭೆ, ಸಮಾರಂಭಗಳನ್ನು ನಡೆಸಬಾರದೆಂದು ಯಡಿಯೂರಪ್ಪ ಸೂಚನೆ ಕೊಟ್ಟಿದ್ದರು. ಆದರೆ ಅವರ ಆದೇಶವನ್ನು ಧಿಕ್ಕರಿಸಿ ಕೆ.ಎಸ್.ಈಶ್ವರಪ್ಪ ಎರಡು ದಿನಗಳ ಹಿಂದೆ ಸಭೆ ನಡೆಸಿದ್ದರು.

ಮುಂದಿನ ತಿಂಗಳ ಎರಡನೇ ವಾರದಲ್ಲಿ ಮಧ್ಯ ಕರ್ನಾಟಕದ ಹಾವೇರಿ ಇಲ್ಲವೆ, ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸುವುದು ಹಾಗೂ ಈ ಕಾರ್ಯಕ್ರಮಕ್ಕೆ ಬಿಎಸ್ವೈ ಅವರನ್ನೇ ಆಹ್ವಾನಿಸುವ ಉದ್ದೇಶ ಅವರದ್ದಾಗಿತ್ತು.  ತಮ್ಮ ಮಾತನ್ನು ಮೀರಿ ಕಾರ್ಯಕ್ರಮ ಆಯೋಜಿಸಿರುವ ಈಶ್ವರಪ್ಪ ನಡೆಗೆ ಬಿಎಸ್ವೈ ಕೆಂಡ ಕಾರಿದ್ದಾರೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಸಮಸ್ಯೆ ಸೃಷ್ಟಿಸಬಹುದೆಂಬ ಹಿನ್ನೆಲೆಯಲ್ಲಿ ವರಿಷ್ಠರಿಗೆ ದೂರು ನೀಡಲು ಸಜ್ಜಾಗಿದ್ದಾರೆ.   ಇನ್ನು ಶತಾಯಗತಾಯ ಪಕ್ಷದಲ್ಲಿ ಬಿಎಸ್ವೈಗೆ ಸೆಡ್ಡು ಹೊಡೆಯಲೇ ಬೇಕೆಂದು ತೀರ್ಮಾನಿಸಿರುವ ಈಶ್ವರಪ್ಪ ನಡೆ ಇನ್ನಷ್ಟು ಕುತೂಹಲ ಕೆರಳಿಸಿದೆ.  ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಹಕ್ಕಬುಕ್ಕ ಎಂದೇ ಯಡಿಯೂರಪ್ಪ- ಈಶ್ವರಪ್ಪ ಅವರನ್ನು ಕರೆಯುತ್ತಿದ್ದರು. ಅಣ್ಣ-ತಮ್ಮ ಎಂದೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಈ ಸಹೋದರರ ಕಾಳಗ ಮುಂದಿನ ದಿನಗಳಲ್ಲಿ ಅದ್ಯಾವ ಸ್ವರೂಪ ಪಡೆಯಲಿದೆಯೋ ಎಂಬುದು ಸದ್ಯದ ಯಕ್ಷಪ್ರಶ್ನೆ.

ದೆಹಲಿಗೆ ಬುಲಾವ್ :

ಪಕ್ಷದಲ್ಲಿ ನಾಯಕರ ನಡುವೆ ಅಸಮಾಧಾನದ ಹೊಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ನಾಯಕರಿಗೆ ವರಿಷ್ಠರಿಗೆ ದೆಹಲಿಗೆ ಆಗಮಿಸುವಂತೆ ಬುಲಾವ್ ನೀಡಿದ್ದಾರೆ.
ಯಡಿಯೂರಪ್ಪ, ಈಶ್ವರಪ್ಪ, ಪ್ರಹ್ಲಾದ್ ಜೋಷಿ, ಸಂಘಟನಾ ಕಾರ್ಯದರ್ಶಿ ಸಂತೋಷ್ ಹಾಗೂ ಕೇಂದ್ರ ಸಚಿವರಾದ ಅನಂತ್ಕುಮಾರ್, ಡಿ.ವಿ.ಸದಾನಂದಗೌಡ ಅವರುಗಳು ಪ್ರತ್ಯೇಕವಾಗಿ ವರಿಷ್ಠರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.  ನಾಳೆ ಸಂಜೆ ದೆಹಲಿಗೆ ತೆರಳಿ ಸೋಮವಾರ ಕೇಂದ್ರ ವರಿಷ್ಠರೊಂದಿಗೆ ಪಕ್ಷದ ಬೆಳವಣಿಗೆ ಕುರಿತಂತೆ ಗುಪ್ತ ಸಮಾಲೋಚನೆ ನಡೆಸಲಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತದ ಬಗ್ಗೆ ಪಕ್ಷದ ಉಸ್ತುವಾರಿ ಮುರಳೀಧರ್ರಾವ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಗೆ ಬುಲಾವ್ ನೀಡಲಾಗಿದೆ.

ಷಾ ಸೂಚನೆ :

ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಬಿಜೆಪಿಗೆ ಹಿನ್ನಡೆಯಾಗಬಾರದು, ನಾಯಕರೆಲ್ಲರೂ ತಮ್ಮ ತಮ್ಮ ವೈಮನಸ್ಯ ಮರೆತು ಸಂಘಟನೆ ಹಾಗೂ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin