ಬ್ರಿಟನ್ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ, ಪ್ರಧಾನಿ ಥೆರೆಸಾ ಮೇ ಗೆ ಬಹುಮತ ಕೊರತೆ
ಲಂಡನ್, ಜೂ.9-ಬ್ರಿಟನ್ ಸಂಸತ್ತಿನ (ಹೌಸ್ ಆಫ್ ಕಾಮನ್ಸ್) 650 ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಅತಂತ್ರವಾಗಿದ್ದು, ಪ್ರಧಾನಮಂತ್ರಿ ಥೆರೆಸಾ ಮೇ ನೇತೃತ್ವದ ಕನ್ಸರ್ವೇಟಿವ್ ಪಕ್ಷವು ಬಹುಮತ ಕೊರತೆ ಎದುರಿಸುತ್ತಿದೆ. ಈ ಫಲಿತಾಂಶದಿಂದ ಇಂಗ್ಲೆಂಡ್ನಲ್ಲಿ ಅನಿಶ್ಚಿತತೆಗೆ ಕಾರಣವಾಗಿದೆ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಮೇ ನೇತೃತ್ವದ ಪಕ್ಷದ ಸಾಮಥ್ರ್ಯವು 330 ರಿಂದ 314ಕ್ಕೆ ಕುಸಿದಿದ್ದರೆ, ಎಡಪಂಥೀಯ ನಾಯಕ ಜೆರೆಮಿ ಕಾರ್ಬಿನ್ ನಾಯಕತ್ವದ ಲೇಬರ್ ಪಕ್ಷ ತನ್ನ ಬಲವನ್ನು 229 ರಿಂದ 266ಕ್ಕೆ ವೃದ್ದಿಸಿಕೊಳ್ಳಲಿದೆ ಎಂದು ಸ್ಕೈ, ಬಿಬಿಸಿ ಮತ್ತು ಐಟಿವಿ ಜಂಟಿಯಾಗಿ ನಡೆಸಿದ ಸಮೀಕ್ಷೆ ಭವಿಷ್ಯ ನುಡಿದಿವೆ. ಇಂದು ರಾತ್ರಿ ವೇಳೆಗೆ ಬ್ರಿಟನ್ ಸಂಸತ್ ಚುನಾವಣೆ ಫಲಿತಾಂಶದ ಸ್ಪಷ್ಟ ಚಿತ್ರಣ ಲಭಿಸಲಿದೆ.
ಮೇ ಅವರು ದಿಢೀರ್ ನಡೆದ ಈ ಚುನಾವಣೆಯಲ್ಲಿ ಜಯಗಳಿಸಿದರೂ, ಸಂಸತ್ತಿನಲ್ಲಿ ಬಹುಮತ ಕಳೆದುಕೊಳ್ಳಲಿದ್ದಾರೆ. ಇದರಿಂದ ಬ್ರಿಟನ್ನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಈ ಫಲಿತಾಂಶದ ಹಿನ್ನೆಲೆಯಲ್ಲಿ ಬ್ರಿಎಕ್ಸಿಟ್(ಬ್ರಿಟನ್ ಎಕ್ಸಿಟ್-ಐರೋಪ್ಯ ಒಕ್ಕೂಟದಿಂದ ಇಂಗ್ಲೆಂಡ್ ಹೊರಬರುವ ಪ್ರಕ್ರಿಯೆ) ವಿದ್ಯಮಾನವನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಇಂಗ್ಲೆಂಡ್ನಲ್ಲಿ ಇತ್ತೀಚೆಗೆ ಮರುಕಳಿಸುತ್ತಿರುವ ಭಯೋತ್ಪಾಧಕರ ದಾಳಿಗಳು ಪ್ರಕರಣವು ಮೇ ನಾಯಕತ್ವವನ್ನು ಬ್ರಿಟನ್ ಜನತೆ ಅನುಮಾನದಿಂದ ನೋಡುವಂತಾಗಿದೆ. ಇದು ಚುನಾವಣೆಯಲ್ಲಿ ಅವರ ವರ್ಚಸ್ಸಿನ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಚುನಾವಣಾ ನಂತರದ ಸಮೀಕ್ಷೆಗಳು ಕಾರಣ ನೀಡಿವೆ.
ನಿಗದಿತ ಅವಧಿಗಿಂತ ಮೂರು ವರ್ಷಗಳ ಮುನ್ನವೇ ಚುನಾವಣೆ ನಡೆಸಲು ಪ್ರಧಾನಿ ಕೈಗೊಂಡ ನಿರ್ಧಾರವನ್ನು ಈಗ ಅದೇ ಪಕ್ಷದವರು ಪ್ರಶ್ನಿಸುವಂತಾಗಿದೆ. ಅಲ್ಲದೇ ಯುರೋಪ್ ಸಮುದಾಯದಿಂದ ಹೊರಬರಲು ಮಾತುಕತೆ ಪ್ರಕ್ರಿಯೆಗೆ ಚಾಲನೆ ದೊರೆತ ಸಂದರ್ಭದಲ್ಲೇ ಈ ಫಲಿತಾಂಶವು ಮೇ ನೇತೃತ್ವದ ಪಕ್ಷಕ್ಕೆ ಹಿನ್ನಡೆಯಾಗುವಂತೆ ಮಾಡಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS