ಬ್ರಿಟನ್ ಸಂಸತ್ ಬಳಿ ಉಗ್ರರ ದಾಳಿ : ಮೃತರ ಸಂಖ್ಯೆ 5ಕ್ಕೇರಿಕೆ, 40 ಮಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Londan-Attack

ಲಂಡನ್, ಮಾ.23-ಬ್ರಿಟನ್ ಸಂಸತ್ತಿನ ಬಳಿ ಬುಧವಾರ ಏಕಕಾಲದಲ್ಲಿ ವಿವಿಧೆಡೆ ನಡೆದ ಭಯೋತ್ಪಾದಕ ದಾಳಿಗಳಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೇರಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಉಗ್ರರ ಆಕ್ರಮಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರೂ ಮೃತಪಟ್ಟಿದ್ದಾರೆ.
ಲಂಡನ್ ಭಯೋತ್ಪಾದಕರ ದಾಳಿ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಇಂಥ ಸಂಕಷ್ಟ ಸಂದರ್ಭದಲ್ಲಿ ಇಂಗ್ಲೆಂಡ್‍ಗೆ ಭಾರತ ನೈತಿಕ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ.

ದಾಳಿಕೋರನೊಬ್ಬ ಸಂಸ್ತ್ತಿನ ಆವರಣಕ್ಕೆ ನುಗ್ಗಿ ಪೊಲೀಸರಿಗೆ ಇರಿದಿದ್ದಾನೆ. ನಂತರ ಸಂಸತ್ ಭವನದತ್ತ ನುಗ್ಗುತಿದ್ದ ಆತನನ್ನು ಭದ್ರತಾಪಡೆ ಸಿಬ್ಬಂದಿ ಗುಂಡಿಟ್ಟು ಕೊಂದರು. ಭಯೋತ್ಪಾದಕ ದಾಳಿಯಲ್ಲಿ ಕೀಥ್ ಪಲ್ಮೇರ್(48) ಮೃತಪಟ್ಟಿದ್ದಾರೆ ಎಂದು ಹೌಸ್ ಆಫ್ ಕಾಮನ್ಸ್ ಸಭಾಧ್ಯಕ್ಷ ಡೇವಿಡ್ ಲಿಡಿಂಗ್ಟನ್ ಹೇಳಿದ್ದಾರೆ. ಇದೊಂದು ಅಂತಾರಾಷ್ಟ್ರೀಯ ಭಯೋತ್ಪಾದನೆ ಪ್ರೇರಿತ ಕೃತ್ಯ ಎಂದು ಲಂಡನ್ ಮೆಟ್ರೋಪಾಲಿಟನ್ ಮತ್ತು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  ಈ ದಾಳಿ ನಂತರ ಹೌಸ್ ಆಫ್ ಕಾಮನ್ಸ್‍ನಲ್ಲಿ ನಡೆಯುತ್ತಿದ್ದ ಅಧಿವೇಶನವನ್ನು ಕೂಡಲೇ ಮೊಟಕುಗೊಳಿಸಲಾಯಿತು.. ಸಂಸತ್ ಕಟ್ಟಡದಲ್ಲೇ ಉಳಿದುಕೊಳ್ಳುವಂತೆ ಎಲ್ಲ ಸದಸ್ಯರಿಗೆ ಸೂಚಿಸಲಾಗಿತ್ತು. ನಂತರ ಅವರನ್ನೆಲ್ಲಾ ಸುರಕ್ಷಿತವಾಗಿ ತೆರವುಗೊಳಿಸಲಾಯಿತು.

ಮತ್ತೊಂದು ಭೀಕರ ದಾಳಿ :

ಇದೇ ವೇಳೆ ಸಂಸತ್ ಭವನದ ಬಳಿ ವೆಸ್ಟ್‍ಮಿನಿಸ್ಟರ್ ಸೇತುವೆ ಮೇಲೆ ಉಗ್ರನೊಬ್ಬ ಕಾರನ್ನು ಅತಿ ವೇಗವಾಗಿ ಚಾಲನೆ ಮಾಡಿ ಪಾದಚಾರಿಗಳ ಮೇಲೆ ನುಗ್ಗಿಸಿದ. ಈ ಘಟನೆಯಲ್ಲಿ ನಾಲ್ವರು ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.

ಖಂಡನೆ :

ಲಂಡನ್ ನಗರಿಯಲ್ಲಿ ನಡೆದ ಉಗ್ರರ ದಾಳಿಗಳನ್ನು ಬ್ರಿಟನ್ ಪ್ರಧಾನಿ ತೆರೇಸಾ ಮೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ದೇಶಗಳ ಮುಖಂಡರು ಖಂಡಿಸಿದ್ದಾರೆ. ಭಯೋತ್ಪಾದನೆಯನ್ನು ದಮನ ಮಾಡುವ ಅಂತಾರಾಷ್ಟ್ರೀಯ ಯತ್ನಗಳಿಗೆ ಕೈಜೋಡಿಸುವುದಾಗಿ ಮುಖಂಡರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin