ಗುಂಡಿಟ್ಟು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh

ಬೆಂಗಳೂರು. ಸೆ.05 : ಬೆಂಗಳೂರಿನ ರಾಜರಾಜೇಶ್ವರಿ ನಗರ ಮನೆಯಲ್ಲಿ  ಪತ್ರಕರ್ತೆ, ಸಾಹಿತಿ, ವಿಚಾರವಾದಿ  ಗೌರಿ ಲಂಕೇಶ್ ಅವರನ್ನು  ಗುಂಡಿಟ್ಟು ಹತ್ಯೆ ಮಾಡಲಾಗಿದೆ.  ಜರಾಜೇಶ್ವರಿನಗರದಲ್ಲಿರುವ ಅವರ ನಿವಾಸದಲ್ಲೇ ಸಂಜೆ 7.30 ರ ಸುಮಾರಿಗೆ ಮೂವರಿಂದ ನಾಲ್ವರು ದುಷ್ಕರ್ಮಿಗಳು ಮೂರು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

IMG-20170905-WA0132

ಸಾಹಿತಿ ಎಂ.ಎಂ. ಕಲಬುರಗಿ ಹತ್ಯೆ ಮಾಸುವ ಮುನ್ನವೇ ಆಗುಂತಕರು ಗೌರಿ ಲಂಕೇಶ್ ಅವರನ್ನು ಭಯನಾಕವಾಗಿ ಕೊಲೆ ಮಾಡಿರುವುದು ಆತಂಕ ಸೃಷ್ಟಿಸಿದೆ.  ಈ ಘಟನೆ ಯಾವ ಸಂದರ್ಭದಲ್ಲಿ ನಡೆದಿದೆ ಎಂಬುದು ತನಿಖೆಯ ನಂತರ ಗೊತ್ತಾಗಲಿದೆ. ಅವರು ಮನೆಯಲ್ಲಿ ಒಬ್ಬರೇ ಇದ್ದಾಗ ಈ ಘಟನೆ ನಡೆದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ನಾಡು ಕಂಡ ಅಪರೂಪದ ಪತ್ರಕರ್ತ ದಿ. ಪಿ ಲಂಕೇಶ್ ಅವರ ಹಿರಿಯ ಪುತ್ರಿಯಾಗಿದ್ದ ಗೌರಿ ತಮ್ಮದೇ ಸಂಪಾದಕತ್ವದ ಲಂಕೇಶ್ ವಾರ ಪತ್ರಿಕೆಯನ್ನು ನಡೆಸುತ್ತಿದ್ದರು. ಎಡಪಂಥೀಯ ವಿಚಾರಗಳ ಪರ ಯಾವಾಗಲೂ ಮುಂಚೂಣಿಯಲ್ಲಿರುತ್ತಿದ್ದ ಅವರು, ನಕ್ಸಲೀಯರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಅವರ ಪ್ರಯತ್ನದ ಫಲವಾಗಿಯೇ ಅನೇಕ ನಕ್ಸಲೀಯರು ಬಂದೂಕು ಬಿಟ್ಟು ನಾಡಿಗೆ ಬಂದಿದ್ದರು.

IMG-20170905-WA0134

ಪ್ರಮುಖವಾಗಿ ಆರ್‍ಎಸ್‍ಎಸ್, ಸಂಘಪರಿವಾರ, ಬಿಜೆಪಿಯ ಸಿದ್ದಾಂತಗಳನ್ನು ಅತ್ಯಂತ ಪ್ರಬಲವಾಗಿ ವಿರೋಧಿಸುತ್ತಿದ್ದ ಗೌರಿ, ತಮ್ಮ ನಿಷ್ಟುರ ಬರವಣಿಗೆಯಿಂದಲೇ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಕೆಲ ಸಂದರ್ಭಗಳಲ್ಲಿ ಅವರ ಮೇಲೆ ಹಲ್ಲೆಯೂ ನಡೆದಿತ್ತು. ತಮ್ಮ ಪತ್ರಿಕೆಯಲ್ಲಿ ಜನಪರ,ಹಾಗೂ ಎಡಪಂಥೀಯ ವಿಚಾರಗಳಿಗೆ ಒತ್ತುಕೊಡುತ್ತಿದ್ದ ಅವರು, ಹಿಂದುತ್ವದ ವಿರುದ್ದ ಕೆಂಡ ಕಾರುತ್ತಿದ್ದರು.
ಅಲ್ಪಸಂಖ್ಯಾತರ ಮೇಲೆ ಹಲ್ಲೆ, ಬಾಬಾ ಬುಡನ್‍ಗಿರಿ ವಿವಾದ, ಮಹಿಳೆಯರ ಮೇಲೆ ದೌರ್ಜನ್ಯ ಸೇರಿದಂತೆ ಯಾವುದೇ ವಿಷಯಗಳಲ್ಲೂ ಬೆಂಕಿ ಉಗಳುತ್ತಿದ್ದರು.

ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಸಿಲುಕಿದ ಅದರಲ್ಲೂ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ವಿರುದ್ಧವಂತ ಸರಣಿ ಲೇಖನಗಳನ್ನೇ ಪ್ರಕಟಿಸಿದ್ದರು. ತಮ್ಮ ತಂದೆ ಲಂಕೇಶ್ ನಿಧನರಾದ ನಂತರ ಪತ್ರಿಕೆ ಮುನ್ನಡೆಸುವ ಜವಾಬ್ದಾರಿ ಅವರಿಗೆ ಸಿಕ್ಕಿತ್ತಾದರೂ ಕುಟುಂಬದ ಕಲಹದಿಂದಾಗಿ ಹೊಸ ಪತ್ರಿಕೆಯನ್ನೇ ಹುಟ್ಟು ಹಾಕಿದ್ದರು. ಜೀವನದ್ದುದಕ್ಕೂ ಹೋರಾಟದ ಹಾದಿಯನ್ನೇ ತುಳಿದಿದ್ದ ಗೌರಿ ಲಂಕೇಶ್, ವೈವಾಹಿಕ ಜೀವನವು ಅಷ್ಟಕಷ್ಟೇ ಎಂಬಂತಿತ್ತು. ತಾನೇ ಇಷ್ಟಪಟ್ಟು ವಿವಾಹವಾಗಿದ್ದ ಪತ್ರಕರ್ತ ಚಿದಾನಂದ ರಾಜಘಟ್ಟ ಜತೆ ಸಂಸಾರಿಕ ಜೀವನ ನಡೆಸದೇ ವಿಚ್ಚೇಧನ ಪಡೆದರು. ಲಂಕೇಶ್ ಗರಡಿಯಲ್ಲೇ ಪಳಗಿದ ಅವರು, ಬಳಿಕ ತಮ್ಮ ತಂಗಿ ಹಾಗೂ ಚಿತ್ರನಿರ್ಮಾಪಕಿ ಕವಿತಾ ಲಂಕೇಶ್ ಹಾಗೂ ತಾಯಿಯ ಜತೆ ಜೀವನ ನಡೆಸುತ್ತಿದ್ದರು.  ತಮ್ಮ ನಿಷ್ಠುರ ಬರವಣಿಗೆಯಿಂದಲೇ ಹೆಸರುವಾಗಿದ್ದ ಗೌರಿ ಇನ್ನು ನೆನಪು ಮಾತ್ರ.

Gouri-Lankesh-01

JUST IN UPDATES : 

>  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ರಾಜ್ಯದ ಹಲವೆಡೆ ಪ್ರತಿಭಟನೆ

> ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸಹೋದರ ಇಂದ್ರಜಿತ್ ಲಂಕೇಶ್ ಒತ್ತಾಯ

> ಗೌರಿ ಲಂಕೇಶ್ ಹತ್ಯೆ ತನಿಖೆಗೆ 3 ತಂಡಗಳ ರಚನೆ, ಮನೆಯ ಸುತ್ತಮುತ್ತಲಿನ ಸಿಸಿಟಿವಿ ವಶಕ್ಕೆ

> ಗೌರಿ ಲಂಕೇಶ್ ಮನೆಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಭೇಟಿ

> ವಿಕ್ಟೊರಿಯಾ ಆಸ್ಪತ್ರೆಯಲ್ಲಿ  ನಾಳೆ  ಮರಣೋತ್ತರ ಪರೀಕ್ಷೆ

> ವಿಕ್ಟೊರಿಯಾ ಆಸ್ಪತ್ರೆಗೆ  ಮೃತದೇಹ  ರವಾನೆ

> ಕೆಂಗೇರಿ ಎಸಿಪಿಯವರು ಗೌರಿ ಲಂಕೇಶ್ ಹತ್ಯೆಯನ್ನು ಖಚಿತಪಡಿಸಿದ್ದಾರೆ.

> ರಾಜರಾಜೇಶ್ವರಿ ನಗರದ ಸುಭಾಶ್ ಪಾರ್ಕ್ ಬಳಿ ಘಟನೆ ನಡೆದಿದ್ದು, ಗೌರಿ ಲಂಕೇಶ್ ಸಾವನ್ನು ಡಿಸಿಪಿ ಅನುಚೇತ್ ಖಚಿತ ಪಡಿಸಿದ್ದಾರೆ.

 ಖ್ಯಾತ ಸಾಹಿತಿ ಎಂಎಂ ಕಲಬುರ್ಗಿ ಹತ್ಯೆಯ ನೆನಪು ಇನ್ನೂ ಹಸಿಯಾಗಿರುವಾಗಲೇ ಇಡೀ ದೇಶ ಬೆಚ್ಚಿಬೀಳುವ ಇನ್ನೊಂದು ಹತ್ಯೆಗೆ ಬೆಂಗಳೂರು ನಗರ ಸಾಕ್ಷಿಯಾಗಿದೆ.

> ಅಪರಿಚಿತ ಇಬ್ಬರು ದುಷ್ಕರ್ಮಿಗಳು ಸಂಜೆ ಮನೆ ಬಾಗಿಲನ್ನು ತಟ್ಟಿದ್ದಾರೆನ್ನಲಾಗಿದ್ದು, ಗೌರಿ ಬಾಗಿಲು ತೆರೆದಾಗ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಗೌರಿ ತಕ್ಷಣ ಕುಸಿದು ಬಿದ್ದಿದ್ದಾರೆ. ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

>  ಗೌರಿ ಲಂಕೇಶ್ ಅವರು ಮನೆಯ ಹೊರಗೆ ನಿಂತ ವೇಳೆ ಎದೆ ಹಾಗೂ ಹೃದಯ ಭಾಗಕ್ಕೆ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಂತಕರನ್ನು ಕೂಡಲೇ ಪತ್ತೇ ಹಚ್ಚಿ ಭಂದಿಸಬೇಕು : ಜಗದೀಶ್ ಶೆಟ್ಟರ್

ಹಿರಿಯ ಪತ್ರಕರ್ತೆ, ಸಾಹಿತಿ, ಚಿಂತಕಿ ಹಾಗೂ ದಿ. ಲಂಕೇಶ್ ಅವರ ಪುತ್ರಿ ಗೌರಿ ಲಂಕೇಶ್ ಅವರನ್ನು ಹತ್ಯೆಗೈದ ದುಷ್ಕರ್ಮಿಗಳನ್ನು ಸರ್ಕಾರ ಕೂಡಲೇ ಪತ್ತೇ ಹಚ್ಚಿ ಬಂಧಿಸಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಒತ್ತಾಯಿಸಿದ್ದಾರೆ. ಸಾಹಿತಿ ಎಂ.ಎಂ. ಕಲಬುರಗಿ ಹತ್ಯೆ ಮಾಸುವ ಮುನ್ನವೇ ಆಗುಂತಕರು ಗೌರಿ ಲಂಕೇಶ್ ಅವರನ್ನು ಭಯನಾಕವಾಗಿ ಕೊಲೆ ಮಾಡಿರುವುದು ರಾಜ್ಯದ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿರುವುದಕ್ಕೆ ಈ ಪ್ರಕರಣ ನಿದರ್ಶನವಾಗಿದೆ ಎಂದು ದೂರಿದ್ದಾರೆ.

ಈ ಘಟನೆಯಲ್ಲಿ ಯಾರೇ ಭಾಗಿಯಾಗಿರಲೀ. ಸರ್ಕಾರ ಕೊಲೆಪಾತಕರನ್ನು ಬಂಧಿಸಿ ಕಾನೂನಿನ ಪ್ರಕಾರ ಶಿಕ್ಷೆ ನೀಡಬೇಕು. ಜನಸಾಮಾನ್ಯರಿಗೂ ರಕ್ಷಣೆ ನೀಡದ ಈ ಸರ್ಕಾರದಲ್ಲಿ ಪತ್ರಕರ್ತರು, ಸಾಹಿತಿಗಳನ್ನು ಹಾಡು ಹಾಗಲೇ ಭಯನಕಾಗಿ ಕೊಲೆ ಮಾಡುತ್ತಾರೆ ಎಂದರೆ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನೆಸಿದ್ದಾರೆ.

ಪದೇ ಪದೇ ಗೃಹ ಸಚಿವರನ್ನು ಬದಲಾಯಿಸುವುದು, ಪೊಲೀಸರ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದರಿಂದಲೇ ದುಷ್ಕರ್ಮಿಗಳಿಗೆ ಹೇಳುವವರು , ಕೇಳುವವರೂ ಇಲ್ಲದಂತಾಗಿದೆ. ಸರ್ಕಾರದ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿ ಇದರ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ಕೂಡಲೇ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ಕೊಲೆಗಡುಕರನ್ನು ಬಂಧಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ದ ರಾಜ್ಯದಾದ್ಯಾಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Facebook Comments

Sri Raghav

Admin