ಬ್ರೇಕಿಂಗ್ : ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Dharma-singh

ಬೆಂಗಳೂರು, ಜು.27- ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‍ನ ಹಿರಿಯ ಮುತ್ಸದ್ದಿ ಎನ್.ಧರ್ಮಸಿಂಗ್ ಅವರು (81)ಇಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ತೀವ್ರ ಹೃದಯಘಾತವಾಗಿ ಕೊನೆಯುಸಿರೆಳೆದರೆಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಪತ್ನಿ ಪ್ರಭಾವತಿಸಿಂಗ್, ಪುತ್ರ ಹಾಗೂ ಶಾಸಕ ಡಾ.ಅಜಯ್‍ಸಿಂಗ್, ಪುತ್ರಿ ಸೇರಿದಂತೆ ಅಪಾರ ಸಂಖ್ಯೆಯ ಬೆಂಬಲಿಗರು, ಬಂಧುಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಹುಟ್ಟೂರು ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ನೆಲೋಗಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ಕಾಂಗ್ರೆಸ್‍ನ ಅತ್ಯಂತ ಹಿರಿಯ ಕಟ್ಟಾಳುಗಳಲ್ಲಿ ಒಬ್ಬರಾಗಿದ್ದ ಅವರ ಅಕಾಲಿಕ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ ಎಂದೇ ಹೇಳಲಾಗಿದೆ.

ಒಂದು ಕಾಲದಲ್ಲಿ ಸೋಲಿಲ್ಲದ ಸರದಾರನೆಂದೇ ಪಕ್ಷದ ವಲಯದಲ್ಲಿ ಗುರುತಿಸಿಕೊಂಡಿದ್ದ ಧರ್ಮಸಿಂಗ್ ಅವರ ಪಕ್ಷ ನಿಷ್ಠೆಯನ್ನು ಯಾರೊಬ್ಬರೂ ಪ್ರಶ್ನೆ ಮಾಡುವಂತಿರಲಿಲ್ಲ. ಕಳೆದ ಐದು ವರ್ಷಗಳಿಂದ ಅವರು ವಯೋಸಹಜ ಕಾಯಿಲೆಗೆ ತುತ್ತಾಗಿದ್ದರು. ಕಿಡ್ನಿ ವೈಫಲ್ಯ, ಹೃದಯ ತೊಂದರೆ ಸೇರಿದಂತೆ ಹಲವು ಕಾಯಿಲೆಗಳು ಎದುರಾಗಿದ್ದವು. ಬೆಳಗ್ಗೆ 9ಗಂಟೆಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗೆ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂದು ಆಸ್ಪತ್ರೆ ಮೂಲಗಳು ಖಚಿತ ಪಡಿಸಿವೆ.

1960ರಿಂದ ಈವರೆಗೂ ಎದುರಿಸಿದ ಸ್ಥಳೀಯ ಹಂತದ ಚುನಾವಣೆಯಿಂದ ಹಿಡಿದು ಲೋಕಸಭೆವರೆಗಿನ ಚುನಾವಣೆಯಲ್ಲಿ ಕೇವಲ ಎರಡು ಬಾರಿ ಪರಾಭವಗೊಂಡಿದ್ದರು. 2008ರ ವಿಧಾನಸಭೆ ಚುನಾವಣೆ ಹಾಗೂ 2014ರ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಹೊರತು ಪಡಿಸಿದರೆ. ಉಳಿದೆಲ್ಲಾ ಚುನಾವಣೆಗಳಲ್ಲೂ ಗೆಲುವಿನ ನಗೆ ಬೀರಿದ್ದರು.

Dharm-Singh--v01

ಲವ-ಕುಶ ಜೋಡಿ:

ಕಾಂಗ್ರೆಸ್ ವಲಯದಲ್ಲಿ ಧರ್ಮಸಿಂಗ್ ಮತ್ತು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಹಕ್ಕಬುಕ್ಕ ಜೋಡಿ ಎಂದೇ ಕರೆಯುತ್ತಿದ್ದರು.  ಸೋಲಿಲ್ಲದ ಸರದಾರರೆಂದೇ ಗುರುತಿಸಿಕೊಂಡಿದ್ದ ಇವರು, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ರೀತಿಯ ಹುದ್ದೆಗಳನ್ನು ಅನುಭವಿಸಿದ್ದರು. ಮುಖ್ಯಮಂತ್ರಿಯಿಂದ ಹಿಡಿದು ವಿಧಾನಸಭೆ ವಿರೋಧಪಕ್ಷದ ನಾಯಕ, ಗೃಹ , ಕಂದಾಯ ಇಲಾಖೆ ಸೇರಿದಂತೆ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.

Dharm-Singh--01

2004ರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ಜೆಡಿಎಸ್ ಬೆಂಬಲದೊಂದಿಗೆ ಮೈತ್ರಿ ಮಾಡಿಕೊಂಡು 2004 ಮೇ 28ರಂದು ಕರ್ನಾಟಕದ 17ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin