ಬ್ಲಾಕ್ ಅಂಡ್ ವೈಟ್ ದಂಧೆಕೋರರ ಮೇಲೆ ಐಟಿ ಅಧಿಕಾರಿಗಳಿಂದ ಟೆಲಿಫೋನ್ ಟ್ಯಾಪಿಂಗ್ ಅಸ್ತ್ರ ಪಯೋಗ

ಈ ಸುದ್ದಿಯನ್ನು ಶೇರ್ ಮಾಡಿ

Income-Tax-01

ಬೆಂಗಳೂರು,ಡಿ.3-ಬೆಂಗಳೂರು ಸೇರಿದಂತೆ ವಿವಿಧೆಡೆ ಭಾರೀ ಪ್ರಮಾಣದ ಹೊಸ ಕರೆನ್ಸಿ ನೋಟು ಮತ್ತು ಅಕ್ರಮ ಆಸ್ತಿಪಾಸ್ತಿ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಭಾರೀ ಕುಳಗಳನ್ನು ಮತ್ತು ಕಾಳದಂಧೆಕೋರರನ್ನು ಬಲೆಗೆ ಕೆಡವಲು ಆದಾಯ ತೆರಿಗೆ ಇಲಾಖೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಇದಕ್ಕಾಗಿ ಹೊಸ ತಂತ್ರಗಳನ್ನು ಅನುಸರಿಸುತ್ತಿರುವ ಅಧಿಕಾರಿಗಳು ಟೆಲಿಫೋನ್ ಟ್ಯಾಪಿಂಗ್(ದೂರವಾಣಿ ಕದ್ದಾಲಿಕೆ) ತಂತ್ರಜ್ಞಾನದ ಮೂಲಕ ತಿಮಿಂಗಲಗಳ ಮೇಲೆ ಬಲೆ ಬೀಸಿದ್ದಾರೆ.  ರಾಜ್ಯದ ಸರ್ಕಾರದ ಇಬ್ಬರು ಹಿರಿಯ ಅಧಿಕಾರಿಗಳ ಮನೆ ಮೇಲೆ ಐಟಿ ದಾಳಿ ನಡೆದ ಸಂದರ್ಭದಲ್ಲಿ 152 ಕೋಟಿ ರೂ. ಅಕ್ರಮ ನಗದು ಮತ್ತು ಆಸ್ತಿಯನ್ನು ಪತ್ತೆಹಚ್ಚಲಾಗಿದೆ. ಇದು ದೇಶಾದ್ಯಂತ ದೊಡ್ಡ ಸುದ್ದಿಯಾಗಿ ಸಂಚಲನ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಮಹಾನಗರಗಳು ಸೇರಿದಂತೆ ಹಲವೆಡೆ ಇದೇ ರೀತಿಯಲ್ಲಿ ಭಾರೀ ಮೊತ್ತದ ಕರೆನ್ಸಿ ಮತ್ತು ಆಸ್ತಿಪಾಸ್ತಿ ಹೊಂದಿರುವವರ ಮೇಲೆ ಹದ್ದಿನ ಕಣ್ಣಿನ ನಿಗಾ ಇರಿಸಲಾಗಿದೆ. ಇದೇ ಕಾರಣಕ್ಕಾಗಿ ಅವರ ದೂರವಾಣಿ, ಮೊಬೈಲ್‍ಗಳ ಸಂಪರ್ಕ ಜಾಡುಗಳನ್ನು ಪತ್ತೆ ಮಾಡಿ ಬಲೆ ಬೀಸಲು ಐಟಿ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಡಿಸೆಂಬರ್ ತಿಂಗಳ ಆರಂಭದಲ್ಲೇ ದೇಶಾದ್ಯಂತ ಸಾರ್ವಜನಿಕರಿಗೆ ತೀವ್ರ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು , ಕೇಂದ್ರ ಸರ್ಕಾರದ ಮೇಲೆ ವಿಪರೀತ ಒತ್ತಡ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ದಾಸ್ತಾನಾಗಿರುವ ಕಂತೆ ಕಂತೆ ಪಿಂಕ್ ನೋಟು(ಹೊಸ ಕರೆನ್ಸಿ)ಗಳನ್ನು ಬಯಲಿಗೆಳೆಯಬೇಕೆಂದು ಕೇಂದ್ರ ಹಣಕಾಸು ಸಚಿವಾಲಯ ಐಟಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದೆ
ಇದರಿಂದಾಗಿ ದೇಶವ್ಯಾಪಿ ದೊಡ್ಡ ಕುಳಗಳು, ಭ್ರಷ್ಟಾಚಾರದ ತಿಮಿಂಗಲಗಳು, ಕಾಳದಂಧೆಕೋರರು ಮತ್ತು ಕಮೀಷನ್ ದಲ್ಲಾಳಿಗಳ ಮೇಲೆ ಮಾಹಿತಿ ಸಂಗ್ರಹಿಸಿ ದಾಳಿ ಕಾರ್ಯಾಚರಣೆಯನ್ನು ಬಿರುಸುಗೊಳಿಸಲಾಗಿದೆ.

ಈಗಾಗಲೇ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ ಬಳಿ 2000 ಸಾವಿರ ಮುಖಬೆಲೆಯ 5 ಕೋಟಿ ಮೌಲ್ಯದ ಹೆಚ್ಚು ಹಣ ಪತ್ತೆಯಾಗಿರುವುದರಿಂದ ಐಟಿ ಅಧಿಕಾರಿಗಳು ಇದನ್ನು ನೀಡಿದವರು ಯಾರು ಎಂಬುದರ ಬಗ್ಗೆ ವ್ಯಾಪಕ ತನಿಖೆ ನಡೆಸುತ್ತಿದೆ.  ಮೂಲಗಳ ಪ್ರಕಾರ ಚಿಕ್ಕರಾಯಪ್ಪ ದುಬೈನಲ್ಲೂ ಕೂಡ ಹೂಡಿಕೆ ಮಾಡಿದ್ದಾರೆ. ಇದಕ್ಕೆ ತಮಿಳುನಾಡಿನ ಕೆಲ ಬ್ಯಾಂಕ್ ಅಧಿಕಾರಿಗಳು ಮತ್ತು ಉದ್ಯಮಿಗಳು ಸಹಕಾರ ನೀಡಿದ್ದಾರೆಂದು ತನಿಖೆ ವೇಳೆ ತಿಳಿದುಬಂದಿದೆ.  ಕಳೆದ ತಿಂಗಳು ದುಬೈಗೆ ತೆರಳಿ ಅಲ್ಲಿ ವಿವಿಧ ಕ್ಷೇತ್ರಗಳಲ್ಲಿ (ನಿರ್ಮಾಣ, ಹೋಟೆಲ್) ಹೂಡಿಕೆ ಮಾಡಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin