ಬ್ಲಾಕ್ ಲಿಸ್ಟ್’ನಲ್ಲಿದೆ ಉಕ್ಕಿನ ಸೇತುವೆ ನಿರ್ಮಿಸುತ್ತಿರುವ L&T : ಜಂಟಿ ಸದನ ಸಮಿತಿ ವಿರೋಧ

ಈ ಸುದ್ದಿಯನ್ನು ಶೇರ್ ಮಾಡಿ

lNt

ಬೆಂಗಳೂರು,ಅ.28-ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ಉಕ್ಕಿನ ಸೇತುವೆ ನಿರ್ಮಿಸುತ್ತಿರುವ ಎಲ್ ಅಂಡ್ ಟಿ ಸಂಸ್ಥೆಯನ್ನು ಕಪ್ಪುಪಟ್ಟಿ (ಬ್ಲಾಕ್ ಲಿಸ್ಟ್)ಗೆ ಸೇರಿಸಬೇಕೆಂದು ವಿಧಾನಸಭೆಯ ಜಂಟಿ ಸದನ ಸಮಿತಿ 2009ರಲ್ಲಿ ಶಿಫಾರಸು ಮಾಡಿರುವುದು ಬೆಳಕಿಗೆ ಬಂದಿದೆ.  ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‍ವೇ ಕಾಮಗಾರಿ ತಮಿಳುನಾಡು, ಪುದುಚೇರಿ ತೆಲಂಗಾಣ ಸೇರಿದಂತೆ ದೇಶದ ಮತ್ತಿತರೆ ಕಡೆ ನಡೆಸಿದ ಕಾಮಗಾರಿಯಲ್ಲಿ ಸಾಕಷ್ಟು ಕಳಪೆ ಮತ್ತು ಅವ್ಯವಹಾರ ನಡೆದಿರುವುದರಿಂದ ಎಲ್ ಅಂಡ್ ಟಿ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು.

ಇಂತಹ ಸಂಸ್ಥೆಗೆ ಉಕ್ಕಿನ ಸೇತುವೆ ನಿರ್ಮಿಸಲು ಕೊಟ್ಟಿರುವುದು ಸರಿಯೇ ಎಂದು (ಸೈಡ್ ಕರೆಪ್ಷನ್ ನೌ ಪೋರಂ)ನ ಭ್ರಷ್ಟಾಚಾರ ವಿರುದ್ದ ಹೋರಾಟದ ವೇದಿಕೆಯ ಮುಖಂಡರು ಪ್ರಶ್ನಿಸಿದ್ದಾರೆ.
ಈ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಿದ ವೇದಿಕೆ ಮುಖಂಡ ನಿವೃತ್ತ ಐಎಎಸ್ ಅಧಿಕಾರಿ ಎಂ.ಎನ್.ವಿಜಯಕುಮಾರ್, ವಕೀಲ ಧನಂಜಯ್ ಸೇರಿದಂತೆ ಮತ್ತಿತರರು ಎಲ್ ಅಂಡ್‍ಟಿ ಕಂಪನಿಯ ಕರ್ಮಕಾಂಡವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ ಅಂಡ್ ಟಿ ಕಂಪನಿ ನಿರ್ಮಿಸಿದ್ದ ರನ್‍ವೇ ಪಾರದರ್ಶಕತೆ ಕೊರತೆ ಮತ್ತು ಕಳಪೆ ಕಾಮಗಾರಿ ನಡೆಸಿದೆ ಎಂದು ಹೇಮಚಂದ್ರ ಸಾಗರ್ ನೇತೃತ್ವದ ಜಂಟಿ ಸದನ ಸಮಿತಿ ಪತ್ತೆಹಚ್ಚಿ 2009ರಲ್ಲಿ ಸರ್ಕಾರಕ್ಕೆ ವರದಿ ನೀಡಿತ್ತು.

ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿರುವ ಎಲ್ ಅಂಡ್ ಟಿ ಸಂಸ್ಥೆಗಳನ್ನು ಕನಿಷ್ಟ 5 ವರ್ಷಗಳ ಕಾಲ ಬ್ಲಾಕ್ ಲಿಸ್ಟ್‍ಗೆ ಸೇರಿಸಬೇಕೆಂದು ವಿಜಯಕುಮಾರ್ ತಿಳಿಸಿದ್ದರು.   ಎಲ್ ಅಂಡ್ ಟಿ ಸಂಸ್ಥೆ ನಿರ್ಮಿಸಿದ ರನ್‍ವೇ ಕಳಪೆ ಗುಣಮಟ್ಟದಿಂದ ಕೂಡಿದಲ್ಲದೆ ಗ್ಯಾರಂಟಿ ಅವಧಿ ಮುಗಿಯುವ ಮುನ್ನವೇ ಮುಗಿಸಿದೆ. ಬಳಿಕ 2009ರಲ್ಲಿ 55 ಕೋಟಿಯ ಶೇ.17ರಷ್ಟರ ಪಾಲನ್ನು 680 ಕೋಟಿಗೆ ಮಾರಿಕೊಂಡಿದೆ ಇದು ಕೂಡ ಎಲ್ ಅಂಡ್‍ಟಿ ಕಂಪನಿಯ ವಂಚನೆ ಎಂದರು.

2013ರ ಮಾರ್ಚ್ 3ರಂದು ವಿಶ್ವಬ್ಯಾಂಕ್ ನೀಡಿರುವ ವರದಿಯಲ್ಲಿ ಎಲ್ ಅಂಡ್ ಟಿ ಕಂಪನಿ ಅದರ ಹಿರಿಯ ಅಧಿಕಾರಿಗಳು ನಡೆಸಿರುವ ವಂಚನೆಗಳಿಗಾಗಿ ಈ ಕಂಪನಿಗೆ 6 ತಿಂಗಳು ನಿರ್ಬಂಧ ಹಾಕಲಾಗಿತ್ತು. ವಿಶ್ವಬ್ಯಾಂಕ್ ಭಾರತಕ್ಕೆ ನೀಡುವ ಅನುದಾನದಲ್ಲಿ ಎಲ್ ಅಂಡ್ ಟಿ ಕಂಪನಿ ಜತೆ ಯಾವುದೇ ವ್ಯವಹಾರ ನಡೆಸಬಾರದೆಂದು ಸೂಚಿಸಲಾಗಿತ್ತು.  ವಿಶ್ವಬ್ಯಾಂಕ್ ಯೋಜನೆಗಳ ಕಾಮಗಾರಿಗಳನ್ನು ನಿರ್ವಹಣೆ ಮಾಡುತ್ತಿರುವ ಯಾವುದೇ ಸಂಸ್ಥೆಗಳು ಎಲ್ ಅಂಡ್ ಟಿ ಜತೆ ವ್ಯವಹಾರ ನಡೆಸಬಾರದು. ಸ್ವತಃ ವಿಶ್ವಬ್ಯಾಂಕ್ ಈ ಕಂಪನಿಗೆ ನೀಡಿದ್ದ ಯೋಜನೆಯನ್ನು ರದ್ದುಪಡಿಸಿದೆ ಎಂದು ಮಾಹಿತಿ ನೀಡಿದರು.

ಎಲ್ ಅಂಡ್ ಟಿ ಕಂಪನಿಯು ಪ್ರಸ್ತುತ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಿಸುತ್ತಿರುವ ಸೇತುವೆಯನ್ನು ನಾಗಾರ್ಜುನ ಕಸ್ಟ್ರಕ್ಷನ್ ಕಂಪನಿಗೆ ಸಹ ಗುತ್ತಿಗೆ ನೀಡಿದೆ. ಪುದುಚೇರಿ ಸರ್ಕಾರ 2012ರಲ್ಲಿ ಸಿಬಿಐ ವರದಿ ಆಧಾರದ ಮೇಲೆ ನಾಗಾರ್ಜುನ ಕನ್‍ಸ್ಟ್ರಕ್ಷನ್ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿದೆ.  2016 ಮಾ.15ರಂದು ಇದೇ ನಾಗಾರ್ಜುನ ಕಂಪನಿ ಗೋದಾವರಿ ನೀರು ಸರಬರಾಜು ಕಾಮಗಾರಿಯಲ್ಲಿ ಭಾರೀ ನೀರು ಸೋರಿಕೆಯಾಗಿ ತೆಲಂಗಾಣ ಸರ್ಕಾರ ಇದನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು.  ಇದಲ್ಲದೆ 2016 ಮಾ.30ರಂದು ಕಲ್ಕತ್ತದಲ್ಲಿ ನಿರ್ಮಿಸಿದ್ದ ಫ್ಲೈಓವರ್ ಹಾಗೂ ತ್ರಿಪುರ ರಾಜಧಾನಿ ಅಗರ್ತಲದಲ್ಲಿ ನಿರ್ಮಿಸುತ್ತಿದ್ದ ಬ್ರಿಡ್ಜ್ ಕುಸಿದು ಅನೇಕರು ಸಾವನ್ನಪ್ಪಿದ್ದರಿಂದ ಕಪ್ಪು ಪಟ್ಟಿಗೆ ಸೇರಿಸಿದೆ.

ಇಷ್ಟೆಲ್ಲಾ ಅವ್ಯವಹಾರ ನಡೆಸಿರುವ ಎಲ್ ಅಂಡ್ ಟಿ ಮತ್ತು ಅದರ ಸಹಗುತ್ತಿಗೆಯ ನಾಗಾರ್ಜುನ ಕಂಪನಿಗೆ ಸರ್ಕಾರ ಯಾವ ಪುರುಷಾರ್ಥಕ್ಕೆ ಕಾಮಗಾರಿ ನಿಡಿದೆ ಎಂದು ಪ್ರಶ್ನಿಸಿದೆ.
ಉಕ್ಕಿನ ಸೇತುವೆ ನಿರ್ಮಾಣದಲ್ಲಿ ಸಿಎಂ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ.ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿಶಿ ಸುಭಾಷ್, ಕುಂಟಿಯಾ, ಬಿಡಿಎ ಆಯುಕ್ತ ರಾಜಕುಮಾರ್ ಖತ್ರಿ, ನಗರಾಭಿವೃದ್ಧಿ ಇಲಾಖೆ ಅಪರ ಕಾರ್ಯದರ್ಶಿ ಮಹೇಂದ್ರ ಜೈನ್, ಹಿಂದಿನ ಬಿಡಿಎ ಆಯುಕ್ತ ಹಾಗೂ ಹಾಲಿ ಕೆಪಿಎಸ್‍ಸಿ ಅಧ್ಯಕ್ಷ ಶ್ಯಾಂಭಟ್ ಸೇರಿದಂತೆ ಅನೇಕ ಐಎಎಸ್ ಅಧಿಕಾರಿಗಳು ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಈ ಸೇತುವೆ ನಿರ್ಮಿಸಲು ಹೊರಟಿದ್ದಾರೆ. ಈಗಾಗಲೇ ನಮ್ಮ ವೇದಿಕೆ ವತಿಯಿಂದ ನಾವು ಕೇಂದ್ರ ಜಾಗೃತ ಆಯೋಗ ಸುಪ್ರೀಂಕೋರ್ಟ್‍ನ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಆರ್.ರಾವ್, ಕೆ.ವಿ.ಧನಂಜಯ್ ಸೇರಿದಂತೆ ಅನೇಕರಿಗೆ ಪತ್ರ ಬರೆಯಲಾಗಿದೆ.  ಸರ್ಕಾರ ಇದನ್ನು ನಿಲ್ಲಿಸುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin