ಬ್ಲಾಕ್-ವೈಟ್ ನೋಟು ದಂಧೆ : ಬೆಂಗಳೂರಲ್ಲಿ ಇಬ್ಬರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Norte-2000

ಕಣ್ಣೂರು,ಡಿ.25- ಕಾಳಧನದ ಕಬಂಧ ಬಾಹುಗಳ ದೇಶಾದ್ಯಂತ ವಿಸ್ತರಿಸಿದ್ದು, ಗಂಟೆಗೊಂದು ಹೊಸ ಅಕ್ರಮ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಕೇರಳದ ಅಬಕಾರಿ ಇಲಾಖೆ ಅಧಿಕಾರಿಗಳು, ಮಹಾರಾಷ್ಟ್ರ ಮೂಲದ ಬೆಂಗಳೂರಿನ ಇಬ್ಬರು ಯುವಕರನ್ನು ಬಂಧಿಸಿ 52 ಲಕ್ಷ ರೂ. ಮೌಲ್ಯದ ಹೊಸ ಕರೆನ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ.   ಕರಾವಳಿ ರಾಜ್ಯದಲ್ಲಿ ಕಳೆದ ಮೂರು ದಿನಗಳ ಅವಧಿಯಲ್ಲಿ ಪತ್ತೆಯಾದ 2ನೇ ದೊಡ್ಡ ಕಪ್ಪು ಹಣ ಪತ್ತೆ ಪ್ರಕರಣ ಇದಾಗಿದೆ.
ಬಂಧಿತರನ್ನು ರಂಜಿತ್ ಸಾಲಂಗಿ(24) ಮತ್ತು ರಾಹುಲ್ ಅಧಿಕ್ ಅಲಿಯಾಸ್   ರಾಹುಲ್ ಘಾಟೂ ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ಕೇರಳ ರಾಜ್ಯ ಸಾರಿಗೆ ಸಂಸ್ಥೆ (ಕೆಎಸ್‍ಆರ್‍ಟಿಸಿ) ಬಸ್‍ನಲ್ಲಿ ಬಂದ ಇವರನ್ನು ಇಲ್ಲಿನ ಇರಟ್ಟಿ ಪ್ರದೇಶದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಇಂದು ಮುಂಜಾನೆ 3.30ರಲ್ಲಿ ವಶಕ್ಕೆ ತೆಗೆದುಕೊಂಡು ಪರಿಶೀಲಿಸಿದರು.   ಅವರ ಬಳಿಯಿದ್ದ ಚೀಲದಲ್ಲಿ 2000 ಮುಖಬೆಲೆಯ 51.80 ಲಕ್ಷ ರೂ. ಮತ್ತು 100 ರೂ. ಮುಖಬೆಲೆಯ 6300 ರೂ.ಗಳು ಪತ್ತೆಯಾಯಿತು. ಇವರು ಪೈಯನೂರಿಗೆ ಪ್ರಯಾಣಿಸುತ್ತಿದ್ದರು ಎಂದು ಅಬಕಾರಿ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೊತ್ತಕ್ಕೆ ಅವರ ಬಳಿ ಯಾವುದೇ ಅಧಿಕೃತ ದಾಖಲೆ ಇರಲಿಲ್ಲ ಮತ್ತು ಅಧಿಕಾರಿಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.   ಈ ಯುವಕರು ಮಹಾರಾಷ್ಟ್ರ ಮೂಲದವರಾಗಿದ್ದರು. ಬೆಂಗಳೂರು ಮೂಲಕ ವಿವಿಧ ರಾಜ್ಯಗಳಲ್ಲಿ ಕಪ್ಪು ಹಣದ ಅಕ್ರಮಗಳನ್ನು ನಡೆಸುತ್ತಿದ್ದರು ಎಂಬುದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ಎರಡು ದಿನಗಳ ಹಿಂದಷ್ಟೇ ಮಾಲಾಪುರಂ ಜಿಲ್ಲೆಯ ತಿರೂರು ಬಳಿ ಪೊಲೀಸರು 2000 ರೂ. ಮುಖಬೆಲೆಯ 40 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin