ಭದ್ರತಾಪಡೆ ಮೇಲೆ ಭಯಾನಕ ದಾಳಿಗಳಿಗೆ ಉಗ್ರರ ಸ್ಕೆಚ್ : ಐದು ನಗರಗಳಲ್ಲಿ ಹೈ ಅಲರ್ಟ್ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

High-Alertನವದೆಹಲಿ, ಅ.1-ಜಮ್ಮು ಮತ್ತು ಕಾಶ್ಮೀರದಲ್ಲಿ ರಹಸ್ಯ ಕಾರ್ಯಾಚರಣೆ ನಡೆಸುತ್ತಿರುವ ಉಗ್ರಗಾಮಿಗಳು ಸೇಡಿಗಾಗಿ ಭದ್ರತಾಪಡೆಗಳು ಮತ್ತು ಮುಗ್ಧ ನಾಗರಿಕರ ಮೇಲೆ ಭಯಾನಕ ಪ್ರತೀಕಾರದ ದಾಳಿಗಳನ್ನು ನಡೆಸಲು ಹುನ್ನಾರ ನಡೆಸುತ್ತಿದ್ದಾರೆ ಎಂಬ ಆತಂಕಕಾರಿ ಸಂಗತಿ ಬೇಹುಗಾರಿಕೆ ಮೂಲಗಳಿಂದ ಬಹಿರಂಗಗೊಂಡಿದೆ. ಇದೇ ವೇಳೆ
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ನುಗ್ಗಿ ಭಾರತೀಯ ಸೇನೆ ಕಮ್ಯಾಂಡೋಗಳು ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿ, ಉಗ್ರರನ್ನು ಸಂಹಾರ ಮಾಡಿದ ನಂತರ ಭಯೋತ್ಪಾದಕರು ಹಗೆತನದ ಆಕ್ರಮಣ ಎಸಗುವ ಸಾಧ್ಯತೆಯ ಸಂಗತಿಗಳ ಬಗ್ಗೆ ಬೇಹುಗಾರಿಕೆ ಸಂಸ್ಥೆಗಳು ಮಾಹಿತಿ ಕಲೆ ಹಾಕಿವೆ.

ಈಗಾಗಲೇ ಕಾಶ್ಮೀರ ಕಣಿವೆಯೊಳಗೆ ನುಸುಳಿರುವ ಉಗ್ರಗಾಮಿಗಳಿಗೆ ಪಾಕಿಸ್ತಾನದಲ್ಲಿ ನೆಲೆಸಿರುವ ಅವರ ಮುಖಂಡರು ಸೇಡಿನ ದಾಳಿಗಳನ್ನು ನಡೆಸುವಂತೆ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಬೇಹುಗಾರಿಕೆ ಮಾಹಿತಿಯನ್ನು ಉಲ್ಲೇಖಿಸಿ ಸರ್ಕಾರಿ ಮೂಲಗಳು ಹೇಳಿವೆ.  ಕಾಶ್ಮೀರದ ವಿವಿಧೆಡೆ ಕರ್ತವ್ಯದಲ್ಲಿರುವ ಭದ್ರತಾಪಡೆಗಳು, ಪೊಲೀಸರು ಹಾಗೂ ಜಮ್ಮು ಪ್ರಾಂತ್ಯದ ನಾಗರೀಕರನ್ನು ಗುರಿಯಾಗಿಟ್ಟುಕೊಂಡು ವಿಧ್ವಂಸಕ ಕೃತ್ಯಗಳನ್ನು ನಡೆಸುವಂತೆ ಪಾಕ್ ಮೂಲದ ಉಗ್ರಗಾಮಿ ಸಂಘಟನೆಗಳು ಸೂಚನೆ ನೀಡಿವೆ ಎಂಬ ಸಂಗತಿ ಬಯಲಾಗುತ್ತಿದ್ದಂತೆ ಇಡೀ ಕಣಿವೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯದ ಭದ್ರತಾ ಪಡೆಗಳಿಗೆ ನಾವು ಕಟ್ಟೆಚ್ಚರ ನೀಡಿದ್ದೇವೆ ಉಗ್ರರ ಪ್ರತೀಕಾರದ ದಾಳಿಗಳ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹದ್ದಿನ ಕಣ್ಣಿನ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಉನ್ನತ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.  ಕಾಶ್ಮೀರದ ಕೆಲವು ಪ್ರದೇಶಗಳಿಂದ ಈಗಾಗಲೇ ಸಾವಿರಾರು ಜನರನ್ನು ಮುಂಜಾಗ್ರತಾ ಕ್ರಮವಾಗಿ ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಪರಿಸ್ಥಿತಿ ತಿಳಿಗೊಳ್ಳುವ ತನಕ ತಮ್ಮ ಗ್ರಾಮಗಳಿಗೆ ಹಿಂದಿರುಗದಂತೆ ತಿಳಿಸಲಾಗಿದೆ.  ಉಗ್ರಗಾಮಿಗಳ ಸಂಭವನೀಯ ದಾಳಿಗೆ ಪುಷ್ಟಿ ನೀಡುವಂತೆ ನಿನ್ನೆ ಫೈಸ್ಲಾಬಾದ್‍ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಜೆಯುಡಿ ಮುಖಂಡ ಮತ್ತು 2008ರ ಮುಂಬೈ ಭಯೋತ್ಪಾದಕರ ದಾಳಿಯ ರೂವಾರಿ ಹಫೀಜ್ ಸಯೀದ್, ನಿಜವಾದ ದಾಳಿ ಏನೆಂಬುದನ್ನು ಭಾರತಕ್ಕೆ ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾನೆ.

5 ನಗರಗಳಲ್ಲಿ ಕಟ್ಟೆಚ್ಚರ :

ಪಾಕಿಸ್ತಾನ ಮೂಲದ ಭಯೋತ್ಪಾದನೆ ಸಂಘಟನೆಗಳು ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿರುವುದರಿಂದ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ವಿಶೇಷವಾಗಿ ರಾಜಧಾನಿ ನವದೆಹಲಿ ಸೇರಿದಂತೆ ಐದು ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.  ದೆಹಲಿ, ಮಹಾರಾಷ್ಟ್ರ, ರಾಜಸ್ತಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಹಾಗೂ ಗುಜರಾತ್ ಈ ರಾಜ್ಯಗಳಲ್ಲಿ ಭಯೋತ್ಪಾದಕರ ಸಂಭವನೀಯ ದಾಳಿಗಳನ್ನು ಹತ್ತಿಕ್ಕಲು ಭದ್ರತಾಪಡೆಗಳು ಸನ್ನದ್ಧವಾಗಿವೆ. ಮಹತ್ವ ರಕ್ಷಣಾ ನೆಲೆಗಳು, ಕೈಗಾರಿಕಾ ಸಂಕೀರ್ಣಗಳು, ದಟ್ಟ ಜನಸಂದಣಿ ಸ್ಥಳಗಳು, ವಿಮಾನನಿಲ್ದಾಣಗಳು, ಐಸಿಹಾಸಿಕ ತಾಣಗಳು ಮತ್ತು ಸರ್ಕಾರಿ ಕಟ್ಟಡಗಳಿಗೆ ಭಾರೀ ಭದ್ರತೆ ಒದಗಿಸಲಾಗಿದೆ.  ಪಾಕಿಸ್ತಾನದ ಐಎಸ್‍ಐ, ಜೈಷ್-ಇ-ಮಹಮದ್, ಲಷ್ಕರ್-ಇ-ತೋಯ್ಬಾ ಸೇರಿದಂತೆ ಉಗ್ರಗಾಮಿ ಸಂಘಟನೆಗಳು ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಅಭೂತಪೂರ್ವ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin