ಭಯೋತ್ಪಾದಕರು ಎಂದ ಸಿದ್ದರಾಮಯ್ಯ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಬಿಜೆಪಿ

ಈ ಸುದ್ದಿಯನ್ನು ಶೇರ್ ಮಾಡಿ

Anant-Kumar--02

ಬೆಂಗಳೂರು, ಜ.12- ಆರ್‍ಎಸ್‍ಎಸ್ ಮತ್ತು ಭಜರಂಗದಳ ಭಯೋತ್ಪಾದಕ ಸಂಘಟನೆಗಳೆಂದು ಜರಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಯನ್ನು ಜನಾಂದೋಲನವಾಗಿ ರೂಪಿಸಿಕೊಳ್ಳಲು ಬಿಜೆಪಿ ತೀರ್ಮಾನಿಸಿದ್ದು ಕಾನೂನು ಸಮರಕ್ಕೂ ಮುಂದಾಗಿದೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಐತಿಹಾಸಿಕ ಯಡಿಯೂರು ಕೆರೆ ಆವರಣದಲ್ಲಿ ನಿರ್ಮಿಸಿರುವ 19 ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಕಂಚಿನ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಿದ ಕೇಂದ್ರ ಸಚಿವ ಅನಂತ್‍ಕುಮಾರ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರು ಮುಖ್ಯಮಂತ್ರಿಗಳ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಸಿಎಂ ಹೇಳಿಕೆಯನ್ನು ಜನಾಂದೋಲನವಾಗಿ ರೂಪಿಸುವುದಾಗಿಯೂ ತಿಳಿಸಿದರು.

ಅನಂತ್‍ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ ಉದ್ಧಟತನದ ಪರಮಾವಧಿ. ನಾಡಿನ ಜನ ಕೂಡ ಅವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಹಿಂದೂ ವಿರೋಧಿ ಹೇಳಿಕೆಗೆ ಕೂಡಲೇ ಸಿದ್ದರಾಮಯ್ಯ ನಾಡಿನ ಜನರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಅವರ ಹೇಳಿಕೆಯನ್ನು ಜನಾಂದೋಲನವಾಗಿ ಪರಿವರ್ತಿಸುತ್ತೇವೆ. ಜತೆಗೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು. ಈ ಹಿಂದೆ ಜಲ ವಿವಾದದಲ್ಲೂ ಮುಖ್ಯಮಂತ್ರಿಗಳು ಮುತ್ಸದ್ಧಿತನ ತೋರಬೇಕಿತ್ತು. ಹಿಂದಿನ ಮುಖ್ಯಮಂತ್ರಿಗಳಾದ ಜೆ.ಎಚ್.ಪಟೇಲ್, ರಾಮಕೃಷ್ಣ ಹೆಗಡೆ ಮುತ್ಸದ್ಧಿಗಳಾಗಿದ್ದರು. ನಾಡಿನ ಜಲದ ವಿಷಯದಲ್ಲಿ ಸಂವಿಧಾನಬದ್ಧವಾಗಿ ನಡೆದುಕೊಂಡರು. ಆದರೆ, ಸಿದ್ದರಾಮಯ್ಯ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಜತೆಗೆ ನಿರ್ಲಕ್ಷ್ಯಧೋರಣೆಯಿಂದ ನಡೆದುಕೊಳ್ಳುತ್ತಿದ್ದಾರೆ. ಜನರೇ ಅವರಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು.

ಮಹದಾಯಿ ವಿಚಾರವಾಗಿ ಕರ್ನಾಟಕದ ಹಕ್ಕನ್ನು ಸ್ಥಾಪಿಸಲು ಬದ್ಧವಾಗಿರುವ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ನ್ಯಾಯಾಂಗದವರೆಗೆ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿದ್ದರು. ಆದರೆ, ಸಿದ್ದರಾಮಯ್ಯ ವಿರೋಧಾಭಾಸವಾಗುವಂತೆ ನಡೆದುಕೊಂಡರು ಎಂದು ದೂರಿದರು. ಆರ್.ಅಶೋಕ್ ಮಾತನಾಡಿ, ಪಿಎಫ್‍ಐ, ಎಸ್‍ಡಿಪಿಐ ಸಂಘಟನೆಗಳನ್ನು ಬೆಂಬಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ನಿಲುವು ಏನೆಂಬುದನ್ನು ಸಾಬೀತು ಮಾಡಿದ್ದಾರೆ. ಹಿಂದೂ ವಿರೋಧಿ ನೀತಿ ತೋರುತ್ತಿರುವುದು ಹಾಗೂ ಆರ್‍ಎಸ್‍ಎಸ್, ಭಜರಂಗದಳ ಭಯೋತ್ಪಾದಕರು ಎಂದು ಹೇಳುತ್ತಿರುವುದು ಅಕ್ಷಮ್ಯ. ಈ ಹಿಂದಿನ ಮುಖ್ಯಮಂತ್ರಿಗಳ್ಯಾರೂ ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿರಲಿಲ್ಲ. ಆದರೆ, ಸಿದ್ದರಾಮಯ್ಯ ತಾವು ಸಂವಿಧಾನ ವಿರೋಧಿ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನವರ ಹೇಳಿಕೆ ಖಂಡಿಸಿ ಇಂದು ರಾಜ್ಯಾದ್ಯಂತ ಜೈಲ್ ಭರೋ ಚಳವಳಿ ಹಮ್ಮಿಕೊಂಡಿದ್ದೇವೆ. ನಾಳೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಹೇಳಿಕೆ ಖಂಡಿಸಿ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು. ಮುಖ್ಯಮಂತ್ರಿಗಳ ಹಿಂದೂ ವಿರೋಧಿ ಹೇಳಿಕೆಯನ್ನು ಬಿಜೆಪಿ ನ್ಯಾಯಾಲಯದಲ್ಲೂ ಪ್ರಶ್ನಿಸಲಿದೆ ಎಂದು ಅಶೋಕ್ ಹಾಗೂ ಅನಂತ್‍ಕುಮಾರ್ ತಿಳಿಸಿದರು. ಮುಕುಟಮಣಿ: ಸ್ವಾಮಿ ವಿವೇಕಾನಂದರ 19 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಯಡಿಯೂರು ಕೆರೆಯಲ್ಲಿ ನಿರ್ಮಿಸಿರುವ 12 ಅಡಿ ಎತ್ತರದ ಗ್ರಾನೈಟ್ ಪೀಠದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಇದು ನಗರದ ಅತಿ ಎತ್ತರದ ವಿವೇಕಾನಂದರ ಪ್ರತಿಮೆಯಾಗಿದ್ದು, ನಗರಕ್ಕೆ ಮುಕುಟಮಣಿಯಂತಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ತಿಳಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಂಗಳ್‍ಪಾಂಡೆ, ತಾತ್ಯಾಟೋಪಿ, ಭಗತ್‍ಸಿಂಗ್ ಮತ್ತಿತರ ಹೋರಾಟಗಾರರ ಎದೆ ಎತ್ತರದ ಪ್ರತಿಮೆಗಳು, ಸ್ವಾಮಿ ವಿವೇಕಾನಂದರ ವಿವೇಕ ವಾಣಿಯನ್ನು ಕೆರೆ ಆವರಣದಲ್ಲಿ ಅಳವಡಿಸಲಾಗಿದೆ.

ಪಾಲಿಕೆ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅತ್ಯಾಧುನಿಕ ವಾಯುವಿಹಾರ ದಾರಿ, ಮುಕ್ತ ವ್ಯಾಯಾಮ ಶಾಲೆ, ಮಕ್ಕಳ ಆಟದ ಉದ್ಯಾನವನವನ್ನು ಇದೇ ವೇಳೆ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ರಮೇಶ್ ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಎಸ್.ಕೆ.ನಟರಾಜ್, ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.

Facebook Comments

Sri Raghav

Admin