ಭಯೋತ್ಪಾದನೆಗಾಗಿ ಪಾಕ್‍ನಿಂದ ಹಣ : ದೇಶದ ವಿವಿಧೆಡೆ ಎನ್‍ಐಎ ಅಧಿಕಾರಿಗಳ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

NIA--01

ಶ್ರೀನಗರ/ನವದೆಹಲಿ/ಚಂಡೀಗಢ, ಜೂ.3-ಕಾಶ್ಮೀರ ಕಣಿವೆಯಲ್ಲಿ ಶಾಂತಿ ಕದಡಿ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿರುವ ಪ್ರತ್ಯೇಕತಾವಾದಿಗಳ ಕುತಂತ್ರಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಬಲವಾದ ಹೊಡೆತ ನೀಡಿದೆ. ಪಾಕಿಸ್ತಾನದಿಂದ ಭಯೋತ್ಪಾದನೆಗಾಗಿ ಹಣ ಸ್ವೀಕರಿಸಿದ ಆರೋಪಗಳ ಸಂಬಂಧ ಜಮ್ಮು-ಕಾಶ್ಮೀರ, ದೆಹಲಿ ಹಾಗೂ ಹರಿಯಾಣದ ಹಲವೆಡೆ ಹುರಿಯತ್ ನಾಯಕರ ನಿವಾಸಗಳ ಮೇಲೆ ಎನ್‍ಐಎ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇದರಿಂದಾಗಿ ಪಾಕ್ ಉಗ್ರರು ಮತ್ತು ಭಯೋತ್ಪಾದಕರ ಬೆಂಬಲಿಗರ ಸಂಪರ್ಕ ಜಾಲ ಕಡಿತಗೊಳ್ಳುವಂತಾಗಿದೆ.ಕಾಶ್ಮೀರದಲ್ಲಿ ಬುಡಮೇಲು ಕೃತ್ಯಗಳನ್ನು ಎಸಗಲು ಪ್ರತ್ಯೇಕತಾವಾದಿಗಳು ಪಾಕಿಸ್ತಾನದಿಂದ ಹಣ ಸ್ವೀಕರಿಸುತ್ತಿರುವ (ಟೆರ್ರರ್ ಫಂಡಿಂಗ್) ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಎನ್‍ಐಎ ಈ ಹಿಂದೆ ದಾಖಲಿಸಿಕೊಂಡಿದ್ದ ಪ್ರಾಥಮಿಕ ತನಿಖೆಯನ್ನು ನಿನ್ನೆ ರಾತ್ರಿ ಸಾಮಾನ್ಯ ಪ್ರಕರಣವಾಗಿ ಪರಿವರ್ತಿಸಿಕೊಂಡು ಇಂದು ಮುಂಜಾನೆಯಿಂದಲೇ ಮಿಂಚಿನ ದಾಳಿ ನಡೆಸಿತು.   ಕಾಶ್ಮೀರದ 14, ದೆಹಲಿಯ 8 ಹಾಗೂ ಹರ್ಯಾಣದ 2 ಕಡೆಗಳಲ್ಲಿ ಹುರಿಯತ್ ಮತ್ತು ಪ್ರತ್ಯೇಕತಾವಾದಿ ಮುಖಂಡರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದಾಗ ಭಯೋತ್ಪಾದನೆಗೆ ಹಣ ನೀಡಿಕೆಗೆ ಸಂಬಂಧಪಟ್ಟ ಮಹತ್ವದ ದಾಖಲೆಪತ್ರಗಳು ಕಂಡುಬಂದಿತು ಎಂದು ಮೂಲಗಳು ತಿಳಿಸಿವೆ.

ದೆಹಲಿ ಮತ್ತು ಹರಿಯಾಣದಲ್ಲಿ ಹವಾಲಾ ಡೀಲರ್‍ಗಳು ಮತ್ತು ವರ್ತಕರ ಮನೆಗಳು ಮತ್ತು ಕಚೇರಿಗಳ ಮೇಲೂ ಎನ್‍ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಟ್ಟಾ ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗಿಲಾನಿಯ ಸಹಚರರು ಮತ್ತು ಸಂಬಂಧಿಕರು ಹಾಗೂ ಹುರಿಯತ್ ಕಾನ್ಫೆರೆನ್ಸ್ ನಾಯಕರ ಮನೆಗಳನ್ನು ಅಧಿಕಾರಿಗಳು ಜಾಲಾಡಿದ್ದಾರೆ.  ಪ್ರತ್ಯೇಕತಾವಾದಿ ನಾಯಕ ನಯೀಮ್ ಖಾನ್ ಹಾಗೂ ತೆಹ್‍ರೀಕ್-ಎ-ಹುರಿಯತ್ ಸಂಘಟನೆಯ ಮುಖಂಡರಾದ ಫಾರೂಕ್ ಅಹಮದ್ ದರ್ ಅಲಿಯಾಸ್ ಬಿಟ್ಟಾ ಕರಾಟೆ ಹಾಗೂ ಗಾಜಿ ಜಾವೇದ್ ಬಾಬಾ- ಈ ಮೂವರು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಿಂದ ಹಣಕಾಸು ಪಡೆಯುತ್ತಿದ್ದ ಆರೋಪಗಳ ಮೇಲೆ ಎನ್‍ಐಇ ನಾಲ್ಕು ದಿನಗಳ ಹಿಂದೆ ದೆಹಲಿಯಲ್ಲಿ ಇವರನ್ನು ತೀವ್ರ ವಿಚಾರಣೆಗೆ ಒಳಪಡಿಸಿತ್ತು.ನಮೀಮ್ ಖಾನ್ ತಾನು ಪಾಕ್ ಉಗ್ರರಿಂದ ಭಯೋತ್ಪಾದನೆ ಕೃತ್ಯಗಳಿಗಾಗಿ ಹಣ ಪಡೆಯುತ್ತಿದ್ದ ಸಂಗತಿಯೊಂದು ಕುಟುಕು ಕಾರ್ಯಾಚರಣೆಯೊಂದರಿಂದ ಬಹಿರಂಗವಾಗಿತ್ತು.   ಕಾಶ್ಮೀರ ಕಣಿವೆಯಲ್ಲಿ ಬುಡಮೇಲು ಕೃತ್ಯಗಳನ್ನು ಎಸಗಲು ಲಷ್ಕರ್-ಎ-ತೊಯ್ಬ (ಎಲ್‍ಇಟಿ) ಮುಖ್ಯಸ್ಥ ಹಫೀಜ್ ಸೈಯದ್‍ನಿಂದ ಈ ಪ್ರತ್ಯೇಕತಾವಾದಿಗಳು ಹಣ ಸ್ವೀಕರಿಸಿದ ಹಾಗೂ ಕಾಶ್ಮೀರದಲ್ಲಿ ವ್ಯಾಪಕ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪಗಳಿವೆ. ಭಧ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸುವುದು, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಉಂಟು ಮಾಡುವುದು ಹಾಗೂ ಸರ್ಕಾರಿ ಶಾಲೆಗಳು, ಕಚೇರಿಗಳಿಗೆ ಬೆಂಕಿ ಹಚ್ಚುವುದು-ಇಂಥ ಕೃತ್ಯಗಳನ್ನು ಎಸಗಲು ಪಾಕ್ ಉಗ್ರರು ಪ್ರತ್ಯೇಕತಾವಾದಿಗಳಿಗೆ ಹಣಕಾಸು ನೆರವು ನೀಡುತ್ತಿದ್ದು, ಈಗ ಆ ಸಂಪರ್ಕ ಜಾಲಕ್ಕೆ ಕತ್ತರಿ ಬಿದ್ದಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin