ಭಯೋತ್ಪಾದನೆ ದಮನಕ್ಕೆ ಕೈ ಜೋಡಿಸುವಂತೆ ವಿಶ್ವ ಸಮುದಾಯಕ್ಕೆ ಭಾರತ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

Rajanath-Singh

ಮನಾಮ, ಬಹರೈನ್, ಅ.24-ಭಯೋತ್ಪಾದನೆ ಒಂದು ಜಾಗತಿಕ ಸಮಸ್ಯೆಯಾಗಿದೆ. ಈ ಪಿಡುಗನ್ನು ಬುಡಸಮೇತ ಕಿತ್ತೊಗೆಯಲು ಅಂತಾರಾಷ್ಟ್ರೀಯ ಸಮುದಾಯ ಕೈಜೋಡಿಸಬೇಕೆಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮನವಿ ಮಾಡಿದ್ದಾರೆ.  ಪಾಕಿಸ್ತಾನದ ಭಯೋತ್ಪಾದನೆ ಕುಮ್ಮಕ್ಕಿನಿಂದ ಏಷ್ಯಾ ಪ್ರಾಂತ್ಯದಲ್ಲಿ ತಲೆದೋರಿರುವ ಉದ್ವಿಗ್ನ ಸ್ಥಿತಿ ಬಗ್ಗೆ ಗಮನಸೆಳೆಯುವುದೂ ಸೇರಿದಂತೆ ಭಾರತದೊಂದಿಗಿನ ದ್ವಿಪಕ್ಷೀಯ ಬಾಂಧವ್ಯ ವರ್ಧನೆಗಾಗಿ ಕೊಲ್ಲಿ ರಾಷ್ಟ್ರದಲ್ಲಿ ಮೂರು ದಿನಗಳ ಪ್ರವಾಸ ಆರಂಭಿಸಿರುವ ಅವರು ನಿನ್ನೆ ರಾತ್ರಿ ಬಹರೈನ್‍ನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಉಗ್ರವಾದ ಮತ್ತು ಆತಂಕವಾದ ನಿರ್ಮೂಲನೆಗೆ ಅಂತಾರಾಷ್ಟ್ರೀಯ ಸಮುದಾಯ ಒಗ್ಗೂಡಬೇಕೆಂದು ಅವರು ಈ ಸಂದರ್ಭದಲ್ಲಿ ಕೋರಿದರು.

ಮೋದಿ ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಮೇಲೆ ಬೆಳಕು ಚೆಲ್ಲಿದ ಅವರು, ಇದರಿಂದಾಗಿ ಪ್ರತಿಯೊಬ್ಬ ಭಾರತೀಯರು ಹೆಮ್ಮೆಪಡುವಂಥ ವಾತಾವರಣ ಸೃಷ್ಟಿಯಾಗಿದೆ. ಪ್ರಧಾನಿ ಅವರು ಭಾರತದಲ್ಲಿ ಭ್ರಷ್ಟಾಚಾರವನ್ನು ಗಮನಾರ್ಹವಾಗಿ ಕುಗ್ಗಿಸಿದ್ದಾರೆ ಹಾಗೂ ಹಲವಾರು ರಚನಾತ್ಮಕ ಬದಲಾವಣೆಗಳನ್ನು ತಂದಿದ್ದಾರೆ ಎಂದರು.  ಭಾರತವು ವಿಶ್ವದಲ್ಲಿ ಅತ್ಯಂತ ಕ್ಷಿಪ್ರ ಆರ್ಥಿಕ ಬೆಳವಣಿಗೆಯ ದೇಶವಾಗಿದ್ದು, ಬಂಡವಾಳ ಹೂಡಲು ಅತ್ಯಂತ ನೆಚ್ಚಿನ ತಾಣವಾಗಿದೆ. ಒಂದು ವರ್ಷದಲ್ಲಿ 51 ಶತಕೋಟಿ ಡಾಲರ್ ನೇರ ವಿದೇಶಿ ಬಂಡವಾಳ (ಎಫ್‍ಡಿಎ) ಆಕರ್ಷಿಸಿದ್ದು, ಇದು ಅಮೆರಿಕ ಮತ್ತು ಚೀನಾ ರಾಷ್ಟ್ರಗಳಿಗಿಂತಲೂ ಹೆಚ್ಚು ಎಂದು ಅವರು ವಿವರಿಸಿದರು.

ಸಿಂಗ್ ಅವರು ಬಹರೈನ್ ಸುಲ್ತಾನ ಹಮದ್ ಬಿನ್ ಇಸಾ ಅಲ್ ಖಲೀಫಾ, ಪ್ರಧಾನಮಂತ್ರಿ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಮತ್ತು ಗೃಹ ಸಚಿವರನ್ನು ಭೇಟಿ ಮಾಡಿ ವಿವಿಧ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಪಾಕಿಸ್ತಾನ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವುದರಿಂದ ಏಷ್ಯಾ ಪ್ರಾಂತ್ಯದಲ್ಲಿ ತಲೆದೋರಿರುವ ಆತಂಕ ಸ್ಥಿತಿಗತಿಗಳನ್ನು ಅವರ ಗಮನಕ್ಕೆ ತಂದಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin