ಭರ್ತಿಯಾಗದ ಜಲಾಶಯಗಳು : ಮೋಡ ಬಿತ್ತನೆಗೆ ತಜ್ಞರ ವರದಿ ಕೇಳಿದ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Dam

ಬೆಂಗಳೂರು,ಆ.8- ಕಳೆದ ಎರಡು ವರ್ಷಗಳಿಂದ ಬರದಿಂದ ತತ್ತರಿಸಿದ್ದ ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಆಶಾದಾಯಕವಾಗಿದ್ದರೂ ಸಹ ಜಲಾಶಯಗಳು ಭರ್ತಿಯಾಗದೆ ಆತಂಕವನ್ನುಂಟು ಮಾಡಿದೆ.  ಇದರಿಂದ ರಾಜ್ಯ ಸರ್ಕಾರ ಮೋಡ ಬಿತ್ತನೆ ಮಾಡುವ ಮೂಲಕ ಕೃತಕ ಮಳೆಯ ಮೊರೆ ಹೋಗುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಮೋಡ ಬಿತ್ತನೆಯಿಂದ ಉತ್ತಮ ಮಳೆಯಾಗುವ ಸಾಧ್ಯಸಾಧ್ಯತೆ ಹಾಗೂ ಅದರಿಂದಾಗುವ ಪ್ರಯೋಜನಗಳ ಬಗ್ಗೆ ವೈಜ್ಞಾನಿಕ ವರದಿಯನ್ನು ರಾಜ್ಯ ಸರ್ಕಾರ ಕೇಳಿದೆ.   ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಈ ವಾರಾಂತ್ಯದೊಳಗೆ ಮೋಡ ಬಿತ್ತನೆ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಇತ್ತೀಚೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೋಡ ಬಿತ್ತನೆ ಕುರಿತು ಗಂಭೀರ ಚಿಂತನೆ ನಡೆಸಲಾಗಿದೆ.

ಮುಂಗಾರು ಮಳೆ ಅವಧಿ ಇನ್ನು ಮೂರು ತಿಂಗಳು ಉಳಿದಿರುವುದರಿಂದ  ಜಲಾಶಯಗಳ ನೀರಿನ ಅಭಾವ ನೀಗಿಸಲು ಮೋಡ ಬಿತ್ತನೆಯಂತಹ ಪರ್ಯಾಯ ಮಾರ್ಗದ ಕಡೆ ಸರ್ಕಾರ ಮುಂದಾಗಿದೆ.   ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡುವ ವರದಿ ಆಧಾರದ ಮೇಲೆ ಮೋಡ ಬಿತ್ತನೆ ಅವಲಂಬಿತವಾಗಿದೆ. ಹವಾ ಮುನ್ಸೂಚನೆಯ ಪ್ರಕಾರ ಈ ತಿಂಗಳು ಅಂತ್ಯದೊಳಗೆ ಉತ್ತಮ ಹಾಗೂ ಭಾರೀ ಮಳೆಯಾಗುವ ಮುನ್ಸೂಚನೆಗಳು ಇಲ್ಲ. ಒಂದು ವೇಳೆ ವಾತಾವರಣದಲ್ಲಿ ಬದಲಾವಣೆ ಉಂಟಾದರೆ ಹೆಚ್ಚಿನ ಮಳೆ ನಿರೀಕ್ಷಿಸಬಹುದು.   ಅರಬ್ಬಿ ಸಮುದ್ರ ಇಲ್ಲವೇ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದರೆ ರಾಜ್ಯದಲ್ಲಿ ಹೆಚ್ಚಿನ ಮಳೆ ನಿರೀಕ್ಷಿಸಬಹುದಾಗಿದೆ. ಈಗ ಚದುರಿದಂತೆ ಮಳೆಯಾಗುತ್ತಿದ್ದರೂ ಜಲಾಶಯಗಳು ಭರ್ತಿಯಾಗುವಂತಹ ಪ್ರಮಾಣದಲ್ಲಿ ನೀರು ನದಿಗಳಲ್ಲಿ ಹರಿಯುತ್ತಿಲ್ಲ ಎಂದು ಕರ್ನಾಟಕ ನೈಸರ್ಗಿಕ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದರು.

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಕೊಳ್ಳದ ಜಲಾಶಯಗಳು ಭರ್ತಿಯಾಗಿವೆ. ಆದರೂ ಘಟಪ್ರಭ, ಮಲಪ್ರಭ, ತುಂಗಭದ್ರಾ ಜಲಾಶಯಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ.   ಕಾವೇರಿನದಿ  ಕೊಳ್ಳದಲ್ಲಿ ಹಾರಂಗಿ ಜಲಾಶಯವನ್ನು ಹೊರತುಪಡಿಸಿದರೆ ಉಳಿದ ಜಲಾಶಯಗಳಲ್ಲಿ ನೀರಿನ ಅಭಾವವಿದೆ. ಕಳೆದ ವರ್ಷಕ್ಕೆ ಹೋಲಿಸಿದರೂ ಕೂಡ ಕೆಆರ್‍ಎಸ್ , ಕಬಿನಿ, ಹೇಮಾವತಿ, ಜಲಾಶಯಗಳಲ್ಲೂ  ಕಡಿಮೆ ನೀರಿನ ಸಂಗ್ರಹವಾಗಿದೆ.   ಕೆಆರ್‍ಎಸ್‍ನಲ್ಲಿ ಕಳೆದ  ವರ್ಷ 105 ಅಡಿ ಸಂಗ್ರಹವಾಗಿದ್ದರೆ, ಇನ್ನು 98 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, 100 ಅಡಿ ಕೂಡ ತಲುಪಿಲ್ಲ.  ಹೇಮಾವತಿ ಭರ್ತಿಯಾಗಲು 18 ಟಿಎಂಸಿ ಅಡಿ, ಕೆಆರ್‍ಎಸ್ ಭರ್ತಿಯಾಗಲು 29 ಟಿಎಂಸಿ ಹಾಗೂ ಕಬಿನಿ ಭರ್ತಿಯಾಗಲು 5 ಟಿಎಂಸಿ ಅಡಿ ನೀರು ಬೇಕಾಗಿದೆ.  ಇನ್ನು ಮಲೆನಾಡಿನಲ್ಲಿರುವ ಪ್ರಮುಖ ಜಲವಿದ್ಯುತ್ ಜಲಾಶಯಗಳಾದ ಲಿಂಗನಮಕ್ಕಿ, ಸೂಪ, ವರಾಹಿ ಜಲಾಶಯಗಳ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ. ಇದರಿಂದ ಜಲವಿದ್ಯುತ್ ಉತ್ಪಾದನೆ ಮೇಲೂ ಕೂಡ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ.

Facebook Comments

Sri Raghav

Admin