ಭವಬಂಧನದಿಂದ ಬಿಡುಗಡೆಗೆ ಧರ್ಮಾಚರಣೆ ಅಗತ್ಯ

ಈ ಸುದ್ದಿಯನ್ನು ಶೇರ್ ಮಾಡಿ

renukacharya--swamiji

ಚಿಕ್ಕಮಗಳೂರು, ಆ.29- ಇಷ್ಟಲಿಂಗಪೂಜೆ ಮೋಕ್ಷಕ್ಕೆ ಸಾಧನ. ಭವಬಂಧನದಿಂದ ಬಿಡುಗಡೆಗೆ ಧರ್ಮಾಚರಣೆ ಅಗತ್ಯ ಎಂದು ಎಡೆಯೂರು ಕ್ಷೇತ್ರದ ಶ್ರೀ ಷ.ಬ್ರ.ರೇಣುಕಶಿವಾಚಾರ್ಯ ಸ್ವಾಮೀಜಿ ನುಡಿದರು.ಲೋಕ ಕಲ್ಯಾಣಾರ್ಥ ವಿಶ್ವಶಾಂತಿಗಾಗಿ ರಾಜ್ಯದ ವಿವಿಧ ಶ್ರೀ ವೀರಭದ್ರಸ್ವಾಮಿ ಕ್ಷೇತ್ರಗಳಲ್ಲಿ ಶ್ರಾವಣಮಾಸದ ಶಿವಪೂಜಾನುಷ್ಠಾನ ಕೈಗೊಂಡಿರುವ ಅವರು ನಗರದ ಕುಂಬಾರಬೀದಿ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಆಶೀರ್ವಚನ ಅನುಗ್ರಹಿಸಿದರು. ವೀರಶೈವ ಧರ್ಮ ಪುರಾತನ ಹಾಗೂ ವಿರೋಧರಹಿತವಾದ ಉತ್ಕಷ್ಟ  ವಿಚಾರಗಳನ್ನೊಳಗೊಂಡ ಪವಿತ್ರಧರ್ಮ. ಸದಾಲಿಂಗಧಾರಿಯಾಗಿ ನಿತ್ಯ ಇಷ್ಟಲಿಂಗಪೂಜಾ ವ್ರತಾಚರಣೆ ವೀರಶೈವ ಧರ್ಮದ ಪ್ರಮುಖ ಲಕ್ಷಣ ಎಂದವರು ವಿಶ್ಲೇಷಿಸಿದರು.
ದೇವರು, ಗುರುಗಳು, ಹಿರಿಯರ ಬಗ್ಗೆ ಭಕ್ತಿ, ಶ್ರದ್ಧೆ ಮೂಡಿಸುವುದರ ಜೊತೆಗೆ ಸಮಾಜದ ಬಗ್ಗೆ ಪ್ರೀತಿವಿಶ್ವಾಸ ಹೆಚ್ಚಿಸಿದಾಗ ಮಾತ್ರ ಭವಿಷ್ಯ ಉಜ್ವಲವಾಗುತ್ತದೆ ಎಂದರು.ವೀರಶೈವಧರ್ಮ ವಿಶ್ವವ್ಯಾಪಿ. ಶ್ರೀಲಂಕಾದಲ್ಲಿ ಶ್ರೀರೇಣುಕಾಚಾರ್ಯರು ಮೂರುಕೋಟಿಲಿಂಗ ಪ್ರತಿಷ್ಠಾಪಿಸಿದ್ದರು. ಈಗಲೂ ರೇಣುಕಾಶ್ರಮ ಅಲ್ಲಿದೆ. ನೇಪಾಳದಲ್ಲಿ ಅರ್ಚಕರಾಗಿ ಜಂಗಮಪರಂಪರೆ ಇಂದೂ ಇದೆ. ರಾಜಸ್ತಾನ ಸೇರಿದಂತೆ ಉತ್ತರಭಾರತದ ಹಲವು ರಾಜ್ಯಗಳಲ್ಲಿ ವೀರಶೈವರಿದ್ದಾರೆ ಎಂದು ಉಲ್ಲೇಖಿಸಿದರು.  ಗಿಡಮರಗಳನ್ನು ಬೆಳೆಸಿ, ವಾಯು-ಶಬ್ದಮಾಲಿನ್ಯ ನಿಯಂತ್ರಿಸಿ ಪ್ರಕೃತಿಯನ್ನು ಪಾಲಿಸುವುದು ಧರ್ಮಾಚರಣೆಯ ಲಕ್ಷಣ ಎಂದ ಶ್ರೀರೇಣುಕಶಿವಾಚಾರ್ಯರು, ಮನೆಯದೇವರು ಮತ್ತು ಮನೆಯಗುರುಗಳನ್ನು ಮರೆಯಬಾರದೆಂದರು. ವೀರಶೈವ ಗುಂಡಾಭಕ್ತ ಮಂಡಳಿ ಅಧ್ಯಕ್ಷ ಸಣ್ಣಪ್ಪ, ಕಾರ್ಯದರ್ಶಿ ಏಕಾಂತರಾಮು, ಮಾಧ್ಯಮ ಸಂಸ್ಕೃತಿ  ಪ್ರತಿಷ್ಠಾನ ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ , ನಿವೃತ್ತ ಶಿಕ್ಷಕ ಜಯಣ್ಣ, ಅರ್ಚಕ ರೇಣುಕಯ್ಯ, ಪ್ರಸನ್ನ, ವಿರೂಪಾಕ್ಷಯ್ಯಶಾಸ್ತ್ರಿ ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin