ಭಾರತಕ್ಕೆ 285 ರನ್ ಮುನ್ನಡೆ : ಡ್ರಾನತ್ತ 3ನೆ ಟೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Teast

ಸೇಂಟ್‍ಲೂಯಿಸ್,ಆ.13-ಮಧ್ಯಮ ವೇಗಿ ಭುವನೇಶ್ವರ್ ಕುಮಾರ್(35ಕ್ಕೆ 5) ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಆತಿಥೇಯರು ವೆಸ್ಟ್ ಇಂಡೀಸ್ ಕುಸಿತ ಕಂಡು ಮೊದಲ ಇನ್ನಿಂಗ್ಸ್‍ನಲ್ಲಿ 225 ರನ್‍ಗೆ ಸರ್ವಪತನ ಕಂಡಿತು. 2ನೇ ಇನ್ನಿಂಗ್ಸ್ ಆರಂಭಿಸಿರುವ ಪ್ರವಾಸಿ ತಂಡ ಭಾರತ 157 ರನ್‍ಗೆ 3 ವಿಕೆಟ್ ಕಳೆದುಕೊಂಡು ಒಟ್ಟಾರೆ 285 ರನ್‍ಗಳ ಮುನ್ನಡೆ ಸಾಧಿಸಿದೆ. ಡ್ಯಾರೆನ್‍ಸಾಮಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ 1 ವಿಕೆಟ್‍ಗೆ 107 ರನ್‍ಗಳಿಂದ 4ನೇ ದಿನದಾಟವನ್ನು ಆರಂಭಿಸಿದ ವೆಸ್ಟ್‍ಇಂಡೀಸ್ ಉತ್ತಮ ಆರಂಭ ಪಡೆಯಿತು. ಆದರೆ ತಂಡದ ಮೊತ್ತ 129 ರನ್ ಇದ್ದಾಗ ಡ್ಯಾರೆನ್ ಬ್ರಾವೊ 29 ರನ್ ಗಳಿಸಿ ಇಶಾಂತ್ ಶರ್ಮ ಬೌಲಿಂಗ್‍ನಲ್ಲಿ ಜಡೇಜಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಬ್ರಾತ್‍ವೇಟ್(64), ರವಿಚಂದ್ರನ್ ಅಶ್ವಿನ್ ಅವರ ಸ್ಪಿನ್ ದಾಳಿಗೆ ಬಲಿಯಾದರು.

ಭುವಿ ಜಾದೂ: 135 ರನ್‍ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೆಸ್ಟ್ ಇಂಡೀಸ್‍ಗೆ ಸ್ಯಾಮ್ಯೂಲ್ಸ್ ಹಾಗೂ ಬ್ಲಾಕ್‍ವುಡ್ ಜೋಡಿ ಆಸರೆಯಾದರು. ಈ ಜೋಡಿಯು ಪ್ರವಾಸಿ ತಂಡದ ಬೌಲರ್‍ಗಳನ್ನು ಕಾಡಿದರು. 4ನೇ ವಿಕೆಟ್ ಜೊತೆಯಾಟದಲ್ಲಿ 62 ರನ್ ಸೇರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಅತಿಥೇಯರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ ಭುವೇಶ್ವರ್ ಕುಮಾರ್, ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಬ್ಲಾಕ್ ವುಡ್(20 ರನ್)ರನ್ನು ಆಕ್ರಮಣಕಾರಿ ಬೌಲಿಂಗ್‍ನಿಂದ ಪೆವಿಲಿಯನ್‍ಗೆ ಅಟ್ಟಿದರು.

ಕೊಹ್ಲಿಗೆ ಕ್ಯಾಚ್ ಇತ್ತು ಬ್ಲಾಕ್‍ವುಂಡ್ ಹೊರ ನಡೆದ ನಂತರ ಪ್ರವಾಸಿ ತಂಡ ಪಾರುಪತ್ಯ ಮೆರೆಯಿತು. ಬ್ಲಾಕ್‍ವುಡ್ ಔಟಾದ ನಂತರ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಸ್ಯಾಮ್ಯೂಲ್ಸ್ 48 ರನ್ ಗಳಿಸಿ ಭುವಿ ಬೌಲಿಂಗ್‍ಗೆ ಕ್ಲೀನ್ ಬೊಲ್ಡ್ ಆಗಿ ಪೆವಿಲಿಯನ್ ಕಡೆ ಮುಖ ಮಾಡಿದರು.
ಜೇಸನ್ ಹೋಲ್ಡರ್ (2), ಡ್ಯಾರಿಚ್(18) ಹಾಗೂ ಜೋಸೆಫ್(0) ಅವರು ಭುವಿ ಬೌಲಿಂಗ್‍ಗೆ ವಿಕೆಟ್ ಒಪ್ಪಿಸಿದರು.   ಅದ್ಭುತವಾಗಿ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ ವಿಂಡೀಸ್‍ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳ ಕೈಗಳನ್ನು ಕಟ್ಟಿ ಹಾಕಿದರು. ಅಂತಿಮವಾಗಿ ಅತಿಥೇಯರ ತಂಡ ಮೊದಲ ಇನ್ನಿಂಗ್ಸ್‍ಗೆ 225 ರನ್‍ಗೆ ಆಲ್ ಔಟಾಗಿ 128 ರನ್‍ಗಳ ಹಿನ್ನಡೆ ಅನುಭವಿಸಿತು.

ಉತ್ತಮ ಆರಂಭ: ಮೊದಲ ಇನ್ನಿಂಗ್ಸ್‍ನಲ್ಲಿ 128 ರನ್‍ಗಳ ಮುನ್ನಡೆ ಸಾಧಿಸಿದ ಕೊಹ್ಲಿ ಬಳಗ ಎರಡನೇ ಇನ್ನಿಂಗ್ಸ್‍ನಲ್ಲಿ ಉತ್ತಮ ಆರಂಭ ಪಡೆಯಿತು. ರಾಹುಲ್ ಹಾಗೂ ಧವನ್ ಜೋಡಿ ಮೊದಲನೇ ವಿಕೆಟ್ ಜೊತೆಯಾಟದಲ್ಲಿ ತಂಡಕ್ಕೆ 49 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. 28 ರನ್ ಗಳಿಸಿ ರಾಹುಲ್ ಕಮ್ಮಿಂಗ್ಸ್ ಬೌಲಿಂಗ್‍ಗೆ ಔಟಾಗುತ್ತಿದ್ದಂತೆ ಧವನ್ 26 ಹಾಗೂ ನಾಯಕ ವಿರಾಟ್ ಕೊಹ್ಲಿ 4 ರನ್ ಗಳಿಸಿ ನಿರಾಸೆ ಅನುಭವಿಸಿದರು.
ರಹಾನೆ ಅರ್ಧಶತಕ: 72 ರನ್‍ಗೆ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‍ಮನ್‍ಗಳು ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ರಹಾನೆ ಹಾಗೂ ರೋಹಿತ್ ಶರ್ಮ ಎಚ್ಚರಿಕೆಯ ಆಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.

93 ಎಸೆತಗಳನ್ನು ಎದುರಿಸಿದ ರಹಾನೆ ಒಂದು ಬೌಂಡರಿ ಮೂಲಕ ಅಜೇಯ 51 ರನ್ ಗಳಿಸಿದರು. ಮೊದಲ ಇನ್ನಿಂಗ್ಸ್‍ನಲ್ಲಿ ನಿರಾಸೆ ಅನುಭವಿಸಿದ್ದ ರೋಹಿತ್ 2ನೇ ಇನ್ನಿಂಗ್ಸ್‍ನಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ರೋಹಿತ್ 51 ಎಸೆತಗಳಲ್ಲಿ ಒಂದು ಬೌಂಡರಿ, 3 ಸಿಕ್ಸರ್ ಅಜೇಯ 41 ರನ್‍ಗಳಿಸಿ ಅಂತಿಮ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.  ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿ ಈ ಮೂಲಕ 285 ರನ್‍ಗಳ ಮುನ್ನಡೆ ಸಾಧಿಸಿದೆ.   ಈ ಟೆಸ್ಟ್ ಬಹುತೇಕ ಡ್ರಾ ಆಗುವ ಸಾಧ್ಯತೆ ಯಿದ್ದು, ಭಾರತ ಬೇಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ವೆಸ್ಟ್ ಇಂಡೀಸ್‍ಗೆ ಗುರಿ ನೀಡಿ ನಂತರ ಪ್ರವಾಸಿ ಬೌಲರ್‍ಗಳು ಪವಾಡ ಮಾಡಿದರೆ ಮಾತ್ರ ಗೆಲುವು ಸಾಧಿಸಬಹುದು.

 

► Follow us on –  Facebook / Twitter  / Google+

Facebook Comments

Sri Raghav

Admin