ಭಾರತದೊಳಗೆ ಉಗ್ರರು ನುಸುಳಲು ಪಾಕ್ ಕುಮ್ಮಕ್ಕು

ಈ ಸುದ್ದಿಯನ್ನು ಶೇರ್ ಮಾಡಿ

Border
ನವದೆಹಲಿ, ಮೇ 10- ಕಾಶ್ಮೀರ ಕಣಿವೆಯ ಜಮ್ಮು ಪ್ರಾಂತ್ಯದಲ್ಲಿ ಉಗ್ರರ ನುಸುಳುವಿಕೆ ಗಣನೀಯವಾಗಿ ಹೆಚ್ಚಾಗುತ್ತಿರುವ ಬಗ್ಗೆ ಭಾರತೀಯ ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರ ವಹಿಸಿವೆ. ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಉದ್ದಕ್ಕೂ ಜೈಷ್-ಎ-ಮಹಮದ್ (ಜೆಇಎಂ) ಹಾಗೂ ಲಷ್ಕರ್-ಎ-ತೈಬಾ(ಎಲ್‍ಇಟಿ) ಭಯೋತ್ಪಾದಕರು ನುಸುಳಲು ಪಾಕಿಸ್ತಾನಿ ಸೇನಾ ಕಮಾಂಡೋಗಳು ವೇದಿಕೆ ಸಜ್ಜುಗೊಳಿಸಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಜೌರಿ ಮತ್ತು ಪೂಂಚ್ ಪ್ರಾಂತ್ಯಗಳ ಬಳಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶದಲ್ಲಿ ಅನೇಕ ಪಾಕ್ ನೆಲೆಗಳಲ್ಲಿ ಇದಕ್ಕಾಗಿ ಬಿರುಸಿನ ಕುತಂತ್ರ ಚಟುವಟಿಕೆಗಳು ನಡೆಯುತ್ತಿವೆ. ಭಯೋತ್ಪಾದಕರನ್ನು ಭಾರತದ ಗಡಿಯೊಳಗೆ ನುಗ್ಗುವಂತೆ ಮಾಡಲು ಪಾಕಿಸ್ತಾನ ಸೇನೆಯ ವಿಶೇಷ ಸೇವೆಗಳ ಸಮೂಹ(ಎಸ್‍ಎಸ್‍ಜಿ) ಗಡಿ ಸಕ್ರಿಯ ತಂಡಗಳನ್ನೂ (ಬಿಎಟಿಗಳು) ರಚಿಸಿವೆ ಎಂಬುದನ್ನು ಮೂಲಗಳು ಖಚಿತಪಡಿಸಿವೆ.

ಬಿಎಟಿ ಅಥವಾ ಬ್ಯಾಟ್-ಎಸ್‍ಎಸ್‍ಜಿ ಕಮ್ಯಾಂಡೊಗಳು ಮತ್ತು ಪಾಕಿಸ್ತಾನದಲ್ಲಿ ತರಬೇತಿ ಪಡೆದ ಭಯೋತ್ಪಾದಕರ ಜಂಟಿ ತಂಡ ಎಂಬುದು ಜಗಜ್ಜಾಹೀರವಾಗಿದೆ. ಬಿಎಟಿ ಬಹು ಹಿಂದಿನಿಂದಲೂ ಜಮ್ಮು ಮತ್ತು ಕಾಶ್ಮೀರಕ್ಕೆ ಉಗ್ರರು ನುಸುಳಲು ಕುಮ್ಮಕ್ಕು ನೀಡಿ ವಿಧ್ವಂಸಕ ಕೃತ್ಯಗಳಿಗೆ ಸಾಥ್ ನೀಡುತ್ತಿದೆ. 2017ರಲ್ಲಿ ಭಾರತೀಯ ಯೋಧರನ್ನು ಕೊಂದು ಹುತಾತ್ಮರ ತಲೆಗಳನ್ನು ಚೆಂಡಾಡಿ ಮೃತದೇಹಗಳನ್ನು ವಿರೂಪಗೊಳಿಸಿದ್ದು ಇದೇ ಬ್ಯಾಟ್ ತಂಡ. ಇತ್ತೀಚೆಗೆ ಕೂಡ ಈ ತಂಡದ ಕ್ರೂರ ಯೋಧರು ಮತ್ತು ನಿರ್ದಯಿ ಉಗ್ರರು ಅಟ್ಟಹಾಸ ಮೆರೆದಿದ್ದರು.

ಪೂಂಚ್ ಪ್ರಾಂತ್ಯದಲ್ಲಿನ ಕೃಷ್ಣ ಘಾಟಿ ವಲಯದ ಸುತ್ತಮುತ್ತ ತೀವ್ರ ನಿಗಾ ಇಟ್ಟಿರುವ ಬ್ಯಾಟ್ ಕಮಾಂಡೋಗಳು ಮತ್ತು ಉಗ್ರರು ಕಾಶ್ಮೀರದೊಳಗೆ ನುಸುಳಲು ಅದೇ ಸೂಕ್ತ ಮಾರ್ಗ ಎಂದು ಪರಿಗಣಿಸಿ ಕುತಂತ್ರ ಹೆಣೆದಿದ್ದಾರೆ. ಪೋಲಾಸ್ ಪೋಸ್ಟ್ ಮತ್ತು ಬಕ್ರಿ ಕಾಂಪ್ಲೆಕ್ಸ್ ಪ್ರದೇಶಗಳಲ್ಲೂ ಉಗ್ರರ ಚಲನವಲನಗಳ ಕುಹುರುಗಳು ಕಂಡುಬಂದಿವೆ. ಬಿಂಬೇರ್ ಗಲಿ ಸೆಕ್ಟರ್‍ನ ಬಾಗಿಚಾ ಪೋಸ್ಟ್ ನಲ್ಲಿ ಠಿಕಾಣಿ ಹೂಡಿರುವ ಪಾಕ್‍ನ ಎಸ್‍ಎಸ್‍ಜಿ ಕಮ್ಯಾಂಡೋಗಳು ಸೂಕ್ತ ಸಮಯ ನೋಡಿಕೊಂಡು ನುಗ್ಗಲು ಹೊಂಚು ಹಾಕುತ್ತಿದ್ದಾರೆ ಎಂದು ಮೂಲಗಳ ದೃಢಪಡಿಸಿವೆ.

ಸೇನಾ ಶಿಬಿರಗಳು, ಚೆಕ್‍ ಪೋಸ್ಟ್ ಗಳು, ಮಿಲಿಟರಿ ವಾಹನಗಳ ಮೇಲೆ ಆತ್ಮಾಹತ್ಯೆ ದಾಳಿಗಳನ್ನು ನಡೆಸಲು ಜೆಇಎಂ ಮತ್ತು ಎಲ್‍ಇಟಿ ಉಗ್ರರು ಸಜ್ಜಾಗುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಭಾರತೀಯ ಯೋಧರು ತೀವ್ರ ಕಟ್ಟೆಚ್ಚರ ವಹಿಸಿದ್ದು, ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿದ್ದಾರೆ.

Facebook Comments

Sri Raghav

Admin