ಭಾರತದ ಪ್ರಥಮ ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ : ಕರ್ನಾಟಕ ತಂಡಕ್ಕೆ ನಟ ದಿಗಂತ್ ನಾಯಕ

ಈ ಸುದ್ದಿಯನ್ನು ಶೇರ್ ಮಾಡಿ

Digant

ಚೆನ್ನೈ, ಆ.21- ಇಂಡಿಯನ್ ಪ್ರಿಮೀಯರ್ ಲೀಗ್ (ಐಪಿಎಲ್) ಮಾದರಿಯಲ್ಲಿ ಬ್ಯಾಡ್ಮಿಂಟನ್ನನ್ನು ಪ್ರವರ್ಧಮಾನಕ್ಕೆ ತರುವ ಉದ್ದೇಶದೊಂದಿಗೆ ಭಾರತದ ಪ್ರಥಮ ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ (ಸಿಬಿಎಲ್)-ಸೀಸನ್ 1 ಪಂದ್ಯಾವಳಿ ಸೆ.18ರಿಂದ ನ.12ರವರೆಗೆ ವಿವಿಧ ಹಂತಗಳಲ್ಲಿ ನಡೆಯಲಿದೆ. ದಕ್ಷಿಣ ಭಾರತದ ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್ ಮತ್ತು ಮೊಲಿವುಡ್ ಚಿತ್ರತಾರೆಯರು ಮತ್ತು ಖ್ಯಾತನಾಮರು ಈ ಪಂದ್ಯಗಳಲ್ಲಿ ಸೆಣಸಲಿದ್ದು, ಕ್ರೀಡಾ ಮತ್ತು ಚಿತ್ರಪ್ರೇಮಿಗಳನ್ನು ರಂಜಿಸಲಿದ್ದಾರೆ.   ಮಲೇಷ್ಯಾ ರಾಜಧಾನಿ ಕೌಲಾಲಂಪುರ್ನಲ್ಲಿ ನಡೆಯುವ ಫೈನಲ್ ಹಂತದ ಪಂದ್ಯಗಳೊಂದಿಗೆ ನಾಲ್ಕು ರಾಜ್ಯಗಳನ್ನು ಒಳಗೊಂಡ ಸೆಲೆಬ್ರಿಟಿ ಲೀಗ್ ಪಂದ್ಯಾವಳಿ ಆಯೋಜಿಸಲು ಸುಮಾರು 15 ಕೋಟಿ ರೂ.ಗಳಿಗೂ ಅಧಿಕ ವೆಚ್ಚವಾಗಲಿದೆ ಎಂದು ಸ್ಟಾರ್ಟ್ -ಅಪ್ ಕಂಪನಿಯಾದ ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ ಪ್ರೈ.ಲಿ. (ಸಿಬಿಎಲ್) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಹೇಮಚಂದ್ರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ.17ರಂದು ಚೆನೈನಲ್ಲಿ ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ ಉದ್ಘಾಟನೆಗೊಳ್ಳಲಿದ್ದು, ಸೆ.18ರಿಂದ ಪಂದ್ಯಗಳು ಆರಂಭವಾಗಲಿದೆ. ಚೆನ್ನೈ ಲೀಗ್ ಅಲ್ಲದೇ, ಕೊಚ್ಚಿ, ಬೆಂಗಳೂರು ಮತ್ತು ಹೈದರಾಬಾದ್ನಂಥ ದಕ್ಷಿಣ ಭಾರತದ ಇತರ ಕೇಂದ್ರಗಳಲ್ಲೂ ಸಹ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ನ.11ರಂದು ಕ್ವಾಲಾಲಂಪುರ್ನಲ್ಲಿ ಸ್ಟಾರ್ನೈಟ್ ಸಮಾರಂಭ ಜರುಗಲಿದ್ದು, ಮರುದಿನ ಪೈನಲ್ ಲೀಗ್ ನಡೆಯಲಿದೆ.   ಕರ್ನಾಟಕ ಆಲ್ಪ್ಸ್ ತಂಡಕ್ಕೆ ನಟ ದಿಗಂತ್ ನಾಯಕರಾಗಿದ್ದು, ಚೆನ್ನೈ ರಾಕರ್ಸ್ದ, ಕೇರಳ ರಾಯಲ್ಸ್, ಮತ್ತು ಟಾಲಿವುಡ್ ಥಂಡರ್ಸ್ಾ ತಂಡಗಳಿಗೆ ಕ್ರಮವಾಗಿ ನಟರುಗಳಾದ ಆರ್ಯ, ಜಯರಾಮ್ ಮತ್ತು ಸುಧೀರ್ಬಾಬು ನೇತೃತ್ವ ವಹಿಸಲಿದ್ದಾರೆ.

ಕ್ರಿಕೆಟ್ ನಂತರ ಭಾರತದಲ್ಲಿ ಹೆಚ್ಚಾಗಿ ಆಡುವ ಎರಡನೇ ಕ್ರೀಡೆ ಎಂದರೆ ಬ್ಯಾಡ್ಮಿಂಟನ್. ತಮ್ಮ ದೇಹದಾರ್ಢ್ಯ ಮತ್ತು ಸ್ವಾಸ್ಥ್ಯ ಕಾಪಾಡಿಕೊಳ್ಳಲು ಕನಿಷ್ಠ ಶೇಕಡ 80ರಷ್ಟು ಸೆಲೆಬ್ರಿಟಿಗಳು ಮತ್ತು ಖ್ಯಾತನಾಮರು ಬ್ಯಾಡ್ಮಿಂಟನ್ನನ್ನು ಒಂದು ಮನರಂಜನೆ ಕ್ರೀಡೆಯಾಗಿ ಆಡುತ್ತಾರೆ. ಈ ಕ್ರೀಡೆಯನ್ನು ಇನ್ನಷ್ಟು ಜನಪ್ರಿಯಗೊಳಿಸುವುದು ನಮ್ಮ ಉದ್ದೇಶ. ಪಿ.ವಿ.ಸಿಂಧು ಅವರು ರಿಯೋ ಒಲಿಂಪಿಕ್ ಕ್ರೀಡಾಕೂಟದಲ್ಲಿ ರಜತ ಪದಕ ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಹಾಗೂ ಈ ಕ್ರೀಡೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲು ಯುವ ಜನಾಂಗಕ್ಕೆ ಮತ್ತು ಸೆಲೆಬ್ರೆಟಿಗಳಿಗೆ ಪ್ರೇರಣೆಯಾಗಿದ್ದಾರೆ. ಈ ಲೀಗ್ ಪಂದ್ಯಾವಳಿಯು ತಮ್ಮ ವ್ಯಕ್ತಿತ್ವದ ಇನ್ನೊಂದು ಮುಖವನ್ನು ಅನಾವರಣಗೊಳಿಸಲು ಚಿತ್ರತಾರೆಯರಿಗೆ ನೆರವಾಗಲಿದೆ ಎಂದು ಸಂಘಟಕರು ಹೇಳಿದ್ದಾರೆ.
ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ (ಸಿಬಿಎಲ್) ತನ್ನ ಮೊದಲ ಸೀಸನ್ನಲ್ಲೇ ಇಡೀ ದಕ್ಷಿಣ ಭಾರತದ ಚಿತ್ರರಂಗವನ್ನು ಒಂದೆಡೆ ಸೇರಿಸಲಿದೆ. ಮುಂದಿನ ಆವೃತ್ತಿ ವೇಳೆಗೆ ಇದು ರಾಷ್ಟ್ರೀಯ ಪಂದ್ಯಾವಳಿಯಾಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Facebook Comments

Sri Raghav

Admin