ಭಾರತದ ಭೇಟಿ ರೋಮಾಂಚನ ಉಂಟು ಮಾಡಿದೆ : ಇವಾಂಕಾ ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

Ivanka--02

ನವದೆಹಲಿ, ನ.28-ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಭೇಟಿ ನೀಡಿರುವುದು ರೋಮಾಂಚನ ಉಂಟು ಮಾಡಿದೆ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಮತ್ತು ಸಲಹೆಗಾತಿ ಇವಾಂಕಾ ಟ್ರಂಪ್, ನಾವು ಒಗ್ಗೂಡಿ(ಭಾರತ-ಅಮೆರಿಕ) ವಿವಿಧ ಕ್ಷೇತ್ರಗಳಲ್ಲಿ ಮತ್ತಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಬಹುದಾಗಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುತ್ತಿನನಗರಿ ಹೈದರಾಬಾದ್‍ನಲ್ಲಿ ಇಂದಿನಿಂದ ಆರಂಭವಾಗಿರುವ ಮೂರು ದಿನಗಳ ಜಾಗತಿಕ ಉದ್ಯಮಶೀಲತಾ ಶೃಂಗಸಭೆಯಲ್ಲಿ(ಜಿಇಎಸ್) ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಇವಾಂಕಾ ಆಂಗ್ಲಪತ್ರಿಕೆಯೊಂದಕ್ಕೆ ನೀಡಿರುವ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಆರ್ಥಿಕ ಬೆಳವಣಿಗೆ ಮತ್ತು ಸುಧಾರಣೆ ಪ್ರವರ್ತನೆ, ಭಯೋತ್ಪಾದನೆ ವಿರುದ್ಧ ಹೋರಾಟ ಮತ್ತು ಭದ್ರತಾ ಸಹಕಾರಗಳ ವಿಸ್ತರಣೆ ಸೇರಿದಂತೆ ವಿವಿಧ ಕ್ಷೇತ್ರಳಲ್ಲಿ ಸಾಮಾನ್ಯ ಆದ್ಯತೆಯನ್ನು ಉಭಯ ದೇಶಗಳು ಹಂಚಿಕೊಳ್ಳಬಹುದಾಗಿದೆ ಎಂದು ಅಮೆರಿಕದ ಯಶಸ್ವಿ ಮಹಿಳಾ ಉದ್ಯಮಿಯೂ ಆಗಿರುವ ಇವಾಂಕಾ ತಿಳಿಸಿದ್ದಾರೆ.

ನ್ಯೂಯಾರ್ಕ್‍ನಲ್ಲಿ ಕಳೆದ ಸೆಪ್ಟೆಂಬರ್‍ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ವೇಳೆ ನನಗೆ ವಿದೇಶಾಂಗ ವ್ಯವಹಾರ ಸಚಿವರಾದ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡುವ ಅವಕಾಶ ಲಭಿಸಿತ್ತು. ಭಾರತದ ಇತಿಹಾಸ ಮತ್ತು ಭವ್ಯ ಪರಂಪರೆ ಬಗ್ಗೆ ನಾನು ಅವರ ಬಳಿ ಬಹುವಾಗಿ ಪ್ರಶಂಸಿದ್ದೆ ಎಂದು ಅವರು ಮೆಲುಕು ಹಾಕಿದ್ದಾರೆ.

ಭಾರತ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಉದ್ಯಮಶೀಲತೆಯಲ್ಲಿಯೂ ಪ್ರವರ್ಧಮಾನಕ್ಕೆ ಬರುತ್ತಿದೆ. ಹೈದರಾಬಾದ್‍ನ ಜಿಇಎಸ್‍ನಲ್ಲಿ ಇದೇ ಮೊದಲ ಬಾರಿಗೆ ಶೇ.50ಕ್ಕಿಂತಲೂ ಹೆಚ್ಚು ಮಹಿಳಾ ಉದ್ಯಮಿಗಳು ಭಾಗವಹಿಸುತ್ತಿದ್ದಾರೆ ಎಂದು ಇವಾಂಕಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಭಾರತದಲ್ಲಿ ಮಹಿಳಾ ಉದ್ಯಮಿಗಳ ಮತ್ತಷ್ಟು ಸಕ್ರಿಯರಾಗಲು ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೆಲವು ಮಹತ್ವದ ಯೋಜನೆಗಳ ಬಗ್ಗೆ ಮಾತನಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin