ಭಾರತದ 25 ನೆಲೆಗಳ ಮೇಲೆ ಪಾಕ್ ದಾಳಿ, ಓರ್ವ ಯೋಧ ಹುತಾತ್ಮ, ಉಗ್ರನೊಬ್ಬನ ಹತ್ಯೆ
ಜಮ್ಮು, ಅ.24- ಕಾಶ್ಮೀರ ಕಣಿವೆಯ ಜಮ್ಮು ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ನಿರಂತರ ಕದನವಿರಾಮ ಉಲ್ಲಂಘಿಸಿ ಹಲವಾರು ವಲಯಗಳ ಮೇಲೆ ಪಾಕಿಸ್ತಾನಿ ಸೇನೆ ಮುಂದುವರಿಸಿರುವ ದಾಳಿಯಲ್ಲಿ ಬಿಎಸ್ಎಫ್ ಯೋಧನೊಬ್ಬ ಹುತಾತ್ಮನಾಗಿದ್ದು, ಕೆಲವರು ಗಾಯಗೊಂಡಿದ್ದಾರೆ. ಭಾರತೀಯ ಯೋಧರೂ ಪಾಕ್ ರೇಂಜರ್ಗಳಿಗೆ ದಿಟ್ಟ ಉತ್ತರ ನೀಡಿದ್ದಾರೆ. ಆ ಭಾಗದಲ್ಲಿ ಭೀಕರ ಗುಂಡಿನ ಚಕಮಕಿ ನಡೆದಿದ್ದು, ಸಮರ ಸದೃಶ ವಾತಾವರಣ ಸೃಷ್ಟಿಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಆರ್ಎಸ್ ಪುರ, ಅರ್ನಿಯಾ, ಸುಚೇತ್ಗಢ, ಪರ್ಗಾವಲ್ ಮತ್ತು ಕನಾಚಕ್ನ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಇರುವ ಹಲವಾರು ವಲಯಗಳ 25 ಸೇನಾ ನೆಲೆಗಳು ಮತ್ತು ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನಿ ಪಡೆಗಳು ನಿನ್ನೆ ಸಂಜೆಯಿಂದ ಮೋರ್ಟಾರ್ ಷೆಲ್ಗಳಿಂದ ತೀವ್ರ ದಾಳಿಯನ್ನು ಮುಂದುವರಿಸಿವೆ ಎಂದು ಹಿರಿಯ ಬಿಎಸ್ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಂಡಿನ ದಾಳಿ ಮತ್ತು ಷೆಲ್ಲಿಂಗ್ನಲ್ಲಿ ಸುಶೀಲ್ ಕುಮಾರ್ ಎಂಬ ಯೋಧ ಹುತಾತ್ಮನಾಗಿದ್ದು, ಇನ್ನಿಬ್ಬರಿಗೆ ಗಾಯಗಳಾಗಿವೆ. ಗಡಿಯಲ್ಲಿ ಪಹರೆಯಲ್ಲಿರುವ ಬಿಎಸ್ಎಫ್ ಪಡೆಗಳು ಪಾಕಿಸ್ತಾನಕ್ಕೆ ಸೂಕ್ತ ಪ್ರತ್ಯುತ್ತರ ನೀಡಿವೆ ಎಂದು ಅವರು ಹೇಳಿದ್ದಾರೆ. ಆರ್ಎಸ್ ಪುರ ವಲಯದಲ್ಲಿ ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಕೆಲವರು ಗಾಯಗೊಂಡಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಬ್ದುಲಿಯಾನ್ ಮತ್ತು ಕೊರೊಟಾನಾ ಖುರ್ದ್ ಪ್ರದೇಶಗಳ ಮೇಲೂ ಪಾಕ್ ಸೇನೆ ದಾಳಿ ನಡೆಸಿದ್ದು, ಕೆಲವರಿಗೆ ಗಾಯಗಳಾಗಿವೆ.
ಗಡಿಯಲ್ಲಿ ಯೋಧರು ಮತ್ತು ಗ್ರಾಮಸ್ಥರನ್ನು ಗುರಿಯಾಗಿಟ್ಟುಕೊಂಡು ಯಾವುದೇ ದಾಳಿ ನಡೆಸಿದಲ್ಲಿ ಪಾಕಿಸ್ತಾನ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಿಎಸ್ಎಫ್ನ ಹೆಚ್ಚುವರಿ ಮಹಾನಿರ್ದೇಶಕ ಅರುಣ್ ಕುಮಾರ್ ಸ್ಪಷ್ಟ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳ ಒಳಗೆ ಪಾಕ್ ಮತ್ತೆ ಕ್ಯಾತೆ ತೆಗೆದಿದೆ. ಭಾರತದ ಕಮ್ಯಾಂಡೊಗಳ ಸರ್ಜಿಕಲ್ ಸ್ಟ್ರೈಕ್ ನಂತರ ಪಾಕಿಸ್ತಾನಿ ಸೇನಾಪಡೆಗಳು 30ಕ್ಕೂ ಹೆಚ್ಚು ಕದನ ವಿರಾಮಗಳನ್ನು ಉಲ್ಲಂಘಿಸಿವೆ.
ಉಗ್ರನ ಹತ್ಯೆ :
ಇದೇ ವೇಳೆ ಕುಪ್ವಾರ ಜಿಲ್ಲೆಯಲ್ಲಿ ಭದ್ರತಾಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನಿ ಬೆಂಬಲಿತ ಉಗ್ರನೊಬ್ಬ ಹತನಾಗಿದ್ದು, ಆತನಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ.
► Follow us on – Facebook / Twitter / Google+