ಭಾರತ-ಇಸ್ರೇಲ್ ಬಾಂಧವ್ಯದಲ್ಲಿ ನವ ಮನ್ವಂತರ ಆರಂಭವಾಗಿದೆ : ನೆತನ್ಯಾಹು
ನವದೆಹಲಿ, ಜ.14-ಭಾರತ-ಇಸ್ರೇಲ್ ನಡುವಣ ಬಾಂಧವ್ಯದಲ್ಲಿ ಹೊಸ ಮನ್ವಂತರ ಆರಂಭವಾಗಿದೆ ಎಂದು ಇಸ್ರೇಲಿ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಹೇಳಿದ್ಧಾರೆ. ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ನ ಅತ್ಯುತ್ತಮ ಗೆಳೆಯ. ಮೋದಿ ಅವರ ಇಸ್ರೇಲ್ ಐಸಿಹಾಸಿಕ ಭೇಟಿಯೊಂದಿಗೆ ಉಭಯ ದೇಶಗಳ ನಡುವೆ ನವಯುಗ ಆರಂಭಕ್ಕೆ ಮುನ್ನುಡಿಯಾಗಿದ್ದು, ಈ ಸ್ನೇಹ ಸಂಬಂಧ ಮತ್ತಷ್ಟು ಸದೃಢವಾಗಿ ಮುಂದುವರಿಯಲಿದೆ ಎಂದು ಅವರು ಹೇಳಿದರು. ಆರು ದಿನಗಳ ಭಾರತ ಪ್ರವಾಸಕ್ಕಾಗಿ ನಿನ್ನೆ ರಾಜಧಾನಿ ದೆಹಲಿಗೆ ಆಗಮಿಸಿದ ಇಸ್ರೇಲ್ ಪ್ರಧಾನಿಯವರನ್ನು ಮೋದಿ ಶಿಷ್ಟಾಚಾರ ಬದಿಗೊತ್ತಿ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದ್ದರು. ಇಂದು ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ನೆತನ್ಯಾಹು ಅವರಿಗೆ ಸಂಪ್ರದಾಯಿಕ ಸ್ವಾಗತ ಕೋರಲಾಯಿತು. ಸೇನಾ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದ ನಂತರ ಮಾತನಾಡಿದ ಅವರು ಇದು ಭಾರತದ ನನ್ನ ಐತಿಹಾಸಿಕ ಭೇಟಿಯಾಗಿದೆ. ಭಾರತ-ಇಸ್ರೇಲ್ ನಡುವಣ ಸಂಬಂಧದಲ್ಲಿ ಹೊಸ ಶಕೆ ಆರಂಭವಾಗಲಿದೆ ಎಂದರು.
ರಾಷ್ಟ್ರಪತಿ ಜೊತೆ ಭೇಟಿ :
ನಂತರ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಕೆಲಕಾಲ ಔಪಚಾರಿಕ ಸಮಾಲೋಚನೆ ನಡೆಸಿದರು. ಬಳಿಕ ಅವರು ರಾಜ್ಘಾಟ್ಗೆ ತೆರಳಿ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಸಮಾಧಿಗೆ ನಮನ ಸಲ್ಲಿಸಿ ಗೌರವಾಂಜಲಿ ಸಲ್ಲಿಸಿದರು. ಬೆಂಜಮಿನ್ ನೆತನ್ಯಾಹು ಅವರ ಆರು ದಿನಗಳ ಭಾರತ ಪ್ರವಾಸ ಇಂದಿನಿಂದ ಆರಂಭವಾಗಿದ್ದು, ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಬಲಗೊಂಡಂತಾಗಿದೆ. ತಮ್ಮ ದೇಶದ ವಾಣಿಜ್ಯ ನಿಯೋಗದೊಂದಿಗೆ ಭೇಟಿ ನೀಡಿರುವ ಇಸ್ರೇಲ್ ಪ್ರಧಾನಿ ಅವರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಿ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕುವ ಕಾರ್ಯಕ್ರಮವಿದೆ.
ಉಭಯ ದೇಶಗಳ ನಡುವೆ ಆರ್ಥಿಕ, ವಾಣಿಜ್ಯ, ವ್ಯಾಪಾರ, ಇಂಧನ, ಭದ್ರತೆ, ಮಾಹಿತಿ, ತಂತ್ರಜ್ಞಾನ, ಪ್ರವಾಸೋದ್ಯಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಒಡಂಬಡಿಕೆ ಏರ್ಪಡಲಿದೆ. 15 ವರ್ಷಗಳ ಅಂತರದ ನಂತರ ಇಸ್ರೇಲ್ ಪ್ರಧಾನಿಯೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಎರಡು ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಬಂಧಗಳು ವೃದ್ದಿಯಾಗಿ 25 ವರ್ಷಗಳ ಸಂದರ್ಭದಲ್ಲೇ ನೆತನ್ಯಾಹು ಭೇಟಿ ಮಹತ್ವ ಪಡೆದುಕೊಂಡಿದೆ.