‘ಭಾರತ ದಾಳಿ ಮಾಡಿದರೆ ನಾವು ನಿಮ್ಮ ಬೆಂಬಲಕ್ಕಿದ್ದೇವೆ’ : ಪಾಕಿಗಳಿಗೆ ಕುತಂತ್ರಿ ಚೀನಾ ಭರವಸೆ

ಈ ಸುದ್ದಿಯನ್ನು ಶೇರ್ ಮಾಡಿ

Pak

ನವದೆಹಲಿ, ಸೆ.25-ಭಾರತ ಸೇರಿದಂತೆ ಯಾವುದೇ ವಿದೇಶಿ ದಾಳಿ ನಡೆದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡುವುದಾಗಿ ಭರವಸೆ ನೀಡಿರುವ ಚೀನಾ ಮತ್ತೊಮ್ಮೆ ತನ್ನ ಕುತಂತ್ರಿ ಬುದ್ದಿಯನ್ನು ಪ್ರದರ್ಶಿಸಿದೆ. ಅಲ್ಲದೇ ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದ ಧೋರಣೆಗೂ ತನ್ನ ಸಂಪೂರ್ಣ ಸಹಮತ ವ್ಯಕ್ತಪಡಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ.  ಕಾಶ್ಮೀರದ ಉರಿ ವಲಯದ ಸೇನಾ ನೆಲೆ ಮೇಲೆ ಜೆಇಎಂ ಉಗ್ರಗಾಮಿ ಸಂಘಟನೆ ಭಯಾನಕ ದಾಳಿ ನಡೆಸಿ 18 ಮಂದಿ ಯೋಧರ ಹತ್ಯೆ ನಡೆಸಿದ ನಂತರ ಭಾರತ-ಪಾಕ್ ನಡುವಣ ಸಂಬಂಧ ಮತ್ತಷ್ಟು ಬಿಗಡಾಯಿಸಿರುವಾಗಲೇ ಚೀನಾ ಪರಿಸ್ಥಿತಿಯ ದುರ್ಲಾಭ ಪಡೆಯುವ ಮೂಲಕ ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ.

ಭಾರತ ಸೇರಿದಂತೆ ಯಾವುದೇ ವಿದೇಶಿ ದಾಳಿ ನಡೆದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡುವುದಾಗಿ ಚೀನಾ ವಾಗ್ದಾನ ಮಾಡಿದೆ ಹಾಗೂ ಕಾಶ್ಮೀರ ವಿಷಯದಲ್ಲಿ ಇಸ್ಲಾಮಾಬಾದ್ ತಳೆದಿರುವ ಧೋರಣೆಗೂ ಪೂರ್ಣ ಸಹಕಾರ ಘೋಷಿಸಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದ ಪಂಜಾಬ್ ಮುಖ್ಯಮಂತ್ರಿ ಶಹಬಾಜ್ ಷರೀಫ್ ಜೊತೆ ನಡೆದ ಉನ್ನತ ರಾಜತಾಂತ್ರಿಕರ ಸಭೆಯಲ್ಲಿ ಚೀನಾ ಈ ಎರಡೂ ಭರವಸೆಗಳನ್ನು ನೀಡಿದೆ. ಈ ಕುರಿತು ಲಾಹೋರ್‍ನಲ್ಲಿರುವ ಚೀನಾದ ಕಾನ್ಸುಲ್ ಜನರಲ್ ಯು ಬೊರೆನ್ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ ಎಂದು ಪಾಕ್‍ನ ಆಂಗ್ಲ ದೈನಿಕ ದಿ ಡಾನ್ ವರದಿ ತಿಳಿಸಿದೆ.

ಶಹಬಾಜ್ ಷರೀಫ್‍ರ 65ನೆ ಜನ್ಮ ದಿನದ ಪ್ರಯುಕ್ತ ನಿನ್ನೆ ಅವರಿಗೆ ಶುಭಾಶಯ ಹೇಳಿದ ಯು ಬೊರೆನ್ ಭಾರತ-ಪಾಕ್ ನಡುವೆ ಉದ್ಭವಿಸಿರುವ ಪರಿಸ್ಥಿತಿ ಬಗ್ಗೆ ಗಹನ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಅಗತ್ಯವಾದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಮಾಧ್ಯಮಗಳು ಉಲ್ಲೇಖಿಸಿವೆ.

ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದ ಮೂಲಕ ಹಾದು ಹೋಗುವ 46 ಶತಕೋಟಿ ಡಾಲರ್ ವೆಚ್ಚದ ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ (ಸಿಪಿಇಸಿ) ಯೋಜನೆ ಬಗ್ಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬೀಜಿಂಗ್ ನವದೆಹಲಿ ವಿರುದ್ಧ ವಿಷಕಾರುತ್ತಿದೆ. ಇದೇ ಕಾರಣಕ್ಕಾಗಿ ಪರಮಾಣು ಸಮೂಹ ಸಂಘಟನೆಯ ಸದಸ್ಯತ್ವ ಹೊಂದಲು ಭಾರತಕ್ಕೆ ಚೀನಾ ಅಡ್ಡಗಾಲು ಹಾಕಿದ್ದು ಕೂಡ ಇದೇ ಕಾರಣಕ್ಕೆ.  ಈಶಾನ್ಯ ಭಾರತದ ಅರುಣಾಚಲ ಪ್ರದೇಶದಲ್ಲಿ ಸೂಪರ್ ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತ ನಿಯೋಜಿಸಲು ಉದ್ದೇಶಿಸಿದಾಗ ಚೀನಾ ಕೆಂಡಾಮಂಡಲವಾಗಿತ್ತು. ಈ ಎಲ್ಲದರ ಒಟ್ಟು ಪರಿಣಾಮವಾಗಿ ಈಗ ಚೀನಾ ಪಾಕಿಸ್ತಾನಕ್ಕೆ ಸಾಥ್ ನೀಡುವ ಮೂಲಕ ಮತ್ತೊಮ್ಮೆ ಭಾರತದ ಮೇಲಿರುವ ತನ್ನ ಹಳೆಯ ಹಗೆತನವನ್ನು ತೋರ್ಪಡಿಸಿದೆ. ► Follow us on –  Facebook / Twitter  / Google+

Facebook Comments

Sri Raghav

Admin