ಭಾರತ ರತ್ನ, ಅಜಾತಶತ್ರು ಅಟಲ್ ಜಿ (ವಿಶೇಷ ಲೇಖನ )

ಈ ಸುದ್ದಿಯನ್ನು ಶೇರ್ ಮಾಡಿ

Atal-Bihari------01

ರಾಷ್ಟ್ರ ರಾಜಕೀಯ ರಂಗದಲ್ಲಿ ಅಜಾತಶತ್ರು, ಚಾಣಾಕ್ಷ ರಾಜಕಾರಣಿ, ಅಪ್ರತಿಮ ವಾಗ್ಮಿ ಎಂದೇ ಪ್ರಖ್ಯಾತರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಕಂಡ ಅಪರೂಪದ ಮಹಾ ರಾಜಕೀಯ ನಾಯಕರಲ್ಲಿ ಒಬ್ಬರು. ತಮ್ಮ ಅಸಾಮಾನ್ಯ ವಾಕ್ ಚಾತುರ್ಯ ಮತ್ತು ವಾಕ್ಪಟುತ್ವದ ಈ ಮುತ್ಸದ್ದಿ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ದಿಟ್ಟ ಮತ್ತು ದೂರದೃಷ್ಟಿಯ ಕ್ರಮಗಳಿಂದ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಕಾಂಗ್ರೆಸ್ಸೇತರ ಪ್ರಧಾನಮಂತ್ರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ವಾಜಪೇಯಿ, ಬಿಜೆಪಿಯ ಸೌಮ್ಯವಾದಿ ಧುರೀಣರೆಂದು ಗುರುತಿಸಿಕೊಂಡವರು.

ವಾಜಪೇಯಿ 1924ರ ಡಿಸೆಂಬರ್ 25ರಂದು ಮಧ್ಯಪ್ರದೇಶದ ಗ್ವಾಲಿಯರ್‍ನಲ್ಲಿ ಜನಿಸಿದರು. ಇವರ ತಂದೆ ಕೃಷ್ಣ ಬಿಹಾರಿ ವಾಜಪೇಯಿ, ತಾಯಿ ಕೃಷ್ಣಾ ದೇವಿ. ಬ್ರಿಟಿಷ್ ವಸಾಹತುಶಾಹಿ ಆಡಳಿತವನ್ನು ವಿರೋಧಿಸಿದ್ದಕ್ಕೆ ಅವರು ಹದಿವಯಸ್ಸಿನಲ್ಲಿ ಸ್ವಲ್ಪ ಕಾಲ ಜೈಲು ವಾಸ ಅನುಭವಿಸಿದರು. 50ರ ದಶಕದ ಪ್ರಾರಂಭದಲ್ಲಿ ಆರ್‍ಎಸ್‍ಎಸ್ ನಿಯತಕಾಲಿಕವೊಂದನ್ನು ನಡೆಸುವ ಉದ್ದೇಶದಿಂದ ಕಾನೂನು ವ್ಯಾಸಂಗವನ್ನು ತೊರೆದರು. ಅವರು ಭಾರತೀಯ ಜನ ಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಅವರ ಆಪ್ತ ಅನುಯಾಯಿಗಳಾಗಿದ್ದರು.
ವಿದ್ಯಾರ್ಥಿ ದಿನಗಳಲ್ಲೇ ರಾಷ್ಟ್ರೀಯವಾದಿ ರಾಜಕಾರಣದೊಂದಿಗೆ ಹೋರಾಟಕ್ಕೆ ಧುಮುಕಿದರು. ಬಿಟ್ರಿಷ್ ಆಳ್ವಿಕೆಯನ್ನು ಕೊನೆಗೊಳಿಸಲು 1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಗೆ ಸೇರಿದರು. ರಾಜಕೀಯ ಶಾಸ್ತ್ರ ಮತ್ತು ಕಾನೂನು ವಿದ್ಯಾರ್ಥಿಯಾಗಿದ್ದಾಗಲೇ ಕಾಲೇಜಿನಲ್ಲಿ ವಿದೇಶಾಂಗ ವ್ಯವಹಾರಗಳಲ್ಲಿ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡರು. ಹಲವಾರು ವರ್ಷಗಳ ಕಾಲ ಈ ಆಸಕ್ತಿಗೆ ನೀರೆರೆದು ಪೋಷಿಸಿದ ಅವರು ಭಾರತವನ್ನು ವಿವಿಧ ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ವೇದಿಕೆಗಳಲ್ಲಿ ಪ್ರತಿನಿಧಿಸುವಾಗ ಆ ಕೌಶಲ್ಯಗಳು ಮತ್ತು ಪರಿಣಿತಿಗಳನ್ನು ಬಳಸಿಕೊಂಡರು.
ಅಟಲ್ ಬಿಹಾರಿ ವಾಜಪೇಯಿಯವರು ಆರ್‍ಎಸ್‍ಎಸ್‍ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ನಂತರ ಬಿಜೆಪಿಗೆ ಸೇರ್ಪಡೆಯಾಗಿ 1957ರಲ್ಲಿ ಪ್ರಥಮ ಬಾರಿ ಸಂಸದರಾಗಿ ಆಯ್ಕೆಯಾದರು. ಐದು ದಶಕಗಳಿಗೂ ಹೆಚ್ಚು ಕಾಲ ಅತ್ಯಂತ ಕ್ರಿಯಾಶೀಲ ಸಂಸದೀಯ ಪಟುವಾಗಿ ದೇಶದ ಗಮನ ಸೆಳೆದರು.

ಅಜಾತಶತ್ರು, ದಾಖಲೆಗಳ ಸರದಾರ :
ಅಟಲ್ ಅಜಾತಶತ್ರು, ತಮ್ಮ ರಾಜಕೀಯ ಚಿಂತನೆಗಳಿಗೆ ಕಟಿ ಬದ್ಧರಾದವರು. ಅಕ್ಟೋಬರ್ 13, 1999ರಲ್ಲಿ, ಹೊಸ ಸಮ್ಮಿಶ್ರ ಸರ್ಕಾರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‍ಡಿಎ) ಮುಖ್ಯಸ್ಥರಾಗಿ ಎರಡನೇ ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 1996ರಲ್ಲಿ ಇವರು ಅಲ್ಪಾವಧಿಗೆ ಪ್ರಧಾನಮಂತ್ರಿಯಾಗಿದ್ದರು. ಪಂಡಿತ್ ಜವಾಹರ್ ಲಾಲ್ ನೆಹರು ಅವರ ನಂತರ ಸತತ ಎರಡು ಬಾರಿ ಸೇವೆ ಸಲ್ಲಿಸಿದ ಪ್ರಥಮ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಹಿರಿಯ ಸಂಸದೀಯ ಪಟುವಿನ ರಾಜಕೀಯ ಬದುಕು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವಿಸ್ತರಿಸಿದೆ. ವಾಜಪೇಯಿ ಅವರು ಲೋಕಸಭೆಗೆ ಒಂಭತ್ತು ಬಾರಿ ಹಾಗೂ ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿರುವುದು ಒಂದು ದಾಖಲೆಯೇ.  ಭಾರತದ ಪ್ರಧಾನಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ, ಸಂಸತ್ತಿನ ವಿವಿಧ ಮುಖ್ಯ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿ ಹಾಗೂ ವಿರೋಧಪಕ್ಷದ ನಾಯಕರಾಗಿ ಅವರು ಭಾರತದ ಸ್ವಾತಂತ್ರ್ಯ ನಂತರ ದೇಶೀಯ ಮತ್ತು ವಿದೇಶಿ ನೀತಿಗಳಿಗೆ ಸ್ಪಷ್ಟ ರೂಪ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಅತ್ಯುತ್ತಮ ಸಂಸದೀಯ ಪಟು :

ಅವರು ಓರ್ವ ಪತ್ರಕರ್ತರಾಗಿ ವೃತ್ತಿಯನ್ನು ಆರಂಭಿಸಿದರು. 1951ರಲ್ಲಿ ಆ ವೃತ್ತಿಯನ್ನು ಬಿಟ್ಟು ಭಾರತೀಯ ಜನ ಸಂಘ ಸೇರಿದರು. ಇದು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಮುಖ್ಯ ಭಾಗವಾದ ಇಂದಿನ ಭಾರತೀಯ ಜನತಾ ಪಕ್ಷವಾಗಿದೆ. ಅವರೊಳಗೊಬ್ಬ ಕವಿ ಇದ್ದಾನೆ. ನಿರಂತರ ರಾಜಕೀಯ ಚಟುವಟಿಕೆಗಳ ನಡುವೆಯೂ ಅವರು ಸಂಗೀತ ಮತ್ತು ಅಡುಗೆ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ.  ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಸಮಾನತೆಯ ಹರಿಕಾರರಾದ ಅವರು ದೂರದೃಷ್ಟಿಯ, ಭಾರತವನ್ನು ಪ್ರಗತಿ ಪಥದತ್ತ ಕೊಂಡ್ಯೊಯುವ ಗುರಿಯನ್ನು ಹೊಂದಿದ್ದರು. ಭಾರತವನ್ನು ವಿಶ್ವದ ಅತ್ಯಂತ ಬಲಿಷ್ಠ ಮತ್ತು ಸಮೃದ್ಧಿ ದೇಶವನ್ನಾಗಿಸಲು ಕಂಕಣಬದ್ಧರಾಗಿದ್ದರು.

ಸಮಾಜ ಮತ್ತು ದೇಶಕ್ಕಾಗಿ ಅರ್ಧ ಶತಮಾನಗಳಿಗೂ ಹೆಚ್ಚು ಕಾಲ ಇವರು ನೀಡಿದ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿತು. 1994ರಲ್ಲಿ ಇವರನ್ನು ಅತ್ಯುತ್ತಮ ಸಂಸದೀಯ ಪಟು ಎಂದು ಗೌರವಿಸಲಾಯಿತು.

ಅದರ ಪ್ರಮಾಣ ಪತ್ರದ ಒಕ್ಕಣೆ ಹೀಗಿದೆ :

ಅವರ ಹೆಸರಿಗೆ ಅನುಗುಣವಾಗಿ ಅಟಲ್‍ಜಿ ಖ್ಯಾತ ರಾಷ್ಟ್ರೀಯ ನಾಯಕರು, ಓರ್ವ ಪ್ರೌಢ ರಾಜಕಾರಣಿ, ನಿಸ್ವಾರ್ಥ ಸಮಾಜ ಸೇವಕ, ವಾಗ್ಮಿ, ಕವಿ ಮತ್ತು ಸಾಹಿತಿ, ಪತ್ರಕರ್ತ ಹಾಗೂ ಬಹುಮುಖ ಪ್ರತಿಭೆಯ ವ್ಯಕ್ತಿತ್ವದ ನಾಯಕ.. ಅಟಲ್‍ಜೀ ಅವರು ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದಾರೆ..ಅವರ ಕಾರ್ಯಗಳು ರಾಷ್ಟ್ರೀಯತೆಗೆ ಬದ್ಧವಾಗಿ ಪ್ರತಿಧ್ವನಿಸುತ್ತವೆ.

ದಿಟ್ಟ ಹೆಜ್ಜೆ, ಸ್ಪಷ್ಟ ಗುರಿ :

ಅಟಲ್‍ಜೀ ಅವರು ದಿಟ್ಟ ಹೆಜ್ಜೆಗಳು ಹಲವಾರು. 1992ರ ಡಿಸೆಂಬರ್ 6ರಂದು ಆಯೋಧ್ಯೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣವು ವಾಜಪೇಯಿ ಅವರಿಗೆ ಅಗ್ನಿಪರೀಕ್ಷೆಯಾಗಿತ್ತು. ಆ ಸಂದರ್ಭದಲ್ಲಿ ಅವರು ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದರು. ಎಲ್.ಕೆ.ಅಡ್ವಾಣಿ ಮತ್ತು ಬಿಜೆಪಿಯ ಇತರ ನಾಯಕರು ಈ ಪ್ರಕರಣವನ್ನು ಸಮರ್ಥಿಸಿಕೊಂಡಿದ್ದರು. ಆದರೆ ವಾಜಪೇಯಿ ಅವರು ಇದನ್ನು ಖಂಡಿಸಿ ತಮ್ಮ ಧರ್ಮ ನಿರಪೇಕ್ಷ ನಿಲುವಿಗೆ ಅಂಟಿಕೊಂಡಿದ್ದು ಅವರು ಮುತ್ಸದ್ದಿತನಕ್ಕೆ ಸಾಕ್ಷಿಯಾಗಿದೆ.

1996ರಲ್ಲಿ ಪ್ರಥಮ ಬಾರಿಗೆ ಪ್ರಧಾನಮಂತ್ರಿಯಾದರು. ಆದರೆ ಬಹುಮತದ ಕೊರತೆಯಿಂದ ಕೇವಲ 13 ದಿನಗಳಲ್ಲಿ ಅಧಿಕಾರ ಕಳೆದುಕೊಂಡರು. 1998ರಲ್ಲಿ ಎರಡನೇ ಬಾರಿ ಪ್ರಧಾನಿ ಪಟ್ಟ ಅಲಂಕರಿಸಿದರು. ಎಐಎಡಿಎಂಕೆ ಪರಮೋಚ್ಚ ನಾಯಕ ಜೆ.ಜಯಲಲಿತಾ ಬೆಂಬಲ ವಾಪಸ್ ಪಡೆದ ಕಾರಣ 13 ತಿಂಗಳುಗಳಿಗೆ ಅಧಿಕಾರ ಕಳೆದುಕೊಳ್ಳಬೇಕಾಯಿತು. 1999ರಲ್ಲಿ ಪ್ರಧಾನಿಯಾಗಿ ಮರು ಆಯ್ಕೆಯಾಗಿ ಪೂರ್ತಿ ಐದು ವರ್ಷಗಳ ಕಾಲ ಅಧಿಕಾರದ ಚುಕ್ಕಾಣಿ ಹಿಡಿದು ಎನ್‍ಡಿಎ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಅವರ ಅಧಿಕಾರಾವಧಿಯಲ್ಲಿ ಅನೇಕ ಮಹತ್ವದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಅನುಷ್ಠಾನಗೊಂಡವು. ಭಾರತವು 1998ರಲ್ಲಿ ರಾಜಸ್ತಾನ ಪೋಖ್ರಾನ್‍ನಲ್ಲಿ ಸರಣಿ ಪರಮಾಣು ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿತು. ಪಾಕಿಸ್ತಾನ ಜತೆಗಿನ ಸಂಬಂಧವನ್ನು ಸುಧಾರಿಸುವುದು ವಾಜಪೇಯಿ ಅವರ ವೈಯಕ್ತಿಕ ಉದ್ದೇಶವಾಗಿತ್ತು. ಆದರೆ ಬೆನ್ನಿಗೆ ಚೂರಿ ಇರಿದ ಪಾಕಿಸ್ತಾನಕ್ಕೆ ಕಾರ್ಗಿಲ್ ಯುದ್ಧದಲ್ಲಿ ದಿಟ್ಟ ಉತ್ತರ ನೀಡಿದ ಭಾರತದ ಅಧ್ವರ್ಯಯಾಗಿದ್ದರು ಅಟಲ್‍ಜೀ.

ಭಾರತದ ಪ್ರಮುಖ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಸುವರ್ಣ ಚತುಷ್ಕೋನ ರಸ್ತೆ ನಿರ್ಮಾಣ ಯೋಜನೆ ಕೂಡ ವಾಜಪೇಯಿ ಅವರ ಪರಿಕಲ್ಪನೆ. ಅಟಲ್ ಬಿಹಾರಿ ವಾಜಪೇಯಿ ಅವರ ನಿಷ್ಠೆ, ದಕ್ಷತೆ, ಪ್ರಾಮಾಣಿಕತೆ, ದೂರದೃಷ್ಟಿ ಮತ್ತು ಕಾರ್ಯವೈಖರಿಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಅವಿವಾಹಿತರಾದ ವಾಜಪೇಯಿ ಅವರು ಉತ್ತಮ ಕವಿಯೂ ಆಗಿದ್ದಾರೆ.

ಭಾರತರತ್ನ ಗೌರವ:
ವಾಜಪೇಯಿ ಅವರಿಗೆ 2014ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಿದೆ. ದೆಹಲಿಯಲ್ಲಿರುವ ಕೃಷ್ಣ ಮೆನನ್ ಮಾರ್ಗದ ವಾಜಪೇಯಿ ನಿವಾಸದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ವಾಜಪೇಯಿ ಅವರಿಗೆ ಭಾರತರತ್ನ ಪ್ರದಾನ ಮಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಂಪುಟದ ಸಚಿವರು ಸೇರಿದಂತೆ ಕೆಲವು ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ಇದು ವಾಜಪೇಯಿ ಅವರಿಗೆ ಹುಟ್ಟುಹಬ್ಬದ ಬಹು ಅಮೂಲ್ಯ ಉಡುಗೊರೆಯಾಗಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin