ಭಾರತ ವಿಶ್ವದ ‘ಅಪಘಾತ’ ದೇಶ ಎಂಬ ಕಳಂಕ ಅಳಿಸಿ ಹಾಕಿ : ಸುಪ್ರೀಂ ಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Accidntt01

ನವದೆಹಲಿ, ಡಿ. 18- ವಿಶ್ವದ ಅಪಘಾತ ದೇಶ ಭಾರತ ಎಂಬ ಕಳಂಕವನ್ನು ಅಳಿಸಿಹಾಕುವ ಅಗತ್ಯವಿದೆ ಎಂದು ಸಲಹೆ ಮಾಡಿರುವ ಸುಪ್ರೀಂಕೋರ್ಟ್, ಪಾನಮತ್ತ ಚಾಲನೆಗಳಿಗೆ ಕಡಿವಾಣ ಹಾಕುವ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸಬೇಕೆಂದು ನಿರ್ದೇಶನ ನೀಡಿದೆ.   ಕೆಲವು ವರ್ಷಗಳಿಂದ ದೇಶದ ವಿವಿಧೆಡೆ ಸಂಭವಿಸಿದ ರಸ್ತೆ ಅಪಘಾತ ದುರಂತಗಳು ಮತ್ತು ಸಾವು-ನೋವುಗಳ ಅಂಕಿ- ಅಂಶಗಳನ್ನು ಪರಾಮರ್ಶಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಟ.ಎಸ್.ಠಾಕೂರ್ ನೇತೃತ್ವದ ತ್ರಿ ಸದಸ್ಯಪೀಠವು ಈ ಮೇಲಿನಂತೆ ಸಲಹೆ ಮಾಡಿದೆ.

ಮಾನವನ ಜೀವ ಅಮೂಲ್ಯವಾದುದು. ಭಾರತದಲ್ಲಿ ರಸ್ತೆಜಾಲ ವಿಸ್ತರಣೆಯಾಗುತ್ತಿದೆ. ಅದಕ್ಕೆ ಅನುಗುಣವಾಗಿ ರಸ್ತೆಗಳ ಅಭಿವೃದ್ಧಿಗೆ ಮೂಲ ಸೌಕರ್ಯಾಭಿವೃದ್ದಿಯೂ ಮುಖ್ಯ. ಇದು ಆರ್ಥಿಕ ಪ್ರಗತಿಯ ಅವಿಭಾಜ್ಯ ಅಂಗ. ಆದರೆ, ರಸ್ತೆ ಅಪಘಾತದಿಂದಾಗಿ ಸಾಮಾನ್ಯ ನಾಗರಿಕನ ಜೀವನ ಕಮರಿ ಹೋಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಜಾರಿಗೊಳಿಸಿದರೆ ಭಾರತಕ್ಕೆ ಅಂಟಿರುವ ಜಗತ್ತಿನ ಅಪಘಾತ ರಾಜಧಾನಿ ಎಂಬ ಕಳಂಕವನ್ನು ಅಳಿಸಿ ಹಾಕಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ 2014ರ ಅವಧಿಯಲ್ಲೇ 2.37 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿದ್ದು, ಕನಿಷ್ಠ 85,462 ಮಂದಿ ಮೃತಪಟ್ಟಿದ್ದಾರೆ. 2.59 ಲಕ್ಷ ಜನ ಗಾಯಗೊಂಡಿದ್ದಾರೆ ಎಂಬ ಆತಂಕಕಾರಿ ಸಂಗತಿಯು ಸುಪ್ರೀಂಕೋರ್ಟ್ ಮುಂದೆ ಸಲ್ಲಿಸಲಾಗಿರುವ ಅಧಿಕೃತ ಅಂಕಿ-ಅಂಶದಿಂದ ಕಂಡುಬಂದಿದೆ.
2009ರ ವರ್ಷದ ಸಾಂಖ್ಯಿಕ ವರದಿ ಪ್ರಕಾರ, ವಿಶ್ವದಲ್ಲಿ ಸಂಭವಿಸಿರುವ ಭೀಕರ ರಸ್ತೆ ಅಪಘಾತಗಳಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಇಲ್ಲಿ ಪ್ರತಿ ನಾಲ್ಕು ನಿಮಿಷಕ್ಕೊಮ್ಮೆ ಒಂದು ರಸ್ತೆ ಅಪಘಾತವಾಗುತ್ತದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin