ಭಾರಿ ಕುತೂಹಲಕ್ಕೆ ಕಾರಣವಾದ ನಾಳೆ ನಡೆಯಲಿರುವ ಬಿಜೆಪಿ ಭಿನ್ನಮತೀಯರ ‘ಪಕ್ಷ ಉಳಿಸಿ’ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-BJP-Eshwarappa

ಬೆಂಗಳೂರು,ಏ.26-ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕಾರ್ಯ ವೈಖರಿ ವಿರುದ್ಧ ಬಂಡೆದ್ದಿರುವ ಭಿನ್ನಮತೀಯರು ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಕ್ಷ ಉಳಿಸಿ ಸಭೆ ನಡೆಸುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.  ಈ ಬೆಳವಣಿಗೆಗಳ ನಡುವೆಯೇ ತಮ್ಮ ಬೇಡಿಕೆಗಳನ್ನು ಈಡೇರಿಸಲು ಮೀನಾಮೇಷ ಎಣಿಸುತ್ತಿರುವ ಯಡಿಯೂರಪ್ಪಗೆ ತಕ್ಕ ಪಾಠ ಕಲಿಸಲೇಬೇಕೆಂದು ಪಟ್ಟು ಹಿಡಿದಿರುವ ಕೆಲ ಭಿನ್ನಮತೀಯರು ರಾಜೀನಾಮೆ ನೀಡುವ ಹಂತಕ್ಕೂ ಬಂದಿದ್ದಾರೆ.

ಸಂಘಟನೆ ಉಳಿಸಿ ಎಂಬ ಘೋಷ ವಾಕ್ಯದೊಂದಿಗೆ ಬಿಜೆಪಿಯ ನಿಷ್ಠಾವಂತರು ಎನಿಸಿಕೊಂಡಿರುವ ಕೆಲ ಮುಖಂಡರು ಹಾಗೂ ಅವರ ಬೆಂಬಲಿಗರು ಸಭೆ ನಡೆಸಲಿದ್ದು ಕೆಲ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಿದ್ದಾರೆ.   ಸಭೆಗೆ ಭಿನ್ನಮತೀಯ ನಾಯಕರ ನೇತೃತ್ವ ವಹಿಸಿಕೊಂಡಿರುವ ವಿಧಾನಸಭೆಯ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಭಾಗಹಿಸುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಬಿಎಸ್‍ವೈ ನಾಯಕತ್ವದ ವಿರುದ್ಧ ಬಹಿರಂಗವಾಗೆಯೇ ಗುಟುರು ಹಾಕುತ್ತಿರುವ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಮಾಜಿ ಶಾಸಕರಾದ ಸೊಗಡು ಶಿವಣ್ಣ , ನೇಮಿನಾಯಕ್, ವಿಧಾನಪರಿಷತ್ ಸದಸ್ಯರಾದ ಸೋಮಣ್ಣ ಬೇವಿನಮರದ್, ಭಾನುಪ್ರಕಾಶ್ ಸೇರಿದಂತೆ ಮತ್ತಿತರರು ಭಾಗವಹಿಸುವರು.

ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ:

ನಾಳೆ ನಡೆಯಲಿರುವ ಸಭೆಯಲ್ಲಿ ಯಡಿಯೂರಪ್ಪ ವಿರುದ್ಧ ಶಕ್ತಿ ಪ್ರದರ್ಶಿಸಲು ಭಿನ್ನಮತೀಯರು ರಣತಂತ್ರ ರೂಪಿಸಿದ್ದಾರೆ. ಪ್ರತಿಯೊಂದು ಜಿಲ್ಲೆಯ ಸುಮಾರು 500ರಿಂದ 1000ಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರನ್ನು ಕರೆತರಬೇಕೆಂದು ಸೂಚಿಸಲಾಗಿದೆ.   ಇದಕ್ಕೆ ಬಿಜೆಪಿಯೊಳಗಿರುವ ಕೆಲ ನಾಯಕರು ಕೂಡ ಪರೋಕ್ಷವಾಗಿ ಕೈ ಜೋಡಿಸಿದ್ದಾರೆ. ಈ ಮೂಲಕವಾದರೂ ಬಿಎಸ್‍ವೈ ಹಣಿಯಬೇಕೆಂಬುದು ಅವರ ಲೆಕ್ಕಾಚಾರವಾಗಿದೆ. ಸರಿಸುಮಾರು 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸಿ ಸಂದೇಶವನ್ನು ರವಾನಿಸಲಿದ್ದಾರೆ.

ಬದಲಾವಣೆಗೆ ಪಟ್ಟು :

ಪ್ರಮುಖವಾಗಿ ಬಿಎಸ್‍ವೈ ಅವರ ಏಕಪಕ್ಷೀಯ ನಿರ್ಧಾರ ಪದಾಧಿಕಾರಿಗಳ ಪಟ್ಟಿಯಲ್ಲಿ ಉಂಟಾಗಿರುವ ಗೊಂದಲ, ನಿಷ್ಠಾವಂತರ ಕಡಗಣನೆ ಬಗ್ಗೆ ನಾಳಿನ ಸಭೆಯಲ್ಲಿ ಚರ್ಚೆ ನಡೆಯಲಿದೆ.   ಪ್ರಮುಖವಾಗಿ ತುಮಕೂರು, ಮೈಸೂರು, ಚಾಮರಾಜನಗರ, ದಾವಣಗೆರೆ, ಬಳ್ಳಾರಿ, ಬೀದರ್, ಕಲಬುರಗಿ, ಬೆಳಗಾವಿ ಸೇರಿದಂತೆ ಕೆಲವು ಜಿಲ್ಲೆಗಳ ಅಧ್ಯಕ್ಷರು ವಿವಿಧ ಮೋರ್ಚಾಗಳ ಪದಾಧಿಕಾರಿಗಳನ್ನು ಬದಲಾಯಿಸಿ ಪಕ್ಷ ನಿಷ್ಠರಿಗೆ ನೀಡಬೇಕೆಂಬುದು ಭಿನ್ನಮತೀಯರ ಒತ್ತಾಯ.

ಇನ್ನು ಇತ್ತೀಚೆಗೆ ನಡೆದ ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆಯೂ ಆತ್ಮಾವಲೋಕನ ನಡೆಯಲಿದೆ.   ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳನ್ನು ಜನರ ಬಳಿ ಕೊಂಡೊಯ್ಯದೆ ಕೇವಲ ತಮ್ಮ ನಾಯಕತ್ವವನ್ನೇ ಬಿಎಸ್‍ವೈ ಬಿಂಬಿಸಿಕೊಂಡಿದ್ದು , ಭಿನ್ನಮತೀಯರ ಕಣ್ಣು ಕೆಂಪಾಗುವಂತೆ ಮಾಡಿದೆ.   ಪಕ್ಷದಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ಯಡಿಯೂರಪ್ಪ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಪಕ್ಷದ ಸಂಘಟನೆಯತ್ತ ಚಿತ್ತಹರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin