ಭಾರೀ ಮತಗಳ ಅಂತರದಿಂದ ‘ಜಯ’ದ ಗದ್ದುಗೆ ಹಿಡಿದ ದಿನಕರನ್, ಎಐಎಡಿಎಂಕೆಗೆ ಮುಖಭಂಗ

ಈ ಸುದ್ದಿಯನ್ನು ಶೇರ್ ಮಾಡಿ

TTV-Dinakaran--02

ಚೆನ್ನೈ, ಡಿ.24-ಚುನಾವಣೆಗೂ ಮುನ್ನವೇ ಸಾಕಷ್ಟು ವಿವಾದದಿಂದಲೇ ರಾಷ್ಟ್ರದ ಗಮನಸೆಳೆದಿದ್ದ ತಮಿಳುನಾಡಿನ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಟಿ.ಟಿ.ವಿ.ದಿನಕರನ್ ಭಾರೀ ಮತಗಳಿಂದ ಗೆಲುವು ಸಾಧಿಸುವ ಮೂಲಕ ಆಡಳಿತಾರೂಢ ಎಐಎಡಿಎಂಕೆಗೆ ಮುಖಭಂಗವಾಗಿದೆ.
ವಿಜೇತ ಅಭ್ಯರ್ಥಿ ಟಿಟಿವಿ ದಿನಕರನ್ ಸುಮಾರು 50 ಸಾವಿರ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಎಐಎಡಿಎಂಕೆಯ ಅಭ್ಯರ್ಥಿ ಮಧುಸೂದನ್, ಡಿಎಂಕೆಯ ಮದುತು ಗಣೇಶ್, ಹೀನಾಯ ಸೋಲು ಅನುಭವಿಸಿದ್ದಾರೆ.
ಬಿಜೆಪಿಯ ಗಂಗೈ ಅಮದನ್ ಸೇರಿದಂತೆ ಕಣದಲ್ಲಿದ್ದ ಎಲ್ಲ ಪಕ್ಷೇತರ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ವಿಶೇಷವೆಂದರೆ ಇಲ್ಲಿನ ಬಿಜೆಪಿ ಅಭ್ಯರ್ಥಿ ನೋಟಾಗಿಂತಲೂ ಕಡಿಮೆ ಮತ ಪಡೆದಿದ್ದಾರೆ.

 

 

Dinakaran--02

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಜರುಗಿತ್ತು. ಶತಾಯಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದ ಮುಖ್ಯಮಂತ್ರಿ ಯಳಪ್ಪಾಡಿ ಪಳನಿಸ್ವಾಮಿ, ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್‍ಗೆ ಭಾರೀ ಮುಖಭಂಗವಾಗಿದೆ.  ನಾಲ್ಕು ದಿನಗಳ ಹಿಂದಷ್ಟೇ 2ಜಿ ಸ್ಪೆಕ್ಟ್ರಂ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಕೇಂದ್ರದ ಮಾಜಿ ಸಚಿವ ಎ.ರಾಜಾ, ರಾಜ್ಯಸಭಾ ಸದಸ್ಯೆ ಕನಿಮೋಳಿ ಅವರುಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು. ಈ ತೀರ್ಪು ಉಪ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ ಎಂದು ನಂಬಲಾಗಿತ್ತು. ಅಲ್ಲದೆ ಮತದಾನಕ್ಕೂ ಮುನ್ನ, ಜಯಲಲಿತ ಆಸ್ಪತ್ರೆಯಲ್ಲಿದ್ದ ವಿಡಿಯೋ ಬಿಡುಗಡೆ ಮಾಡಿದ್ದು ಎಐಎಡಿಎಂಕೆಗೆ ಮತದಾರರು ಕೈಹಿಡಿಯಲಿದ್ದಾರೆ ಎಂದು ವ್ಯಾಖ್ಯಾನಿಸಲಾಗಿತ್ತು.

ಆದರೆ ಪಕ್ಷೇತರ ಅಭ್ಯರ್ಥಿಯಾಗಿದ್ದ ಟಿಟಿವಿ ದಿನಕರನ್ ಎಲ್ಲ ರಾಜಕೀಯ ಸಮೀಕ್ಷೆಗಳನ್ನು ತಲೆಕೆಳಗೆ ಮಾಡಿ ಗೆಲುವಿನ ನಗೆ ಬೀರಿದ್ದಾರೆ. ಬೆಳಗ್ಗೆ 8 ಗಂಟೆಗೆ ಆರಂಭವಾದ ಮತಗಳ ಎಣಿಕೆಯಲ್ಲಿ ಮೊದಲ ಪ್ರಾರಂಭಿಕ ಸುತ್ತಿನಲ್ಲೇ ದಿನಕರನ್ ಐದು ಸಾವಿರ ಮತಗಳ ಮುನ್ನಡೆ ಪಡೆದರು. ನಂತರ ಕೊನೆಯ ಸುತ್ತಿನವರೆಗೂ ಅವರ ಮುನ್ನಡೆಯನ್ನು ಹಿಂದಿಕ್ಕಲು ಇತರೆ ಅಭ್ಯರ್ಥಿಗಳಿಗೆ ಸಾಧ್ಯವಾಗಲಿಲ್ಲ. ಅಂತಿಮ ಸುತ್ತಿನ ಮತ ಎಣಿಕೆ ಮುಗಿದಾಗ ದಿನಕರನ್ 50 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು.

 

 

Dinakaran--03

ನಾನೇ ಅಮ್ಮನ ವಾರಸುದಾರ:
ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಚೆನ್ನೈನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಿನಕರನ್, ನಾವೇ ನಿಜವಾದ ಎಐಎಡಿಎಂಕೆ ವಾರಸುದಾರರು. ಮುಖ್ಯಮಂತ್ರಿ ಯಡಪ್ಪಾಡಿ ಸ್ವಾಮಿ ಸೇರಿದಂತೆ ಈ ಸರ್ಕಾರವನ್ನು ಇನ್ನು ಮೂರು ತಿಂಗಳೊಳಗೆ ಪತನಗೊಳಿಸುವುದಾಗಿ ಘೋಷಿಸಿದ್ದಾರೆ. ರಾಜ್ಯದ ಜನತೆಯ ವಿಶ್ವಾಸವನ್ನು ಕಳೆದುಕೊಂಡಿರುವ ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ಫಲಿತಾಂಶದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

 

Dinakaran--01

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಎಐಎಡಿಎಂಕೆ ಉಚ್ಛಾಟಿತ ನಾಯಕಿ ಶಶಿಕಲಾ ಬಣದಿಂದ ದಿನಕರನ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.   ಚುನಾವಣೆ ಘೋಷಣೆಯಾದ ನಂತರ ಈ ಕ್ಷೇತ್ರ ಹೈವೋಲ್ಟೇಜ್ ಎಂದೇ ಬಿಂಬಿತವಾಗಿತ್ತು. ಮತದಾರರಿಗೆ ಆಮಿಷವೊಡ್ಡಲು ಮೂರು ಪಕ್ಷಗಳು ಭಾರೀ ಪ್ರಮಾಣದಲ್ಲಿ ಹಣ ಹಂಚಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.   ತಮ್ಮ ಬಣಕ್ಕೆ ಪಕ್ಷದ ಗುರುತು ನೀಡುವಂತೆ ದಿನಕರನ್ ಚುನಾವಣಾ ಆಯೋಗದ ಅಧಿಕಾರಿಯೊಬ್ಬರಿಗೆ ಲಂಚ ನೀಡಿದ್ದಾರೆಂಬ ಆರೋಪ ಹೊತ್ತುಕೊಂಡಿದ್ದರು. ಇಷ್ಟೆಲ್ಲ ಆರೋಪಗಳ ನಡುವೆಯೂ ದಿನಕರನ್ ಗೆಲುವು ಸಾಧಿಸಿರುವುದರಿಂದ ಮುಂದಿನ ದಿನಗಳಲ್ಲಿ ಎಐಎಡಿಎಂಕೆ ಭವಿಷ್ಯ ಏನಾಗಲಿದೆ ಎಂಬ ಆತಂಕದ ಕಾರ್ಮೋಡ ಆವರಿಸಿದೆ.

Dinakaran--05

ಭಾರೀ ಸಂಭ್ರಮ:
ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ದಿನಕರನ್ ನಿವಾಸದ ಮುಂದೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ಫಲಿತಾಂಶವನ್ನು ಅಮ್ಮನಿಗೆ ಸಲ್ಲಿಸುತ್ತೇವೆ ಎಂದು ಕಾರ್ಯಕರ್ತರು ಹೇಳಿದರು. 2016 ಡಿಸೆಂಬರ್ 5ರಂದು ಮುಖ್ಯಮಂತ್ರಿಯಾಗಿದ್ದ ಜಯಲಲಿತ ಅನಾರೋಗ್ಯಕ್ಕೆ ತುತ್ತಾಗಿ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಜಯಲಲಿತ ಅವರ ನಿಧನದ ನಂತರ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿತ್ತು.

Facebook Comments

Sri Raghav

Admin