ಭಾವೈಕ್ಯತೆಯ ಮೇರು ವ್ಯಕ್ತಿ ಅಗಲಿಕೆಗೆ ಕಂಬನಿ : ಸಾಹಿತಿ ಬಿ.ಎಂ.ಹಿರೇಮಠ

ಈ ಸುದ್ದಿಯನ್ನು ಶೇರ್ ಮಾಡಿ

6
ಮುದ್ದೇಬಿಹಾಳ,ಮಾ.1– ತಾಲೂಕಿನ ಅಮರಗೋಳದ ಹಿರಿಯ ಸಾಹಿತಿ ಮಲೀಕಸಾಬ ನದಾಫ ಅವರ ನಿಧನಕ್ಕೆ ಇಡೀ ತಾಲೂಕಿನ ಸಾಹಿತ್ಯ ಲೋಕವೇ ಕಂಬನಿ ಮಿಡಿದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ನಿನ್ನೆ ಬೆಳಗ್ಗೆ ತಾಲೂಕಿನ ವಿವಿಧ ಸಾಹಿತಿಗಳು, ಗಣ್ಯರು ಅವರ ನಿವಾಸಕ್ಕೆ ಭೇಟಿ   ನೀಡಿ ಅಂತಿಮ ದರ್ಶನ ಪಡೆದುಕೊಂಡರು.ಶ್ರದ್ಧಾಂಜಲಿ ಸಭೆಯಲ್ಲಿ ತಾಲೂಕಿನ ಮೊದಲನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಹಿರಿಯ ಸಾಹಿತಿ ಬಿ.ಎಂ. ಹಿರೇಮಠ ಮಾತನಾಡಿ, ಗದುಗಿನ ಪುಟ್ಟರಾಜ ಗವಾಯಿಗಳಲ್ಲಿ ಶಿಕ್ಷಣ ಪಡೆದ ಕಾರಣಕ್ಕೋ ಏನೋ ಅವರಲ್ಲಿ ಹಿಂದೂ ಮುಸ್ಲಿಂ ಎಂಬ ಭಾವನಯೇ ಇರಲಿಲ್ಲ. ನಿಗರ್ವಿ, ಸಮಾಜವಾದಿ ಆದರ್ಶಗಳನ್ನಿಟ್ಟು ಬದುಕಿದವರು. ವೀರಶೈವ ಸಿದ್ಧಾಂತಗಳನ್ನು ಲೀಲಾಜಾಲವಾಗಿ ಹೇಳುತ್ತಿದ್ದ ಅಪ್ಪಟ್ಟ ವೈಶಿಷ್ಟ್ಯಪೂರ್ಣವಾದ ಸಾಹಿತಿಗಳಾಗಿದ್ದರು ಎಂದು ಹೇಳಿದರು.

ಮುಖಂಡ ಎಸ್.ಜಿ. ಪಾಟೀಲ ಶೃಂಗಾರಗೌಡ ಮಾತನಾಡಿ, ಸರಳತೆಯ ವ್ಯಕ್ತಿತ್ವ ಹೊಂದಿದ್ದ ಎಲ್ಲರೊಂದಿಗೆ ನಗುಮೊಗದಿಂದಲೇ ಮಾತನಾಡುತ್ತಿದ್ದ ಮಲಕಣ್ಣ ಅವರನ್ನು ಎರಡನೇ ತಾಲೂಕು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡೋಣ ಎಂದಾಗ ಇಡೀ ತಾಲೂಕೇ ಸಂಭ್ರಮ ಪಟ್ಟಿತ್ತು. ಅಂತಹ ಧೀಮಂತ ಸಾಹಿತಿ ಮಲೀಕಸಾಬ ನದಾಫ ಅವರಾಗಿದ್ದರು. ಅವರ ಅಗಲಿಕೆಗೆ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅವರು ಹೇಳಿದರು.ಕಸಾಪ ಮಾಜಿ ಅಧ್ಯಕ್ಷ ಅಡಿವೆಪ್ಪ ಕಡಿ, ಶರಣ ಸೋಮನಾಳದ ಮಹದೇವಯ್ಯ ಶಾಸ್ತ್ರೀಗಳು, ಅಬ್ದುಲ ರಹೆಮಾನ ಬಿದರಕುಂದಿ, ಅಶೋಕ ಮಣಿ, ಎಸ್.ಎಸ್. ಕುಂಬಾರ, ಕೆ.ಬಿ. ಕೊಂಗಲ್, ಸಿ.ಎಸ್. ಹಿರೇಮಠ, ಎಸ್.ಬಿ. ಬಂಗಾರಿ, ಬಾಪುಗೌಡ ಪಾಟೀಲ, ಗೋವಿಂದಗೌಡ ಬೈಲಕೂರ, ಎಸ್.ಎಸ್. ಹೊಳಿ, ಎಸ್.ಕೆ. ಹರನಾಳ, ಆಲೂರಿನ ಸಂಗಯ್ಯ ಶಾಸ್ತ್ರೀಗಳು, ವೈ.ಎಚ್. ವಿಜಯಕರ್, ಮಲ್ಲಿಕಾರ್ಜುನ ಬಾಗೇವಾಡಿ ಮತ್ತಿತರರು ಇದ್ದರು.

ಜ್ಯಾತ್ಯಾತೀತ ಹಾಗೂ ಸರಳತೆಯ ವ್ಯಕ್ತಿತ್ವ ಮಲೀಕಸಾಬ ಅವರದ್ದು. ಅವರ ಅಗಲಿಕೆಗೆ ಕಸಾಪ ತಾಲೂಕಿನ ಘಟಕದಿಂದ ತೀವ್ರ ಸಂತಾಪ ವ್ಯಕ್ತಪಡಿಸುತ್ತೇವೆ. ಮುಂದಿನ ಸಮ್ಮೇಳನಾಧ್ಯಕ್ಷರಿಗೆ ಧ್ವಜ ಹಸ್ತಾಂತರ ಮಾಡಬೇಕಾಗಿರುವ ಕುರಿತಾದ ಮಾಹಿತಿಯನ್ನು ಹಿರಿಯ ಸಾಹಿತಿಗಳಿಂದ ಪಡೆದುಕೊಂಡು ಮುಂದುವರೆಯುತ್ತೇವೆ.
                                                                                                                                              – ಎಂ.ಬಿ. ನಾವದಗಿ, ಕಸಾಪ ತಾಲೂಕಾಧ್ಯಕ್ಷ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin