ಭಾಸ್ಕರ್‍ಶೆಟ್ಟಿ ಪ್ರಕರಣ : ಲ್ಯಾಂಡ್ರಿ ಬಟ್ಟೆಯಲ್ಲಿ ಕೊಲೆ ಸಾಕ್ಷ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

Bhaskarಉಡುಪಿ, ಆ.13- ತನ್ನ ಪತ್ನಿ, ಪುತ್ರ ಮತ್ತು ಕುಟುಂಬದ ಸ್ನೇಹಿತನಿಂದ ಅಮಾನುಷವಾಗಿ ಹತ್ಯೆಗೀಡಾದ ನಾಗರಿಕ ಸಮಾಜವೇ ಬೆಚ್ಚಿ ಬೀಳುವಂತಹ ಹೊಟೇಲ್ ಉದ್ಯಮಿ ಭಾಸ್ಕರ್‍ಶೆಟ್ಟಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಪೊಲೀಸರಿಗೆ ಮಹತ್ವದ ಸಾಕ್ಷಿ ಲಭ್ಯವಾಗಿದೆ. ತನಿಖೆ ವೇಳೆ ಭಾಸ್ಕರ್‍ಶೆಟ್ಟಿ ಪತ್ನಿ ರಾಜೇಶ್ವರಿ, ಸ್ನೇಹಿತ ನಿರಂಜನ್ ಭಟ್ ಅವರ ರಕ್ತಸಿಕ್ತ ಬಟ್ಟೆಗಳನ್ನು ಲಾಂಡ್ರಿಯೊಂದರಿಂದ ವಶಪಡಿಸಿಕೊಳ್ಳಲಾಗಿದೆ.   ಕೊಲೆ ಮಾಡಿದ ಸಂದರ್ಭದಲ್ಲಿ ಈ ಬಟ್ಟೆಗಳನ್ನು ಇವರು ಧರಿಸಿದ್ದು, ರಕ್ತಸಿಕ್ತವಾಗಿದ್ದ ಈ ಬಟ್ಟೆಗಳನ್ನು ತೊಳೆಯಲು ನಿಟ್ಟೆಯ ಲಾಂಡ್ರಿಯೊಂದಕ್ಕೆ ನೀಡಿದ್ದರು ಎಂಬುದು ವಿಚಾರಣೆ ಸಂದರ್ಭದಲ್ಲಿ ತಿಳಿದುಬಂದಿದೆ.
ಸದ್ಯ ಪೊಲೀಸರ ವಶದಲ್ಲಿರುವ ಆರೋಪಿಗಳಾದ ರಾಜೇಶ್ವರಿ, ನಿರಂಜನ್ ಭಟ್, ನವನೀತ್, ಶ್ರೀನಿವಾಸ್ ಭಟ್, ರಾಘವೇಂದ್ರ ಅವರಿಂದ ಕೊಲೆ ಬಗ್ಗೆ ಹೆಚ್ಚಿನ ವಿವರಗಳನ್ನು ಪೊಲೀಸರು ತಮ್ಮದೇ ಶೈಲಿಯಲ್ಲಿ ಬಾಯಿಬಿಡಿಸುತ್ತಿದ್ದಾರೆ.

ಕಗ್ಗಂಟಾಗಿದ್ದ ಪ್ರಕರಣದಲ್ಲಿ ದಿನೇ ದಿನೇ ಒಂದೊಂದೇ ಅಂಶ ಬೆಳಕಿಗೆ ಬರುತ್ತಿವೆ. ಎನ್‍ಆರ್‍ಐ ಉದ್ಯಮಿಯಾಗಿದ್ದ ಭಾಸ್ಕರ್‍ಶೆಟ್ಟಿ ಬರೋಬ್ಬರಿ 300 ಕೋಟಿ ಒಡೆಯ. ಈತನನ್ನು ಪತ್ನಿ, ಮಗ ಅಮಾನುಷವಾಗಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ತಲೆಗೆ ರಾಡಿನಿಂದ ಒಡೆದು ನಂತರ ನಿರಂಜನ್ ಭಟ್ ಅವರೊಂದಿಗೆ ಸೇರಿ ಹೋಮಕುಂಡದಲ್ಲಿ ಸುಟ್ಟು ಅವಶೇಷಗಳನ್ನು ಪಳ್ಳಿ ನದಿಯಲ್ಲಿ ಬಿಡಲಾಗಿದೆ.  ಪೊಲೀಸರ ತಪಾಸಣೆ ವೇಳೆ ಕೆಲವು ಮೂಳೆಗಳು ದೊರೆತಿದ್ದು, ಅವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಹೋಮಕುಂಡ ನಿರ್ಮಿಸಲು ಸಹಾಯ ಮಾಡಿದವರನ್ನು ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಹೈ ಪ್ರೊಫೈಲ್ ಕೇಸ್ ಆಗಿರುವುದರಿಂದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಹೆಚ್ಚಿನ ವಿಚಾರಣೆಗೆ ಮತ್ತೊಂದು ತಂಡ ರಚಿಸಿದ್ದಾರೆ. ನಿನ್ನೆ ಆರೋಪಿಗಳನ್ನು ವಿಚಾರಣೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಐಶಾರಾಮಿ ಹೊಟೇಲ್‍ನಲ್ಲಿ ಆರೋಪಿಗಳಿಗೆ ಆತಿಥ್ಯ ನೀಡಿದ್ದರು ಎಂದು ಕೇಳಿಬಂದಿತ್ತು. ಇದನ್ನು ಹಿರಿಯ ಪೊಲೀಸರು ತಳ್ಳಿಹಾಕಿದ್ದಾರೆ. ಊಟಕ್ಕೆಂದು ಹೊಟೇಲ್‍ಗೆ ಹೋಗಿದ್ದೆವು. ಅದನ್ನು ಹೊರತುಪಡಿಸಿ ಆರೋಪಿಗಳಿಗೆ ಯಾವುದೇ ಆತಿಥ್ಯ ನೀಡಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin