ಭೀಕರ ಅಪಘಾತ : ಲಗ್ನ ಪತ್ರಿಕೆ ಹಂಚಲು ಹೊರಟ ವರ ಸೇರಿ ನಾಲ್ವರು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident-4-Killed

ಹುಣಸೂರು, ಮಾ.26- ಲಗ್ನ ಪತ್ರಿಕೆ ಹಂಚಲು ಕಾರಿನಲ್ಲಿ ಸ್ನೇಹಿತರೊಂದಿಗೆ ತೆರಳುವಾಗ ಆಯತಪ್ಪಿ ಕಾರು ಪಲ್ಟಿಯಾದ ಪರಿಣಾಮ ವರ ಸೇರಿದಂತೆ ನಾಲ್ವರು ಮೃತಪಟ್ಟಿರುವ ದುರ್ಘಟನೆ ತಾಲೂಕಿನ ನಾಗರಹೊಳೆ ರಸ್ತೆಯ ನೆಲ್ಲೂರು ಪಾಲ ಗ್ರಾಮದ ಬಳಿ ಸಂಭವಿಸಿದೆ.  ಬೆಂಗಳೂರಿನ ಜೆಪಿ ನಗರ, ಹತ್ತಿಗುಪ್ಪೆ, ಎಲೆಕ್ಟ್ರಾನಿಕ್ ಸಿಟಿ, ಚಿಕ್ಕಪೇಟೆ ಸೇರಿದಂತೆ ವಿವಿಧ ಬಡಾವಣೆಗಳ ನಿವಾಸಿಗಳಾದ ಮದುಮಗ ರಂಜನ್ ಸಲಾಂಕೆ (35), ಮನೋಜ್ ರಾವ್ ಸ್ನೇಹಿತರಾದ ಎಂ.ಎಸ್.ಗೋರ್ಪಡೆ, ಕೌಶಿಕ್ ಚವ್ಹಾಣ್ (32) ಹಾಗೂ ಕಿಶೋರ್‍ಯಾದವ್ (25) ಮೃತ ದುರ್ದೈವಿಗಳು. ಯಶ್ವಂತ್ ಸಾಲಂಕೆ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಿಂದ ಪೋರ್ಡ್ ಎಂಡೋವರ್ ಕಾರಿನಲ್ಲಿ ತಾಲೂಕಿನ ರತ್ನಪುರಿ ಕಾಲೋನಿ ಬಳಿಯ ಚೌಡಿಕಟ್ಟೆ ಗ್ರಾಮದ ತಮ್ಮ ಜಮೀನಿಗೆ ಬಂದು ಹೊಸದಾಗಿ ಕೊರೆಸಿದ ಬೋರ್‍ವೆಲ್ ವೀಕ್ಷಿಸಿ ಕಾರು ಚಾಲಕನನ್ನು ಅಲ್ಲೇ ಬಿಟ್ಟು ಉಳಿದ ಎಂಟು ಮಂದಿ ಸ್ನೇಹಿತರು ತಮ್ಮ ಕಾರಿನಲ್ಲಿ ನಾಗರಹೊಳೆಗೆ ಹೋಗಿ ಬರುವುದಾಗಿ ಹೊರಟು ಚೌಡಿಕಟ್ಟೆಯಿಂದ ನಾಗರಹೊಳೆ ಮುಖ್ಯರಸ್ತೆಗೆ ಬಂದು ನೆಲ್ಲೂರು ಪಾಲದ ಬಳಿ ತಿರುವು ಪಡೆಯುವಾಗ ಎದುರಿನಿಂದ ಬಂದ ವಾಹನ ತಪ್ಪಿಸಲು ಹೋಗಿ ಆಯಾತಪ್ಪಿ ಕಾರು ಪಲ್ಟಿಯಾಗಿ ಬಿದ್ದು ಈ ದುರ್ಘಟನೆ ಸಂಭವಿಸಿದೆ.

ನತದೃಷ್ಟ ವರ:

ಮದುವೆ ಕಾರ್ಡ್ ಹಂಚಲು ಬಂದು ಇಹಲೋಕ ಸೇರಿದ ನತದೃಷ್ಟ ರಂಜನ್ ಸಾಲಂಕೆ ಮದುವೆ ಏ.30ರಂದು ನಿಶ್ಚಯವಾಗಿದ್ದು, ಕಾರು ಚಾಲಕ ಗ್ರಾಮದಲ್ಲೆ ಉಳಿದ ಕಾರಣ ಅದೃಷ್ಟವಷತ್ ಪಾರಾಗಿದ್ದಾನೆ.

ಕೈಚಳಕ ತೋರಿದ ಖದೀಮರು:

ಅಪಘಾತದಲ್ಲಿ ಮೃತಪಟ್ಟವರೆಲ್ಲ ಸ್ವಂತ ಉದ್ಯಮಗಳಲ್ಲಿ ತೊಡಗಿದ್ದು, ಚಿನ್ನಾಭರಣ ತೊಟ್ಟಿದ್ದು,ಅಪಘಾತ ಸಂದರ್ಭ ಸ್ಥಳದಲ್ಲೆ ಖದೀಮರು ಒಡವೆಗಳನ್ನು ಎಗರಿಸುವ ಮೂಲಕ ತಮ್ಮ ಕೈಚಳಕ ತೋರಿದ್ದಾರೆ ಎಂದು ಗಾಯಗೊಂಡ ಸ್ನೇಹಿತರು ಆರೋಪಿಸಿದ್ದಾರೆ.

ಅಪಘಾತ ಸ್ಥಳಕ್ಕೆ ಸಹಾಯಕ ಪೊಲೀಸ್ ಉಪ ಅಧೀಕ್ಷಕರಾದ ಕಲಾಕೃಷ್ಣಮೂರ್ತಿ, ಹರೀಶ್‍ಪಾಂಡೆ, ವೃತ್ತ ನಿರೀಕ್ಷಕ ಧರ್ಮೇಂದ್ರ, ಗ್ರಾಮಾಂತರ ಪಿಎಸ್‍ಐ ಪುಟ್ಟಸ್ವಾಮಿ, ನಗರ ಪಿಎಸ್‍ಐ. ಷಣ್ಮಗಂ ಭೇಟಿ ನೀಡಿದ್ದು, ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin