ಭೀಕರ ರಸ್ತೆ ಅಪಘಾತದಲ್ಲಿ ಕನ್ನಡದ ಕಿರುತೆರೆ ನಟ-ನಟಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident-Actress

ನೆಲಮಂಗಲ, ಆ. 24- ಗೌರಿ ಹಬ್ಬದ ಸಡಗರದಲ್ಲಿದ್ದ ನಾಡಿನ ಜನತೆಗೆ ಬರಸಿಡಿಲು ಬಡಿದಂತಾಗಿದೆ. ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಜಾಭಾರತ ಖ್ಯಾತಿಯ ಕಿರುತೆರೆ ನಟ ಜೀವನ್ ಹಾಗೂ ತ್ರಿವೇಣಿ ಸಂಗಮ ಸೀರಿಯಲ್ ಖ್ಯಾತಿಯ ರಚನಾ ದುರಂತ ಸಾವನ್ನಪ್ಪಿದ್ದಾರೆ.
ಸೋಲೂರು ವೃತ್ತದ ಸಮೀಪ ನಿಂತಿದ್ದ ಕ್ಯಾಂಟರ್‍ಗೆ ಕಿರುತೆರೆ ನಟ, ನಟಿ ಪ್ರಯಾಣಿಸುತ್ತಿದ್ದ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರು ಚಲಾಯಿಸುತ್ತಿದ್ದ ಜೀವನ್ ಹಾಗೂ ಪಕ್ಕದ ಸೀಟಿನಲ್ಲಿ ಕುಳಿತಿದ್ದ ರಚನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿಂಬದಿ ಸೀಟಿನಲ್ಲಿದ್ದ ರಂಜಿತ್, ಎರಿಕ್, ಉತ್ತಮ್, ಹೊನ್ನೇಶ್ ಮತ್ತು ಕಾರ್ತಿಕ್ ಅವರುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕುದೂರು ಸಬ್‍ಇನ್ಸ್‍ಪೆಕ್ಟರ್ ಶಂಕರ್‍ನಾಯಕ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

 

ಹೇಗಾಯ್ತು ಅಪಘಾತ..?

ಕಿರುತೆರೆ ನಟ ಕಾರ್ತಿಕ್ ಅವರ ಹುಟ್ಟುಹಬ್ಬ ಆಚರಿಸಲು ನಿನ್ನೆ ರಾತ್ರಿ 12.30ಕ್ಕೆ ಈ 7 ಮಂದಿ ನಟ, ನಟಿಯರು ಕುಕ್ಕೆಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದರು. ಅಪಘಾತದಲ್ಲ ಸಾವನ್ನಪ್ಪಿರುವ ಜೀವನ್ ಸ್ವತಹ ಕಾರು ಚಲಾಯಿಸುತ್ತಿದ್ದ. ಬೆಳಗಿನ ಜಾವ 2.30ರ ಸಮಯದಲ್ಲಿ ಸೋಲೂರು ವೃತ್ತದ ಸಮೀಪ ಕ್ಯಾಂಟರ್ ಚಾಲಕನೊಬ್ಬ ಮೂರ್ತವಿಸರ್ಜನೆ ಮಾಡಲು ರಸ್ತೆ ಬದಿ ವಾಹನ ನಿಲ್ಲಿಸಿದ್ದ. ಇದನ್ನು ಗಮನಿಸದ ಜೀವನ್ ವೇಗವಾಗಿ ನಿಂತಿದ್ದ ಕ್ಯಾಂಟರ್‍ಗೆ ಹಿಂದಿನಿಂದ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.

Accident--02

ಹಿನ್ನೆಲೆ:

ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಮಜಾಭಾರತ ಕಾಮಿಡಿ ಷೋನಲ್ಲಿ ಗಮನ ಸೆಳೆದಿದ್ದ ಜೀವನ್‍ಗೆ ಉದಯೋನ್ಮುಖ ನಟನಾಗುವ ಎಲ್ಲ ಲಕ್ಷಣಗಳಿದ್ದವು. ಈತನ ಅಭಿನಯಕ್ಕೆ ಮನ ಸೋತಿದ್ದ ಖ್ಯಾತ ನಿರ್ದೇಶಕ ಹಾಗೂ ಮಜಾಭಾರತದ ತೀರ್ಪುಗಾರ ಎಸ್.ನಾರಾಯಣ್ ಅವರು ತಮ್ಮ ಮುಂದಿನ ಚಿತ್ರದಲ್ಲಿ ಅವಕಾಶ ನೀಡುವ ಭರವಸೆ ನೀಡಿದ್ದರು. ಇಂತಹ ಮಹಾನ್ ಪ್ರತಿಭೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ಆಘಾತ ಉಂಟು ಮಾಡಿದೆ. ಇನ್ನೂ ರಚನಾ ಅವರು ತ್ರಿವೇಣಿಸಂಗಮ, ಮಹಾನದಿ, ಮಧುಬಾಲಾ ಕನ್ನಡ ಸೀರಿಯಲ್‍ಗಳೂ ಸೇರಿದಂತೆ ತೆಲುಗು ಧಾರಾವಾಹಿಯಲ್ಲೂ ನಟಿಸಿ ಗಮನ ಸೆಳೆದಿದ್ದರು.

ಇಂದು ಬೆಳಗ್ಗೆ ತೆಲುಗು ಧಾರಾವಾಹಿಯ ಷೂಟಿಂಗ್‍ನಲ್ಲಿ ರಚನಾ ಪಾಲ್ಗೊಳ್ಳಬೇಕಿದ್ದ ಹಿನ್ನೆಲೆಯಲ್ಲಿ ಸ್ನೇಹಿತ ಕಾರ್ತಿಕ್ ಅವರ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲು ರಾತ್ರಿಯೇ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ಬೆಳಕು ಹರಿಯುವುದರೊಳಗೆ ಮತ್ತೆ ಬೆಂಗಳೂರಿಗೆ ಆಗಮಿಸಿ ಹೈದರಾಬಾದ್‍ಗೆ ತೆರಳಲು ನಿರ್ಧರಿಸಿ ರಾತ್ರಿ ಪ್ರಯಾಣ ಬೆಳೆಸಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಕುಕ್ಕೆಸುಬ್ರಹ್ಮಣ್ಯಕ್ಕೆ ತೆರಳುವ ಮಾರ್ಗ ಮಧ್ಯದಲ್ಲೇ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ.

Accident--03

ದಿಗ್ಭ್ರಮೆ:
ಇಬ್ಬರು ಉದಯೋನ್ಮುಖ ಕಲಾವಿದರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದಕ್ಕೆ ಕನ್ನಡ ಕಿರುತೆರೆ ಕಲಾವಿದರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ಹುಟ್ಟು ಕಲಾವಿದರಾಗಿದ್ದು ಅವರ ಸಾವು ನಮಗೆ ಅಗಾಧ ನೋವು ತಂದಿದೆ ಅವರ ಕುಟುಂಬ ವರ್ಗದವರಿಗೆ ನಿಧನದ ದುಃಖ ಭರಿಸಲು ದೇವರು ಶಕ್ತಿ ಕೊಡಲಿ ಎಂದು ಕಲಾವಿದರಾದ ಎಸ್.ನಾರಾಯಣ್, ನಿರಂಜನ್, ಶ್ರುತಿ, ಶೀತಲ್‍ಶೆಟ್ಟಿ ಮತ್ತಿತರರು ಕಂಬನಿ ಮಿಡಿದಿದ್ದಾರೆ.

Accident--01

ರಾತ್ರಿ ಪ್ರಯಾಣ ಬೇಡ:
ತಮ್ಮ ದೈನಂದಿನ ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಬಹುತೇಕ ಮಂದಿ ರಾತ್ರಿ ವೇಳೆ ಪ್ರಯಾಣ ಬೆಳೆಸುವುದು ವಾಡಿಕೆ. ಆದರೆ ಬಹುಪಾಲು ಅಪಘಾತ ಸಂಭವಿಸಿರುವುದು ರಾತ್ರಿ ವೇಳೆ ಎನ್ನುವುದು ಮಾತ್ರ ಅಷ್ಟೇ ಸತ್ಯ. ಈಗಾಗಲೇ ಕರಾಟೆ ಕಿಂಗ್ ಶಂಕರ್‍ನಾಗ್, ಚಾಕ್‍ಲೇಟ್ ಬಾಯ್ ಸುನೀಲ್ ಅವರು ಮೃತಪಟ್ಟಿರುವುದು ರಾತ್ರಿ ವೇಳೆಯ ಪಯಣದಲ್ಲಿ ಎಂಬುದು ಉಲ್ಲೇಖಾರ್ಹ.

ಇದೀಗ ಕನ್ನಡದ ಮತ್ತಿಬ್ಬರು ಉದಯೋನ್ಮುಖ ಕಲಾವಿದರು ರಾತ್ರಿ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ದುರ್ದೈವವೇ ಸರಿ.
ಇನ್ನು ಮುಂದಾದರೂ ತಮ್ಮ ಎಂತಹ ಕೆಲಸದ ಒತ್ತಡವಿದ್ದರೂ ಬಿಡುವು ಮಾಡಿಕೊಂಡು ಹಗಲಿನಲ್ಲೇ ಪ್ರಯಾಣ ಮಾಡುವುದು ಒಳಿತು. ರಾತ್ರಿ 10 ಗಂಟೆ ನಂತರ ಯಾವುದೇ ಕಾರಣಕ್ಕೂ ಪ್ರಯಾಣ ಮಾಡಬಾರದೆಂಬುದೇ ಎಲ್ಲರ ಕಳಕಳಿಯಾಗಿದೆ.

 

Facebook Comments

Sri Raghav

Admin