ಭೀಮನ ಅಮವಾಸೆ ವ್ರತ ದ ಮಹತ್ವ

ಈ ಸುದ್ದಿಯನ್ನು ಶೇರ್ ಮಾಡಿ

a4c7be95b8dc920f665b688538d554ad_Mಪತ್ನಿ ತನ್ನ ಪತಿಗೆ ಆಯಸ್ಸು ಆರೋಗ್ಯ, ಅಭಿವೃದ್ಧಿ ಹಾಗೂ ದೀರ್ಘಕಾಲ ಸುಮಂಗಲಿಯಾಗಿರುವಂತೆ  ಬೇಡುವ ಹಬ್ಬವೇ ಭೀಮನ ಅಮವಾಸ್ಯೆ, ಅವಿವಾಹಿತ ಹೆಣ್ಣು ಮಕ್ಕಳು ತಮಗೆ ಭೀಮನಂತೆ ಇರುವ ಗಂಡ ಸಿಗಲೆಂದು ಶಿವನನ್ನು ಪೂಜಿಸುವುದು ವಾಡಿಕೆ. ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲವಾದರೂ, ಆಷಾಢದ ಅಮಾವಾಸ್ಯೆಯಂದು ಜ್ಯೋತಿರ್ಭೀಮೇಶ್ವರ ವ್ರತ ಅಂದರೆ ಪತಿ ಸಂಜೀವಿನಿ ವ್ರತ ಎಂದೂ ಕೂಡ ಕರೆಯುತ್ತಾರೆ. ಆದರೆ, ಭೀಮನ ಅಮಾವಾಸ್ಯೆ ಎಲ್ಲೆಡೆ ಜನಪ್ರಿಯವಾಗಿದೆ.  ಒಮ್ಮೆ ವ್ರತ ಕೈಗೊಂಡರೆ ಐದು, ಒಂಭತ್ತು ಅಥವಾ ಹದಿನಾರು ವರ್ಷ ಉದ್ಯಾಪನೆ ಮಾಡಿ ಎಲ್ಲರಿಗೂ ಸಿಹಿಯೂಟ ಹಾಕಿಸಬೇಕು ಎಂದು ಹಿಂದೂ ಪುರಾಣಗಳು ಹೇಳುತ್ತವೆ.

ಭೀಮನ ಅಮಾವಾಸ್ಯೆ ಹಿನ್ನೆಲೆ:ಆಸೆ ಬುರುಕ ಬ್ರಾಹ್ಮಣನೊಬ್ಬ ರಾಜಕುಮಾರನ ಶವದೊಂದಿಗೆ ತನ್ನ ಮಗಳ ಮದುವೆ ಮಾಡಿದಾಗ ಸುರಿಯುತ್ತಿದ್ದ ಮಳೆಯಲ್ಲಿ ಶವ ಹಾಗೂ ವಧುವನ್ನೂ ರಾಜ ಪರಿವಾವರದವರೂ ನದಿ ತೀರದಲ್ಲಿ ಬಿಟ್ಟು ಹೋಗುತ್ತಾರೆ. ಶವದ ಮುಂದೆ ಕುಳಿತು ರೋಧಿಸುತ್ತಿದ್ದ ಆ ಶಿವಭಕ್ತೆಯಾಗಿದ್ದ ಆ ವಧು, ಮರಳಿನಲ್ಲಿ ಶಿವಲಿಂಗ ಮಾಡಿ ಪೂಜಿಸಿದಾಗ ಭಕ್ತಿಗೆ ಮೆಚ್ಚಿ ಶಿವಪಾರ್ವತಿಯರು ಪ್ರತ್ಯಕ್ಷರಾಗಿ ರಾಜಕುಮಾರನಿಗೆ ಜೀವದಾನ ನೀಡುತ್ತಾರೆ. ಅಮವಾಸ್ಯೆಯ ದಿನ ಪತಿಯ ಜೀವಕ್ಕಾಗಿ ನಡೆಸಿದ ಪೂಜೆ ನಂತರ ಜ್ಯೋತಿರ್ಭಿಮೇಶ್ವರ ವ್ರತ ಎಂದೇ ಖ್ಯಾತವಾಯಿತು.

ಈ ಬಗ್ಗೆ ಇನ್ನೊಂದು ಕಥೆಯೂಇದೆ. ಕುಂಡಿನಿ ಪಟ್ಟಣದಲ್ಲಿ ಪತಿಭಕ್ತಳೂ, ಶಾಸ್ತ್ರಜ್ಞಳೂ, ನಿರ್ಮಲ ಮನದವಳೂ ಆದ ಚಾರುಮತಿ ಎಂಬ ಸಾಧ್ವಿಗೆ ಮಹಾಲಕ್ಷ್ಮಿ ಕನಸಿನಲ್ಲಿ ಕಾಣಿಸಿಕೊಂಡು ತನ್ನನ್ನು ನಿರ್ದಿಷ್ಟ ರೀತಿಯಲ್ಲಿ ಪೂಜಿಸಲು ತಿಳಿಸುತ್ತಾಳೆ.   ಅದರಂತೆ ಚಾರುಮತಿ ಮಂಗಳಸ್ನಾನ ಮಾಡಿ, ಅಕ್ಕಿಯಿಂದ ಪರಿವೃತವಾದ ಕಲಶದಲ್ಲಿ ವರಲಕ್ಷ್ಮಿಯನ್ನು ಆವಾಹನೆ ಮಾಡಿ, ಸಂಧ್ಯಾಕಾಲದಲ್ಲಿ ಅರ್ಚಿಸಿ, ಬಲಗೈಗೆ ದಾರ ಕಟ್ಟಿಕೊಂಡು ತುಪ್ಪದಿಂದ ಮಾಡಿದ ಭಕ್ಷ್ಯಗಳನ್ನು ಬ್ರಾಹ್ಮಣರಿಗೆ ನಿವೇದಿಸಿ, ಸುಹಾಸಿನಿಯರಿಗೆ ದಕ್ಷಿಣೆ ಸಹಿತ ತಾಂಬೂಲ ನೀಡಿ ವ್ರತ ಆಚರಿಸುತ್ತಾಳೆ.

ಇದರ ಫಲವಾಗಿ ಸಕಲ ಸೌಭಾಗ್ಯ ಪಡೆದಳು ಎಂದು ಹೇಳಲಾಗುತ್ತದೆ. ಹಾಗಾಗಿ ಭೀಮನ ಅಮಾವಾಸ್ಯೆಯ ದಿನ ಹೆಣ್ಣು ಮಕ್ಕಳು ಮತ್ತು ಸುಮಂಗಲಿಯರು ಮಂಗಳಸ್ನಾನ ಮಾಡಿ, ಮಂಟಪ ನಿರ್ಮಿಸಿ, ಗೋಧಿಹಿಟ್ಟಿನಿಂದ ಮಾಡಿದ ಭಕ್ಷ್ಯವನ್ನು ನೈವೇದ್ಯ ಮಾಡಿ ಈಶ್ವರನನ್ನು ಆರಾಧಿಸುತ್ತಾರೆ.

ಪೂಜಾ ವಿಧಾನ:

ಈ ವ್ರತವನ್ನು ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ದಿನ ಹೆಣ್ಣು ಮಕ್ಕಳು ಮದುವೆಯಾದ ನಂತರ ಒಂಭತ್ತು ವರ್ಷ ಈ ವ್ರತ ಮಾಡುವ ಪದ್ಧತಿ ಇದೆ. ಒಂದು ತಟ್ಟೆಯಲ್ಲಿ ಧಾನ್ಯ ರಾಶಿ ಹಾಕಿ , ಅದರ ಮೇಲೆ 2 ದೀಪದ ಕಂಭ ಇಡಬೇಕು. ತುಪ್ಪ ಹಾಕಿ ದೀಪ ಹಚ್ಚಬೇಕು . ಈ ದೀಪಸ್ತಂಭದಲ್ಲಿ ಈಶ್ವರ ಪಾರ್ವತಿಯನ್ನು ಆವಾಹನೆ ಮಾಡಿ ಪೂಜೆ ಮಾಡಬೇಕು.  ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, 9 ಗಂಟಿನ ಗೌರಿ ದಾರ ಇಟ್ಟು ಪೂಜೆ ಸಲ್ಲಿಸಿ ನಂತರ ಕೈಗೆದಾರ ಕಟ್ಟಿಕೊಳ್ಳಬೇಕು. ಮೊದಲು ಗಣಪತಿ ಪೂಜೆ ಮಾಡಿ ನಂತರ ಭೀಮೆಶ್ವರನ ಪೂಜೆ ಮಾಡಬೇಕು. ಜೊತೆಗೆ ಗಣೇಶ ಅಷ್ಟೋತ್ತರ, ಶಿವ ಅಷ್ಟೋತ್ತರ ಗಳನ್ನು ಹೇಳಿಕೊಂಡು ಪೂಜೆ ಮಾಡಬೇಕು.  ಹೀಗೆ ಪ್ರತಿ ವರ್ಷ ಪೂಜೆ ಮಾಡುವುದರಿಂದ ಮನೆಯಲ್ಲಿ ಸುಖ, ಸಂತೋಷ ನೆಮ್ಮದಿ ದೊರೆತು ಆಯುಷ್ಯ, ಆರೋಗ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

http://eesanje.epapr.in/t/13884

Facebook Comments