ಭುವಿಯ ಮೇಲಿನ ಸ್ವರ್ಗ ಸೈಕ್ಸ ಪಾಯಿಂಟ್

ಈ ಸುದ್ದಿಯನ್ನು ಶೇರ್ ಮಾಡಿ

3
ಸಾಮಾನ್ಯವಾಗಿ ಬೇಸಿಗೆ ಕಾಲ ಬಂತೆಂದರೆ ಮನೆ ಮಂದಿಯೆಲ್ಲ ಪ್ರವಾಸ ಹೋಗುವುದು ವಾಡಿಕೆ. ಆದರೆ, ಸುಡು ಸುಡು ಬಿಸಿಲಿನ ಝಳದಲ್ಲಿ ಮನೆಯಿಂದ ಹೊರಗೆ ಬರುವುದೇ ಅಸಾಧ್ಯ. ಅಂಥದ್ದರಲ್ಲಿ ಪ್ರವಾಸ ಹೋಗುವುದು ಎಲ್ಲಿಂದ ಎಂದುಕೊಳ್ಳುವವರೇ ಹೆಚ್ಚು.ಆದರೆ, ಇನ್ನೂ ಕೆಲವರು ಬೇಸಿಗೆಯಿಂದ ತಪ್ಪಿಸಿಕೊಳ್ಳಲು ತಂಪಾದ ಪ್ರವಾಸ ತಾಣಗಳಿಗೆ ಹೋಗುವ ಲೆಕ್ಕಾಚಾರದಲ್ಲಿರುತ್ತಾರೆ. ಅಂತಹವರಿಗೆ ಸುಂದರ ಭೂಲೋಕವೊಂದು ಸೃಷ್ಟಿಯಾಗಿದೆ.ಈ ಭೂಲೋಕವಿರುವುದು ಬೇರೆ ರಾಜ್ಯದಲ್ಲಲ್ಲ. ಇದು ಇರುವುದು ನಮ್ಮ ಕರ್ನಾಟಕದಲ್ಲೇ ಎಂಬುದು ಸೋಜಿಗ.ಉತ್ತರ ಕನ್ನಡ ಜಿಲ್ಲೆ ಎಂದರೆ ಬಿಸಿಲಿಗೆ ಹೆಸರುವಾಸಿ. ಆದರೆ, ಇಂತಹ ನಾಡಿನಲ್ಲಿ ದಾಂಡೇಲಿ ಎಂಬ ಭೂಲೋಕ ಸ್ವರ್ಗವೊಂದಿದೆ. ಇಲ್ಲಿ ಸದಾ ಹಸಿರಿನಿಂದ ಕೂಡಿರುವ ಈ ಸ್ವರ್ಗ ದಾಂಡೇಲಿ ಸಮೀಪ ಅಂಬಿಕಾನಗರದಲ್ಲಿರುವ ಸೈಕ್ಸ ಪಾಯಿಂಟ್ ನಿಜಕ್ಕೂ ಅದ್ಭುತ ರಮಣೀಯ ಪ್ರವಾಸಿ ತಾಣವಾಗಿದ್ದು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.
ಕರ್ನಾಟಕದ ಪಶ್ಚಿಮ ಘಟ್ಟಗಳು ಜಾಗತಿಕ ಮಟ್ಟದಲ್ಲಿ ಅಮೂಲ್ಯವಾದ ಅಪರೂಪದ ವನ್ಯಜೀವಿಗಳ ತಾಣಗಳಾಗಿವೆ. ಅದರಲ್ಲಿ ಸೈಕ್ಸ ಪಾಯಿಂಟ್ ಕೂಡ ಒಂದಾಗಿದೆ. ಅಲ್ಲಲ್ಲಿ ವನಪಾಲಕರ ಅರಣ್ಯ ಇಲಾಖೆಯ ರಕ್ಷಣಾ ಗೇಟ್ ಅಣಶಿ, ದಾಂಡೇಲಿ, ಕುಂಬಾರವಾಡ, ಪನಸೋಲಿ ಹೀಗೆ ಎಲ್ಲ ಮಾರ್ಗಗಳಲ್ಲಿಯೂ ತಪಾಸಣಾ ಚೌಕಿಗಳಿಂದ ನಿರ್ಬಂಧಿತ ಪ್ರದೇಶವಾಗಿ ಈ ಸ್ಥಳಗಳು ರಕ್ಷಣೆಯ ಮೂಲಕ ಪರಿಸರ ಜಾಗೃತಿಯಲ್ಲಿ ತೊಡಗಿವೆ.ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಕಾಳಿ ಜಲ ವಿದ್ಯುತ್ ಯೋಜನೆಯ ಅಂಬಿಕಾನಗರದಿಂದ 6.5ಕಿಮೀ ಅಂತರದಲ್ಲಿ ಸೈಕ್ಸ ಪಾಯಿಂಟ್ ಇದೆ. ಒಂದೆಡೆ 6 ಕಿಮೀ ಅಂತರದಲ್ಲಿ ನಾಗಝರಿ ವಿದ್ಯುದಾಗರ, ಮತ್ತೊಂದೆಡೆ 8.5ಕಿಮೀ ಅಂತರದಲ್ಲಿ ಬೊಮ್ಮನಹಳ್ಳಿ ಅಣೆಕಟ್ಟು ಹೀಗೆ ಅಂಬಿಕಾನಗರದ ತಿರುವಿನ ರಸ್ತೆಯ ಮೂಲಕ ಚಲಿಸಬಹುದಾದ ಸ್ಥಳಗಳಿವೆ. ಇದೊಂದು ನಿರ್ಬಂಧಿತ ಪ್ರದೇಶವಾಗಿದ್ದು, ಇಲ್ಲಿ ಸೂರ್ಯಾಸ್ತ ಮತ್ತು ಸೂರ್ಯೋದಯ ನೋಡುವುದೇ ಒಂದು ವಿಸ್ಮಯ.
ಸೈಕ್ಸ ಎಂಬ ಬ್ರಿಟಿಷ್ ಎಂಜಿನಿಯರ್ ಶೋಧಿಸಿದ ಈ ಸ್ಥಳ ಅವನ ಹೆಸರಿನಿಂದಲೇ ಕರೆಯಲ್ಪಟ್ಟಿದೆ. ಸ್ನೇಹಿತ ಮಂಜುನಾಥ ಕಮ್ಮಾರ ಅವರ ಮಾವನವರಾದ ಬಿ.ವೈ.ಕಮ್ಮಾರ ಅವರು ಕೆಪಿಸಿ ಆಫೀಸ್‍ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿ ಹಳಿಯಾಳದಲ್ಲಿ ವಾಸವಿದ್ದ ಕಾರಣ ಒಮ್ಮೆಯಾದರೂ ನಾಗಝರಿ ವಿದ್ಯುದಾಗರ ಮತ್ತು ಸೈಕ್ಸ ಪಾಯಿಂಟ್ ನೋಡೋಣ ಎಂಬುದು ಸ್ನೇಹಿತ ಮಂಜುನಾಥನ ಆಸೆಯಾಗಿತ್ತು. ಪ್ರತಿ ವರ್ಷ ವಿಜಯದಶಮಿ ದಿನ ಮಾತ್ರ ನಾಗಝರಿಗೆ ಪೂಜೆಯ ನಿಮಿತ್ತ ಅಲ್ಲಿನ ಸಿಬ್ಬಂದಿ ಕೆಲವು ಜನರಿಗೆ ಮಾತ್ರ ಅನುಮತಿ ಎನ್ನುವ ಕಾರಣ ನಾವು ಅಲ್ಲಿಗೆ ಹೋದೆವು. ನಿಜಕ್ಕೂ ಇದು ಅದ್ಬುತ ತಾಣ. ಒಂದೆಡೆ ವನ್ಯ ಮೃಗಗಳು ದಟ್ಟವಾದ ಕಾಡು. ಇಲ್ಲಿನ ಅಪರಿಮಿತ ಪ್ರಕೃತಿ ಸೌಂದರ್ಯವನ್ನು ಮತ್ತೆ ಮತ್ತೆ ನೋಡಬೇಕೆನ್ನುವಂತೆ ಬೆಳೆದು ನಿಂತ ಹಸಿರುಟ್ಟ ಅರಣ್ಯರಾಶಿ. ಇಕ್ಕಟ್ಟಾದ ರಸ್ತೆ ಫೋಟೋ ತೆಗೆಯಲು ಕೂಡ ಅನುಮತಿ ನಿರಾಕರಿಸಿರುವ ಸೂಚನ ಫಲಕಗಳು, ನಿಜಕ್ಕೂ ಇಂತಹ ತಾಣ ಅನುಮತಿ ಪಡೆದು ನೋಡುವುದೇ ಒಂದು ಭಾಗ್ಯ.

ಸೈಕ್ಸ ಪಾಯಿಂಟ್ ಸುತ್ತಲೂ ಬೆಟ್ಟಗಳ ಸಾಲು ಸಾಲು. ಅದರಲ್ಲಿನ ಗಿಡ-ಮರಗಳು ಮೋಡ ಆ ಗಿಡಗಳಿಗೆ ತಾಗಿದಂತೆ ಕಾಣುವ ನಯನ ಮನೋಹರ ದೃಶ್ಯ ಕಾವ್ಯ, ಕೆಳಗೆ ಭೋರ್ಗರೆವ ಕಾಳಿನದಿ ಹಾಗೂ ನಾಗಝರಿ ವಿದ್ಯುದಾಗರ.ಇಳಿಜಾರಿನ ರಸ್ತೆಯಲ್ಲಿ ನಡೆಯುತ್ತ ಸುತ್ತಲೂ ಕಣ್ಣು ಹಾಯಿಸ ತೊಡಗಿದರೆ ಸಾಕು , ಅಬ್ಬಾ… ಎನ್ನುವಂತೆ ಮೋಡಗಳು. ಬೆಟ್ಟಕ್ಕೆ ಮುತ್ತಿಕ್ಕುವ ದೃಶ್ಯ ಕಣ್ಣು ಕೋರೈಸತೊಡಗುತ್ತದೆ. ಅಲ್ಲಲ್ಲಿ ನಿರ್ಮಿಸಿರುವ ಸೂರ್ಯಾಸ್ತ, ಸೂರ್ಯೋದಯ ವೀಕ್ಷಿಸುವ ಪಾಯಿಂಟ್‍ಗಳು ಅವುಗಳಲ್ಲಿ ನಿಂತು ನೋಡತೊಡಗಿದರೆ ತಗ್ಗು ಪ್ರದೇಶದಲ್ಲಿ ಕಾಣುವ ಕಾಳಿ ಮತ್ತು ನಾಗಝರಿ ನದಿಯ ವಿಹಂಗಮ ನೋಟ ರಮ್ಯವಾಗಿದೆ.ಒಂದೆಡೆ ಬೊಮ್ಮನಹಳ್ಳಿ ಅಣೆಕಟ್ಟು, ಮತ್ತೊಂದೆಡೆ ತಟ್ಟೀಹಳ್ಳಿ ಅಣೆಕಟ್ಟು. ಸೂಪಾ ಅಣೆಕಟ್ಟಿನ ನದಿ ಪಾತ್ರದಿಂದ 35ಕಿಮೀ ಅಂತರದಲ್ಲಿ ಬೊಮ್ಮನಹಳ್ಳಿ ಅಣೆಕಟ್ಟು ಇದೆ. ಬೊಮ್ಮನಹಳ್ಳಿಯಿಂದ ಮುಂದೆ ಕಾಳಿ ನದಿಯನ್ನು ಅದರ ಉಪನದಿಗಳಾದ ತಟ್ಟೀಹಳ್ಳಿ ಮತ್ತು ನಾಗಝರಿಗಳು ಸೇರಿಕೊಳ್ಳುತ್ತವೆ.
ಕಾಳಿನದಿ ಪಾತ್ರದ ಭೌಗೋಳಿಕ ರಚನೆ ಹೇಗಿದೆಯೆಂದರೆ ಬೊಮ್ಮನಹಳ್ಳಿಯ ಬಳಿಕ ಕೇವಲ 15ಕಿಮೀ ಕ್ರಮಿಸುವಷ್ಟರಲ್ಲಿ ಕಾಳಿ 960ಅಡಿಗಳಷ್ಟು ಆಳಕ್ಕೆ ಹರಿಯುತ್ತಾಳೆ. ಈ ಪ್ರಾಕೃತಿಕ ಇಳಿಜಾರಿನ ಪ್ರದೇಶದಲ್ಲಿ ನಾಗಝರಿ ವಿದ್ಯುದಾಗರ ನಿರ್ಮಾಣಗೊಂಡಿದೆ. ಇಲ್ಲಿನ ಸುತ್ತಲಿನ ಬೆಟ್ಟ-ಗುಡ್ಡ ಕಣಿವೆಗಳು ಸೈಕ್ಸ ಪಾಯಿಂಟ್ ಮೂಲಕ ಕಣ್ಮನ ಸೆಳೆಯುತ್ತವೆ.
ಬ್ರಿಟಿಷ್ ಎಂಜಿನಿಯರ್ ಸೈಕ್ಸ ನಾಗಝರಿ ವಿದ್ಯುದಾಗರ ಪ್ರದೇಶ ನೋಡುತ್ತ ಈ ಬೆಟ್ಟದ ಮೇಲೆ ಬಂದು ವಿಶ್ರಮಿಸಿಕೊಳ್ಳುತ್ತಲೇ ಇದೊಂದು ಅದ್ಬುತ ರಮ್ಯತಾಣ ಎಂದೆನಿಸಿತು.
ಇಲ್ಲಿಂದ ತಳುಕು-ಬಳುಕಿನೊಂದಿಗೆ ಹರಿಯುವ ಕಾಳಿ ಕಣಿವೆಯ ರಮಣೀಯತೆ ಶಬ್ದಗಳಲ್ಲಿ ವರ್ಣಿಸುವುದು ಕಷ್ಟಸಾಧ್ಯ. ಸೈಕ್ಸ ಪಾಯಿಂಟ್ ದಾಂಡೇಲಿಯಿಂದ 18ಕಿಮೀ ಇದೆ. ಇಲಿಗೆ ಹತ್ತಿರದ ವಿಮಾನ ನಿಲ್ದಾಣಗಳೆಂದರೆ ಹುಬ್ಬಳ್ಳಿ. ಇನ್ನು ರೈಲು ನಿಲ್ದಾಣಗಳೆಂದರೆ ಅಳ್ನಾವರ, ಹುಬ್ಬಳ್ಳಿ, ಧಾರವಾಡ. ಇಲ್ಲಿಗೆ ಬರಬೇಕಾದರೆ ಅಂಬಿಕಾನಗರದವರೆಗೂ ವಾಹನ ಸೌಕರ್ಯವಿದೆ. ನಂತರ ಇಲಾಖೆ ವಾಹನಗಳು ಮತ್ತು ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶವಿದೆ. ಆದರೆ, ಈ ಪ್ರದೇಶಕ್ಕೆ ಬರಬೇಕೆಂದರೆ ಕಡ್ಡಾಯವಾಗಿ ಅನುಮತಿ ಅಗತ್ಯ. ಅನುಮತಿ ಪಡೆದು ಬಂದಲ್ಲಿ ನಿಜಕ್ಕೂ ಭುವಿಯ ಮೇಲಿನ ಸ್ವರ್ಗವನ್ನು ಅನುಭವಿಸಿದಷ್ಟೇ ಸಂತಸವಾಗುತ್ತದೆ. ಇಲ್ಲಿ ವರ್ಷದ ಯಾವುದೇ ಸಮಯದಲ್ಲಿ ಬಂದರೂ ಕೂಡ ಹಸಿರಿನ ಪ್ರಕೃತಿಯ ಮಡಿಲು ಮನಸೆಳೆಯುವುದರಲ್ಲಿ ಸಂದೇಹವಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin