ಬೂದಿ ಮುಚ್ಚಿದ ಕೆಂಡದಂತಿವೆ ಹುಣಸೂರು, ಚಿಕ್ಕಮಗಳೂರು

ಈ ಸುದ್ದಿಯನ್ನು ಶೇರ್ ಮಾಡಿ

Hunasuru--02

ಹುಣಸೂರು/ಚಿಕ್ಕಮಗಳೂರು, ಡಿ.4- ಹನುಮ ಜಯಂತಿ ವೇಳೆ ಉಂಟಾದ ಘರ್ಷಣೆಯಿಂದಾಗಿ ಪೊಲೀಸರ ಲಘುಲಾಠಿ ಪ್ರಹಾರ ಹಾಗೂ ದತ್ತಜಯಂತಿ ಸಂದರ್ಭದಲ್ಲಿ ನಡೆದ ಗಲಾಟೆ ಪ್ರಕರಣದಿಂದ ಪ್ರಕ್ಷುಬ್ಧಗೊಂಡಿದ್ದ ಹುಣಸೂರು, ಚಿಕ್ಕಮಗಳೂರು ಶಾಂತವಾಗಿದ್ದರೂ ಪರಿಸ್ಥಿತಿ ಭೂದಿ ಮುಚ್ಚಿದ ಕೆಂಡದಂತಿದೆ. ಹುಣಸೂರು ಮತ್ತು ಚಿಕ್ಕಮಗಳೂರು ಎರಡೂ ಕಡೆ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ. ಹನುಮಜಯಂತಿ ಹಿನ್ನೆಲೆಯಲ್ಲಿ ನಿಷೇಧಿತ ಸ್ಥಳದಲ್ಲಿ ಮೆರವಣಿಗೆ ಕೊಂಡೊಯ್ಯಲು ಮುಂದಾದ ಹನುಮ ಭಕ್ತರನ್ನು ಪೊಲೀಸರು ಹುಣಸೂರಿನಲ್ಲಿ ಬಂಧಿಸಿದ್ದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸಂಸದ ಪ್ರತಾಪ್‍ಸಿಂಹ ಅವರು ಪೊಲೀಸರ ನಿಯಮ ಉಲ್ಲಂಘಿಸಿ ಬ್ಯಾರಿಕೇಡ್ ಮೇಲೆಯೇ ತಮ್ಮ ಕಾರು ಚಲಾಯಿಸಿಕೊಂಡು ಹೋಗಿದ್ದಕ್ಕೆ ನಿನ್ನೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದನ್ನು ಖಂಡಿಸಿ ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು ಇಂದು ಹುಣಸೂರು ಬಂದ್‍ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ 5ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಇಂದು ಬೆಳಗ್ಗೆ ಬಿಜೆಪಿ ಪಕ್ಷ ಕರೆಕೊಟ್ಟಿದ್ದ ಬಂದ್‍ನ್ನು ವಾಪಸ್ ಪಡೆದಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ ಈ ಬಗ್ಗೆ ಸ್ಪಷ್ಟನೆ ನೀಡಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಬಂದ್ ವಾಪಸ್ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಕಳೆದ 23 ವರ್ಷಗಳಿಂದ ಹನುಮ ಜಯಂತಿ ನಡೆಸಿಕೊಂಡು ಬರಲಾಗುತ್ತಿದೆ. ನಿನ್ನೆ ಸರ್ಕಾರ ಮೆರವಣಿಗೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಭಕ್ತರು ಪ್ರತಿಭಟಿಸಿದಾಗ ಮಾತಿನ ಚಕಮಕಿ ನಡೆದಿದೆ. ಮಧ್ಯಪ್ರವೇಶಿಸಿದ ಸಂಸದರನ್ನು ಬಂಧಿಸಿದ್ದಾರೆ. ಸರ್ಕಾರ ಈ ರೀತಿ ವರ್ತಿಸಬಾರದಿತ್ತು ಎಂದು ಅವರು ಹೇಳಿದ್ದಾರೆ.

ಮೆರವಣಿಗೆಗೆ ಅವಕಾಶ ನೀಡದ ಕಾರಣ ಆಂಜನೇಯನ ಮೂರ್ತಿಯನ್ನು ಅಧಿಕಾರಿಗಳೇ ದೇವಸ್ಥಾನಕ್ಕೆ ತಂದಿಟ್ಟರು. ಮೆರವಣಿಗೆ ಬದಲು ಪ್ರತಿಭಟನೆ ನಡÉಸಲಾಯಿತು. ಮೈದಾನದಲ್ಲಿ ವಿಗ್ರಹ ಇಡಬೇಕೆಂದು ಭಕ್ತರು ಪಟ್ಟು ಹಿಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಬಿ.ಚನ್ನಣ್ಣನವರ್ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಿದ್ದರು.

ಚಿಕ್ಕಮಗಳೂರು ವರದಿ:

ಇತ್ತ ನಿನ್ನೆ ಚಿಕ್ಕಮಗಳೂರಿನಲ್ಲಿ ನಡೆದ ದತ್ತ ಜಯಂತಿ ವೇಳೆ ಗೋರಿಗಳಿಗೆ ಹಾನಿಯಾಗಿದೆ ಎಂಬ ಕಾರಣಕ್ಕೆ ನಗರಕ್ಕೆ ಬರುತ್ತಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಸಂಬಂಧ ಬಸವನಹಳ್ಳಿ ಠಾಣೆಯಲ್ಲಿ ಕೆಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರಿನಲ್ಲಿ ನಿಷೇಧಾಜ್ಞೆ ಮುಂದುವರೆಸಿದ್ದು, ಇಂದು ನಗರದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು, ವಾಹನ ಸಂಚಾರ ನಡೆಯುತ್ತಿದೆ. ನಗರದಲ್ಲಿ ಗಸ್ತು ತಿರುಗಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವಲ್ಲಿ ಶ್ರಮಿಸಿದ ಎಸ್‍ಪಿ ಅಣ್ಣಮಲೈ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ನಿನ್ನೆ ನಡೆದ ಘರ್ಷಣೆ ಸಂದರ್ಭದಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರವೀಣ್ ಮತ್ತು ಚಂದನ್ ಅವರ ಆರೋಗ್ಯ ವಿಚಾರಿಸಿದ ಶಾಸಕ ಸಿ.ಟಿ.ರವಿ, ನಗರದಲ್ಲಿ ಯಾವುದೇ ಕಾರಣಕ್ಕೂ ಅಶಾಂತಿಗೆ ಅವಕಾಶ ಮಾಡಿಕೊಡಬಾರದು, ಶಾಂತಿ ಕದಡಲು ಯತ್ನಿಸುವವರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಶೇ.99ರಷ್ಟು ದತ್ತ ಜಯಂತಿ ಶಾಂತಿಯುತವಾಗಿ ನಡೆದಿದೆ. ಯಾರೋ ಒಂದಿಬ್ಬರು ನಕಲಿ ಗೋರಿಗೆ ಹಾನಿ ಮಾಡಿದ್ದಾರೆ. ವಿವಾದಿತ ಸ್ಥಳದಲ್ಲಿರುವ ಯಾವುದೇ ಗೋರಿಗೆ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

Facebook Comments

Sri Raghav

Admin