‘ಭೂಮಿಪುತ್ರ’ಗೆ ಅದ್ಧೂರಿ ಮುಹೂರ್ತ

ಈ ಸುದ್ದಿಯನ್ನು ಶೇರ್ ಮಾಡಿ

Bhomiputra--01

ಬೆಂಗಳೂರು, ಮೇ 9– ರಾಜಕೀಯ ಕ್ಷೇತ್ರದಲ್ಲಿ ಭಾರೀ ಕುತೂಹಲ ಮೂಡಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯ ಜೀವನಾಧಾರಿತ ಭೂಮಿ ಪುತ್ರನ ಮುಹೂರ್ತವು ಇಂದು ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ 20 ತಿಂಗಳ ಕಾರ್ಯವೈಖರಿ, ಅವರ ವ್ಯಕ್ತಿತ್ವದ ಪ್ರಮುಖ ವಿಚಾರಗಳನ್ನು ತೆರೆ ಮೇಲೆ ತೋರಿಸುವ ಕಾರ್ಯವನ್ನು ಈ ಸಿನಿಮಾ ಮೂಲಕ ಮಾಡಲಾಗುತ್ತಿದೆ. ಎಸ್.ನಾರಾಯಣ್ ನಿರ್ದೇಶಿಸುತ್ತಿದ್ದು, ಪ್ರಭುಕುಮಾರ್ (ಬಾಬುರೆಡ್ಡಿ) ಚಿತ್ರ ನಿರ್ಮಿಸುತ್ತಿದ್ದಾರೆ. ದಕ್ಷಿಣ ಭಾರತದ ಆ್ಯಕ್ಷನ್ ಹೀರೋ ಅರ್ಜುನ್ ಸರ್ಜಾ ನಾಯಕ ನಟನಾಗಿ ಸಿಎಂ ಪಾತ್ರ ನಿರ್ವಹಿಸುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಚನ್ನಮ್ಮ ದೇವೇಗೌಡರು ಜ್ಯೋತಿ ಬೆಳಗಿಸಿ ಭೂಮಿಪುತ್ರ ಚಿತ್ರದ ಮುಹೂರ್ತ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ನನ್ನ ಮಗ ಕುಮಾರಸ್ವಾಮಿ ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ವಿಶೇಷ ಛಾಪು ಮೂಡಿಸಿದ್ದಾನೆ. ಕುಮಾರಸ್ವಾಮಿ ನಿರ್ಮಿಸಿ, ಎಸ್.ನಾರಾಯಣ್ ನಿರ್ದೇಶಿಸಿದ ಸೂರ್ಯವಂಶ, ಚಂದ್ರ ಚಕೋರಿ ಚಿತ್ರಗಳನ್ನು ಈ ಸಂಜೆಯ ವೆಂಕಟೇಶ್ ಅವರು ನನ್ನನ್ನು ಕರೆದುಕೊಂಡು ಹೋಗಿ ತೋರಿಸಿದ್ದರು. ಚಿತ್ರಗಳು ಸೊಗಸಾಗಿ ಮೂಡಿರುವುದರ ಜತೆಗೆ ಅರ್ಥಪೂರ್ಣವಾಗಿದ್ದವು. ಅದೇ ರೀತಿ ರಾಜಕೀಯವಾಗಿಯೂ ವಿಶೇಷ ಛಾಪು ಮೂಡಿಸಿದ್ದಾರೆ. ಕುಮಾರಸ್ವಾಮಿ ರಾಜಕೀಯದ ಸಾಧಕ-ಬಾಧಕಗಳ ಜತೆಗೆ ಸಮಾಜಮುಖಿ ಕೆಲಸಗಳು, ಯೋಜನೆಗಳನ್ನು ಜನರಿಗೆ ತಲುಪಿಸುವ ನಿರೀಕ್ಷೆ ಇಟ್ಟುಕೊಂಡಿದ್ದು, ಚೆನ್ನಾಗಿ ಮೂಡಿ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಿರ್ದೇಶಕ ಎಸ್.ನಾರಾಯಣ್ ಮಾತನಾಡಿ, ಈ ಸಿನಿಮಾ ಬಗ್ಗೆ ಕುಮಾರಸ್ವಾಮಿಯವರ ಬಳಿ ಮಾತನಾಡಿದಾಗ ಇದು ರಾಜಕೀಯ ಉದ್ದೇಶವಾಗಬಹುದು ಬೇಡ ಎಂದಿದ್ದರು. ಅವರ ಮನವೊಲಿಸಿ ಈ ಚಿತ್ರ ಮಾಡುವುದಾಗಿ ಒಪ್ಪಿಸಿದ್ದೇವೆ. ವಿಶೇಷವೆಂದರೆ, ಕುಮಾರಸ್ವಾಮಿಯವರು ಓದಿದ ನ್ಯಾಷನಲ್ ಕಾಲೇಜು ಆವರಣದಲ್ಲೇ ಚಿತ್ರಕ್ಕೆ ಮುಹೂರ್ತ ನೆರವೇರಿಸಿದ್ದು ಸಂತಸ ತಂದಿದೆ. ಚಿತ್ರ ಖಂಡಿತ ಗೆಲುವು ಸಾಧಿಸಲಿದೆ ಎಂದರು.  ನಾಯಕ ನಟ ಅರ್ಜುನ್ ಸರ್ಜಾ ಮಾತನಡಿ, ನಾನು ಕೂಡ ಇದೇ ಶಾಲೆಯಲ್ಲಿ ಓದಿದ್ದು, ಇಲ್ಲೇ ಮುಹೂರ್ತ ಪ್ರಾರಂಭಿಸಿದ್ದು ಖುಷಿ ತಂದಿದೆ. ತಮಿಳಿನ ಮೊದಲ್‍ವನ್ ಚಿತ್ರದಲ್ಲಿ ಒಂದು ದಿನದ ಮುಖ್ಯಮಂತ್ರಿ ಪಾತ್ರ ನಿರ್ವಹಿಸಿದ್ದೆ. ಈಗ 20 ತಿಂಗಳ ಸಿಎಂ ಪಾತ್ರ ಮಾಡುತ್ತಿದ್ದೇನೆ ಎಂದರು.

ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ನನಗೆ ರಾಜಕೀಯದ ಗುಂಗು ಇಲ್ಲ. ಕಥೆ ಕೇಳಿದಾಗ ಇಷ್ಟವಾಯಿತು, ತುಂಬ ಆಸಕ್ತಿದಾಯಕವಾಗಿದೆ. ಅಲ್ಲದೆ, ಒಂದೊಳ್ಳೆ ವ್ಯಕ್ತಿತ್ವ ಹೊಂದಿರುವ ಸಾಧಕ ಸಿಎಂ ಪಾತ್ರ ಮಾಡುತ್ತಿರುವುದು ಖುಷಿಯಾಗಿದೆ. ಸಿನಿಮಾ ಅತ್ಯುತ್ತಮವಾಗಿ ಮೂಡಿ ಬರಲಿದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.  ಮುಹೂರ್ತ ಸಮಾರಂಭದಲ್ಲಿ ಚಿತ್ರರಂಗದ ಮತ್ತು ರಾಜಕೀಯ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin