ಭೂ ಕಬಳಿಕೆದಾರರ ಮೇಲೆ ಬೀಳಲಿದೆ ಕ್ರಿಮಿನಲ್ ಕೇಸ್, ಸ್ಥಿರ-ಚರಾಸ್ತಿ ಜಪ್ತಿಗೂ ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

kbkoli

ಬೆಳಗಾವಿ(ಸುವರ್ಣಸೌಧ), ನ.22- ಬೆಂಗಳೂರು ಸುತ್ತಮುತ್ತ ಸರ್ಕಾರಿ ಜಾಗವನ್ನು ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರ ಸ್ಥಿರ ಮತ್ತು ಚರಾಸ್ತಿಯನ್ನು ಜಪ್ತಿ ಮಾಡಿ ಕ್ರಮಕೈಗೊಳ್ಳಬೇಕೆಂದು ಸ್ಪೀಕರ್ ಕೆ.ಬಿ.ಕೋಳಿವಾಡ ನೇತೃತ್ವದ ಕೆರೆ ಒತ್ತುವರಿ ಅಧ್ಯಯನ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿಂದು 10 ಸಾವಿರ ಪುಟಗಳುಳ್ಳ ವಿವರಗಳನ್ನು ನೀಡಿದ ಕೋಳಿವಾಡ ನೇತೃತ್ವದ ಸಮಿತಿ, ಭೂಕಬಳಿಕೆದಾರರ ವಿರುದ್ಧ ನ್ಯಾಯಾಂಗ ತನಿಖೆ ನಡೆಸಬೇಕು, ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಕಾನೂನು ಕ್ರಮಕೈಗೊಂಡು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಸಲಹೆ ಮಾಡಿದೆ.

ಭೂ ಒತ್ತುವರಿ ದಾರರಿಂದ ಸರ್ಕಾರಿ ಜಾಗವನ್ನು ವಶಕ್ಕೆ ಪಡೆದು ಭವಿಷ್ಯದ ಪೀಳಿಗೆಗೆ ಭೂಮಿಯನ್ನು ಉಳಿಸಬೇಕೆಂದು ಅವರು ಹೇಳಿದ್ದಾರೆ. 20.07.2014 ರಂದು ಕೆರೆ ಒತ್ತುವರಿ ಅಧ್ಯಯನ ಸಮಿತಿ ರಚನೆಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಸರ್ಕಾರದ ಎಲ್ಲಾ ಇಲಾಖೆಗಳೊಂದಿಗೆ ಚರ್ಚೆ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಯಿತು. ಕೆರೆ, ರಾಜಕಾಲುವೆ, ಕುಂಟೆ ಮೂರು ವಿಭಾಗಗಳನ್ನು ಮಾಡಿ ಒತ್ತುವರಿಯಾಗಿರುವ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಸುಮಾರು 300 ಸರ್ವೇಯರ್‍ಗಳಿಂದ ಮಾಹಿತಿ ಸಂಗ್ರಹಿಸಿ ಸಮಿತಿ ವರದಿಯನ್ನು ರೂಪಿಸಿದೆ. ವಿಶೇಷವಾಗಿ ಬಿಡಿಎ, ಬಿಬಿಎಂಪಿ, ಕಂದಾಯ ಇಲಾಖೆ, ಕಾನೂನು ಇಲಾಖೆ ಸಂಬಂಧಿಸಿದ ಎಲ್ಲಾ ಇಲಾಖೆಗಳೊಂದಿಗೆ ಕೂಲಂಕಷವಾಗಿ ಚರ್ಚಿಸಿ ಕಬಳಿಕೆಯಾಗಿರುವ ಭೂಮಿಯ ಸ್ವವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಕೆ.ಬಿ.ಕೋಳಿವಾಡ ಅವರು ಹೇಳಿದರು.

ಬೆಂಗಳೂರು ನಗರದಲ್ಲಿ 837 ಕೆರೆಗಳಿದ್ದು, ಅದರಲ್ಲಿ ಬರೋಬ್ಬರಿ 714 ಕೆರೆಗಳು ಒತ್ತುವರಿಯಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1507 ಕೆರೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕೆರೆಗಳು ಒತ್ತುವರಿಯಾಗಿವೆ. ಶೇ.25ಕ್ಕೂ ಹೆಚ್ಚು ಪ್ರಮಾಣದಲ್ಲಿ ಒತ್ತುವರಿಯಾಗಿದ್ದು, ಉಳಿದ 75ರಷ್ಟು ಕೆರೆ-ಕುಂಟೆಗಳನ್ನು ರಕ್ಷಿಸಿ ಭವಿಷ್ಯದ ಪೀಳಿಗೆಗೆ ಉಳಿಸಬೇಕಾದದ್ದು ನಮ್ಮ ಆದ್ಯತೆಯಾಗಿದೆ ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ. ಸರ್ಕಾರ ಮತ್ತು ಖಾಸಗಿಯವರು ಕೆರೆ ಒತ್ತುವರಿಯನ್ನು ಮಾಡಿಕೊಂಡಿರುವ ವಿವರಗಳನ್ನು ಪ್ರತ್ಯೇಕವಾಗಿ ನೀಡಿದ ಅವರು, ಖಾಸಗಿಯವರು ನಗರದಲ್ಲಿ 11,764 ಕಡೆ 2,340.36 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅದೇ ರೀತಿ ಗ್ರಾಮಾಂತರ ಜಿಲ್ಲೆಯಲ್ಲಿ 5,189ಕಡೆ 7,354 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಬೆಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ 23 ಕೆರೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ಲೇಔಟ್‍ಗಳನ್ನು ನಿರ್ಮಾಣ ಮಾಡಿ ನಿವೇಶನಗಳನ್ನೂ ಕೂಡ ಹಂಚಿಕೆ ಮಾಡಿದೆ ಎಂದು ತಿಳಿಸಿದರು.

ಎಲ್ಲೆಲ್ಲಿ ಕೆರೆ ಒತ್ತುವರಿ ಮಾಡಿ ಮನೆ, ಅಪಾರ್ಟ್‍ಮೆಂಟ್ ನಿರ್ಮಿಸಲಾಗಿದೆಯೋ ಅವುಗಳನ್ನು ತೆರವುಗೊಳಿಸದೆ ಅಲ್ಲಿ ವಾಸಿಸುತ್ತಿರುವವರಿಗೆ ಲೀಸ್ ಆಧಾರದಲ್ಲಿ ಸೆಟ್ಲ್‍ಮೆಂಟ್ ಮಾಡಬೇಕೆಂದು ಸಮಿತಿ ಸಲಹೆ ಮಾಡಿದೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿಯಲ್ಲಿ ಮನೆ, ಅಪಾರ್ಟ್‍ಮೆಂಟ್ ನಿರ್ಮಿಸಿ ಭೂ ಕಬಳಿಕೆದಾರರು ಅಮಾಯಕರಿಗೆ ವಂಚಿಸಿದ್ದಾರೆ. ಮನೆ, ಅಪಾರ್ಟ್‍ಮೆಂಟ್‍ಗಳನ್ನು ತೆರವುಗೊಳಿಸಿದರೆ ಅಮಾಯಕ ನಿವಾಸಿಗಳಿಗೆ ಅನ್ಯಾಯವಾಗುತ್ತದೆ. ವಂಚಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ನಿವಾಸಿಗಳಿಗೆ ಲೀಸ್ ಆಧಾರದಲ್ಲಿ ಸೆಟ್ಲ್‍ಮೆಂಟ್ ಮಾಡಬೇಕು ಎಂದು ತಿಳಿಸಿದರು. ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದರೆ ಅದನ್ನು ಸರ್ಕಾರ ವಶಪಡಿಸಿಕೊಳ್ಳಬೇಕು. ಬಿಲ್ಡರ್‍ಗಳು, ಡೆವಲಪರ್‍ಗಳು, ಅಧಿಕಾರಿಗಳು ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ತಿಳಿಸಿದರಲ್ಲದೆ, ರಾಜಕಾಲುವೆ ಒತ್ತುವರಿ ತೆರವು ಮಾಡಬೇಕು. ಕೆರೆಗಳ ಒತ್ತುವರಿ ತೆರವು ಮಾಡಲು ಸಾಧ್ಯವಾಗದ ಕಡೆ ನಿರ್ಜೀವ ಕೆರೆಗಳೆಂದು ಪರಿಗಣಿಸಬೇಕೆಂದು ತಿಳಿಸಿದರು. ಶಾಸಕರಾದ ಎನ್.ಎ.ಹ್ಯಾರೀಸ್, ಬಿ.ಆರ್.ಯಾವಗಲ್, ಕೆ.ಎಸ್.ಪುಟ್ಟಣ್ಣಯ್ಯ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Facebook Comments

Sri Raghav

Admin